ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಚುನಾವಣಾ ಕಾರ್ಯಕ್ರಮ ರದ್ದು; ನಾಳೆ ಬೆಳಿಗ್ಗೆ 9ಕ್ಕೆ ಕೊವಿಡ್ ಬಗ್ಗೆ ಉನ್ನತ ಮಟ್ಟದ ಸಭೆ

Narendra Modi: ಪ್ರಧಾನಿ ಮೋದಿ ಏಪ್ರಿಲ್ 23 ರಂದು ನವದೆಹಲಿಯಲ್ಲಿ ಕೊವಿಡ್ -19 ಕುರಿತು ಉನ್ನತ ಮಟ್ಟದ ಸಭೆಗಳ ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ನಡೆಸಲಿರುವ ಎಲ್ಲ ಕಾರ್ಯಕ್ರಮಗಳು ರದ್ದು ಆಗಿದೆ. 

  • TV9 Web Team
  • Published On - 18:14 PM, 22 Apr 2021
ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಚುನಾವಣಾ ಕಾರ್ಯಕ್ರಮ ರದ್ದು; ನಾಳೆ ಬೆಳಿಗ್ಗೆ 9ಕ್ಕೆ ಕೊವಿಡ್ ಬಗ್ಗೆ ಉನ್ನತ ಮಟ್ಟದ ಸಭೆ
ನರೇಂದ್ರ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ನಾಳೆ ನಡೆಯಲಿರುವ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಕೊವಿಡ್ ಸಾಂಕ್ರಾಮಿಕದ ಸ್ಥಿತಿಗತಿಗಳ ಬಗ್ಗೆ ನಾಳೆ ಉನ್ನತ ಮಟ್ಟದ ಸಭೆ ನಡೆಸಲಿದ್ದೇನೆ. ಹಾಗಾಗಿ ನಾನು ಪಶ್ಚಿಮ ಬಂಗಾಳಕ್ಕೆ ಹೋಗುವುದಿಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಏಪ್ರಿಲ್ 23 ರಂದು ನವದೆಹಲಿಯಲ್ಲಿ ಕೊವಿಡ್ -19 ಕುರಿತು ಉನ್ನತ ಮಟ್ಟದ ಸಭೆಗಳ ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ನಡೆಸಲಿರುವ ಎಲ್ಲ ಕಾರ್ಯಕ್ರಮಗಳು ರದ್ದು ಆಗಿದೆ. ದೇಶದಲ್ಲಿ ಕೊವಿಡ್ -19 ಪ್ರಕರಣಗಳು ಏರಿಕೆ ಕಂಡಿದ್ದು, ಇದು ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಅತೀವ ಒತ್ತಡವನ್ನು ಬೀರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ 9 ಗಂಟೆಗೆ ಕೊವಿಡ್ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊವಿಡ್ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಆಕ್ಸಿಜನ್ ಉತ್ಪಾದಕ ಸಂಸ್ಥೆಗಳ ಜತೆ ಮೋದಿ ಸಭೆ ನಡೆಸಲಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 3.14 ಲಕ್ಷ ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ವಿಶ್ವದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಸೋಂಕು ದಾಖಲಾದ ದೇಶ ಎಂದು ಭಾರತ ಗುರುತಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ದಾಖಲಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1.59 ಲಕ್ಷದ ಗಡಿ ದಾಟಿದೆ.

ಸದ್ಯ ದೇಶದ ಆರೋಗ್ಯ ವ್ಯವಸ್ಥೆಯಲ್ಲೂ ಏರುಪೇರಾಗಿದ್ದು ಆಕ್ಸಿಜನ್​ ಕೊರತೆ, ಐಸಿಯು ಕೊರತೆ, ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ, ರೆಮ್​ಡೆಸಿವರ್​ ಇಂಜೆಕ್ಷನ್ ಅಭಾವ ಎದುರಾಗಿದೆ. ಏಪ್ರಿಲ್ 15 ರಿಂದೀಚೆಗೆ ಪ್ರತಿನಿತ್ಯ ಸುಮಾರು 2 ಲಕ್ಷ ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಿದ್ದು, ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ಹೋದಾಗ ಇನ್ನೂ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳಲಿವೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ರಾಜ್ಯಗಳು ಕಳೆದ ಬಾರಿಯಂತೆಯೇ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳ ಮೊರೆ ಹೋಗಿದ್ದು, ನಿಯಮ ಪಾಲಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿವೆ.

ಇದಕ್ಕೂ ಮುನ್ನ ದೇಶವೊಂದರಲ್ಲಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ 2,97,430 ಆಗಿದ್ದು, ಜನವರಿ ತಿಂಗಳಲ್ಲಿ ಅಮೆರಿಕಾ ಇದಕ್ಕೆ ಸಾಕ್ಷಿಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದಿರುವ ಭಾರತ 3.14 ಲಕ್ಷ ಹೊಸ ಪ್ರಕರಣಗಳಿಗೆ ತೆರೆದುಕೊಳ್ಳುವ ಮೂಲಕ ಆತಂಕವನ್ನು ಸೃಷ್ಟಿಸಿದೆ. ಈ ಹೊತ್ತಿನಲ್ಲಿ ಲಾಕ್​ಡೌನ್ ಮಾಡುವುದು ದೇಶದ ಆರ್ಥಿಕತೆಯ ದೃಷ್ಟಿಯಿಂದ ಕಠಿಣ ನಿರ್ಧಾರವಾಗಿರುವುದರಿಂದ ಸರ್ಕಾರ ಕೂಡ ಏಕಾಏಕಿ ಲಾಕ್​ಡೌನ್ ಮಾಡಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ ಜನರು ಎಚ್ಚರಿಕೆಯಿಂದ ಇದ್ದು ತಮ್ಮನ್ನು ತಾವು ಕೊರೊನಾದಿಂದ ರಕ್ಷಿಸಿಕೊಳ್ಳಬೇಕು, ಲಾಕ್​ಡೌನ್ ಏನಿದ್ದರೂ ಕೊನೆಯ ಅಸ್ತ್ರ ಎಂದು ಹೇಳಿದ್ದಾರೆ.

ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕೊವಿಡ್ ಸೋಂಕಿನ ಕುರಿತು ಗಂಭೀರ ನಿಲುವು ತಳೆದಿರುವ ಸುಪ್ರೀಂಕೋರ್ಟ್ ಗುರುವಾರ  ಕೊವಿಡ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು  ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಮತ್ತು ನ್ಯಾಯಾಧೀಶರಾದ ಎಲ್.ನಾಗೇಶ್ವರ ರಾವ್, ಎಸ್.ರವೀಂದ್ರ ಭಟ್ ಅವರಗಳಿದ್ದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಈ ಕುರಿತು ನೊಟೀಸ್ ನೀಡಿದೆ. ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯ ಕುರಿತು ದೇಶದ ವಿವಿಧ ಹೈಕೋರ್ಟ್​ಗಳಲ್ಲಿ ನಡೆಯುತ್ತಿರುವ ವಿಚಾರಣೆಗಳು ಸಹ ಸರ್ವೋಚ್ಛ ನ್ಯಾಯಾಲಕ್ಕೆ ರವಾನೆಯಾಗುವ ಸಾಧ್ಯತೆಯಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ಪ್ರಕಾರ ದೇಶದ 6 ಹೈಕೋರ್ಟ್​ಗಳಲ್ಲಿ ಇಂತಹುದೇ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಕೊವಿಡ್ ಸೋಂಕಿತರಿಗೆ ಚಿಕಿತ್ಸೆ; ಕೇಂದ್ರಕ್ಕೆ ನೊಟೀಸ್ ನೀಡಿದ ಸುಪ್ರೀಂಕೋರ್ಟ್

Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ