ಪಶ್ಚಿಮ ಬಂಗಾಳ ವಿಧಾನಸಭೆಯ 6ನೇ ಹಂತದ ಚುನಾವಣೆ ಮುಕ್ತಾಯ, ಶೇ 79.09 ಮತದಾನ
West Bengal Assembly Elections 2021: ಉತ್ತರ ಪರಗಣ, ನಾಡಿಯಾ, ಉತ್ತರ ದಿನಜ್ಪುರ್, ಪೂರ್ಬ ಬರ್ಧಮಾನ್ ಸೇರಿದಂತೆ 43 ವಿಧಾನಸಭಾ ಕ್ಷೇತ್ರಗಳಲ್ಲಿನ 14,480 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. 6ನೇ ಹಂತದ ಚುನಾವಣೆಯಲ್ಲಿ 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ 6ನೇ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು ಸಂಜೆ 5 ಗಂಟೆಯವರೆಗೆ ಪ್ರತಿ ಶೇಕಡಾ 79 ಕ್ಕಿಂತ ಹೆಚ್ಚು ಮತದಾನವಾಗಿದೆ. 43 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ವಿಧಾನಸಭಾ ಚುನಾವಣೆಯ ಆರನೇ ಹಂತದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 79.09 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತಕ್ಷೇತ್ರದ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಲಾಗಿದ್ದರೂ ಸಹ, ಕ್ಷೇತ್ರಗಳಾದ್ಯಂತದ 14,480 ಮತಗಟ್ಟೆಗಳಲ್ಲಿ ಒಟ್ಟು 7,466 ಅನ್ನು ವೆಬ್‌ಕಾಸ್ಟಿಂಗ್ ಮೂಲಕ ನೇರ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಯ ಸಂದರ್ಭದಲ್ಲಿ, ಗುರುವಾರ ತನಕ 316.47 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಕೊಡುಗೆ ಎಲ್ಲವೂ ಇದರಲ್ಲಿ ಸೇರಿದೆ. 2016 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 44.33 ಕೋಟಿ ಮುಟ್ಟುಗೋಲು ಹಾಕಲಾಗಿದ್ದು, ಈ ಬಾರಿ ಅದರ ಏಳು ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳು ಸೂಚಿಸಿವೆ.
ಈ ಹಂತದಲ್ಲಿ ಒಟ್ಟು 14,480 ಬ್ಯಾಲೆಟ್ ಯೂನಿಟ್ (ಬಿಯು), ಅನೇಕ ನಿಯಂತ್ರಣ ಘಟಕಗಳು (ಸಿಯು) ಮತ್ತು ವಿವಿಪಿಟಿಗಳನ್ನು ಬಳಸಲಾಗಿದೆ.
ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭ ಆಗಿತ್ತು. ಉತ್ತರ ಪರಗಣ, ನಾಡಿಯಾ, ಉತ್ತರ ದಿನಜ್ಪುರ್, ಪೂರ್ಬ ಬರ್ಧಮಾನ್ ಸೇರಿದಂತೆ 43 ವಿಧಾನಸಭಾ ಕ್ಷೇತ್ರಗಳಲ್ಲಿನ 14,480 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. 6ನೇ ಹಂತದ ಚುನಾವಣೆಯಲ್ಲಿ 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತೀಯಜನತಾ ಪಕ್ಷದ ಉಪಾಧ್ಯಕ್ಷ ಮುಕುಲ್ ರಾಯ್, ತೃಣಮೂಲ ಕಾಂಗ್ರೆಸ್ ಪಕ್ಷದ ಸಚಿವ ಜ್ಯೋತಿಪ್ರಿಯೊ ಮಲ್ಲಿಕ್, ಚಂದ್ರಿಮಾ ಭಟ್ಟಾಚಾರ್ಯ,ಸಿಪಿಐ(ಎಂ) ನಾಯಕ ತನ್ಮಯ್ ಭಟ್ಟಾಚಾರ್ಯ ಮೊದಲಾದವರು ಸ್ಪರ್ಧಿಸುತ್ತಿದ್ದಾರೆ. ಅದೇ ವೇಳೆ ಬರಾಕ್ಪೊರ್ನಿಂದ ಕಣಕ್ಕಿಳಿದಿರುವ ಖ್ಯಾತ ಸಿನಿಮಾ ನಿರ್ದೇಶಕ ರಾಜ್ ಚಕ್ರವರ್ತಿ, ಕೃಷ್ಣಾನಗರ್ ಚುನಾವಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ನಟಿ ಕೌಶಿನಿ ಮುಖರ್ಜಿ ಈ ಹಂತದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.
ಮಧ್ಯಾಹ್ನ 1.30ರವರೆಗೆ ಶೇ 57.30 ಮತದಾನ ದಾಖಲಾಗಿದೆ. 11ಗಂಟೆಯ ಹೊತ್ತಿಗೆ ಶೇ37.27 ಮತದಾನ ದಾಖಲಾಗಿದ್ದು, ಬೆಳಗ್ಗೆ 9.30ಕ್ಕೆ ಶೇ 17ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಕೊವಿಡ್ -19 ಪ್ರಕರಣ ಏರಿಕೆಯಾಗುತ್ತಿರುವ ಮಧ್ಯೆಯೇ ಆರನೇ ಹಂತದ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿ ಆಗಿದ್ದು, ಒಂದೇ ದಿನ 9,819 ಮಂದಿಗೆ ಕೊವಿಡ್ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 2.95 ಲಕ್ಷ ಕೋವಿಡ್ ಪ್ರಕರಣಗಳು ಮತ್ತು 2,023 ಸಾವು ದಾಖಲಾಗಿವೆ.
ಕಂಚ್ರಪರದಲ್ಲಿ ಮುಕುಲ್ ರಾಯ್ ಮತದಾನ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಕಂಚ್ರಪರ ಮುನ್ಸಿಪಲ್ ಪಾಲಿಟೆಕ್ನಿಕ್ ಹೈಸ್ಕೂಲ್ನ 141ನೇ ಮತಗಟ್ಟೆಯಲ್ಲಿಮತ ಚಲಾಯಿಸಿದ್ದಾರೆ.
West Bengal: BJP national vice president Mukul Roy casts his vote for the sixth phase of state Assembly polls at booth number 141 – at Kanchrapara Municipal Polytechnic High School – in Kanchrapara of North 24 Parganas district.#WestBengalElections pic.twitter.com/gDp5z1VYsS
— ANI (@ANI) April 22, 2021
ಉತ್ತರ ದಿನಜ್ಪುರ್ ನಲ್ಲಿ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉತ್ತರ ದಿನಜ್ಪುರ್ ರಾಯ್ ಗಂಜ್ ಕೊರೊನೇಷನ್ ಹೈಸ್ಕೂಲ್ ನ 134ನೇ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು ಕೆಲ ಹೊತ್ತು ಮತದಾನಕ್ಕೆ ಸಮಸ್ಯೆಯಾಗಿದೆ.
ಇದನ್ನೂ ಓದಿ: ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ: 6 ನೇಹಂತದ ಚುನಾವಣೆಯಲ್ಲಿ ಬಿಜೆಪಿ, ಟಿಎಂಸಿ ನಡುವೆ ನಡೆಯಲಿದೆ ಪ್ರಬಲ ಪೈಪೋಟಿ
Published On - 8:28 pm, Thu, 22 April 21