ಲೈಂಗಿಕ ದೌರ್ಜನ್ಯಕ್ಕೂ ಮುನ್ನ ಆಕೆ ಬಳಿ ನಾನು ನಿನ್ನ ಬಾಸ್, ನಾನು ಏನು ಬೇಕಿದ್ರೂ ಮಾಡಬಹುದು ಎಂದಿದ್ದ ತರುಣ್ ತೇಜ್​ಪಾಲ್

ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. 2013ರ ಪ್ರಕರಣದಲ್ಲಿ ಅವರ ಕ್ಷಮೆಯಾಚನೆಯ ಇ-ಮೇಲ್ ತೀರ್ಪಿಗೆ ಪ್ರಮುಖ ತಿರುವಾಯಿತು. ಇದು ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ POSH ಕಾಯ್ದೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಅಧಿಕಾರದ ದುರುಪಯೋಗಕ್ಕೆ ಈ ತೀರ್ಪು ಬಲವಾದ ಎಚ್ಚರಿಕೆ. ಸಂತ್ರಸ್ತೆಯ ಸುದೀರ್ಘ ಹೋರಾಟಕ್ಕೆ ನ್ಯಾಯ ಸಿಕ್ಕಿದೆ.

ಲೈಂಗಿಕ ದೌರ್ಜನ್ಯಕ್ಕೂ ಮುನ್ನ ಆಕೆ ಬಳಿ ನಾನು ನಿನ್ನ ಬಾಸ್, ನಾನು ಏನು ಬೇಕಿದ್ರೂ ಮಾಡಬಹುದು ಎಂದಿದ್ದ ತರುಣ್ ತೇಜ್​ಪಾಲ್
ತರುಣ್ ತೇಜ್​ಪಾಲ್

Updated on: Aug 07, 2026 | 8:37 AM

ಪಣಜಿ, ಆಗಸ್ಟ್​ 07: ಗೋವಾದ ಪಂಚತಾರಾ ಹೋಟೆಲ್​ ಒಂದರ ಲಿಫ್ಟ್​ನಲ್ಲಿ ತಮ್ಮ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆ ಸಂಸ್ಥಾಪಕ ಹಾಗೂ ಮಾಜಿ ಸಂಪಾದಕ ತರುಣ್ ತೇಜ್​ಪಾಲ್(Tarun Tejpal)​ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ನಡೆದಿದ್ದು, 2013ರಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಾಧಾರಗಳ ಪೈಕಿ, ಘಟನೆಯ ನಂತರ ತೇಜ್‌ಪಾಲ್ ಸಂತ್ರಸ್ತೆಗೆ ಬರೆದಿದ್ದ ಕ್ಷಮೆಯಾಚನೆಯ ಇ-ಮೇಲ್ ಈ ಐತಿಹಾಸಿಕ ತೀರ್ಪಿಗೆ ಅತ್ಯಂತ ಪ್ರಮುಖ ತಿರುವಾಯಿತು.

ಲಿಫ್ಟ್‌ನಲ್ಲಿ ನಡೆದ ಘಟನೆ: 2013 ರ ನವೆಂಬರ್ 7 ಮತ್ತು 8 ರಂದು ಗೋವಾದಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ತಮ್ಮ ಸಂಪಾದಕ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಿರಿಯ ಮಹಿಳಾ ಪತ್ರಕರ್ತೆಯ ಮೇಲೆ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಸಂತ್ರಸ್ತೆ ತೇಜ್‌ಪಾಲ್ ಅವರನ್ನು ತಡೆಯಲು ಯತ್ನಿಸಿದಾಗ, ತೇಜ್‌ಪಾಲ್ ನಾನು ನಿನ್ನ ಬಾಸ್, ನಾನು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾಗಿ ಬರೆದಿದ್ದ ಇ-ಮೇಲ್ ಸಂಭಾಷಣೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು.

ಬೇಷರತ್ ಕ್ಷಮೆಯಾಚನೆ: ಘಟನೆ ನಡೆದ ಕೆಲವೇ ದಿನಗಳಲ್ಲಿ ತೇಜ್‌ಪಾಲ್ ಸಂತ್ರಸ್ತೆಗೆ ಕಳುಹಿಸಿದ ಇಮೇಲ್‌ನಲ್ಲಿ,ನನ್ನ ನಿರ್ಧಾರದ ವೈಫಲ್ಯ ಮತ್ತು ನಾಚಿಕೆಗೇಡಿನ ವರ್ತನೆಗಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ. ಕಚೇರಿಯ ನಂಬಿಕೆ ಮತ್ತು ಗೌರವದ ಸಂಬಂಧವನ್ನು ನಾನು ಉಲ್ಲಂಘಿಸಿದ್ದೇನೆ ಎಂದು ಬರೆದುಕೊಂಡಿದ್ದರು.

ಮತ್ತಷ್ಟು ಓದಿ: Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು

ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಅವರು ಈ ಇಮೇಲ್ ಅನ್ನು ನ್ಯಾಯಾಲಯದ ಮುಂದೆ ಪ್ರಬಲ ಸಾಕ್ಷಿಯಾಗಿ ಮಂಡಿಸಿ, ಆರೋಪಿಯು ತನ್ನ ಕೃತ್ಯವನ್ನು ಇ-ಮೇಲ್ ಮೂಲಕ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದು ವಾದಿಸಿದರು. 10 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ62 ವರ್ಷದ ತೇಜ್‌ಪಾಲ್, ಕಳೆದ 13 ವರ್ಷಗಳಿಂದ ನನ್ನನ್ನು  ಗುರಿ ಮಾಡಲಾಗುತ್ತಿದೆ. ತೆಹಲ್ಕಾ ಮಾಡಿದ ಪತ್ರಿಕೋದ್ಯಮದ ತನಿಖೆಗಳಿಂದಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಚಾರಣಾ ನ್ಯಾಯಾಲಯದ ಖುಲಾಸೆಯನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತೇಜ್‌ಪಾಲ್ ವಕೀಲರು ತಿಳಿಸಿದ್ದಾರೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯುವ ಕಾನೂನಿನ (POSH Act) ಇತಿಹಾಸದಲ್ಲಿ ಈ ಪ್ರಕರಣ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಸಂಸ್ಥೆಯ ವರಿಷ್ಠರು ಅಥವಾ ‘ಬಾಸ್’ ಸ್ಥಾನದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಿರಿಯ ನೌಕರರ ಮೇಲೆ ಶೋಷಣೆ ನಡೆಸುವುದಕ್ಕೆ ಈ ತೀರ್ಪು ಬಲವಾದ ಎಚ್ಚರಿಕೆಯಾಗಿದೆ.

ಸಂತ್ರಸ್ತೆಯ ಸುದೀರ್ಘ ಹೋರಾಟ: ಕಳೆದ 13 ವರ್ಷಗಳಿಂದ ಅತ್ಯಂತ ಪ್ರಭಾವಿ ಮಾಧ್ಯಮ ವ್ಯಕ್ತಿಯೊಬ್ಬರ ವಿರುದ್ಧ ಸತತ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರರು ಶ್ಲಾಘಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us