ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಜೂನ್ 18ರಂದು ವೈದ್ಯಕೀಯ ಸಂಘದಿಂದ ದೇಶವ್ಯಾಪಿ ಪ್ರತಿಭಟನೆ
ಸರ್ಕಾರವು ವೈದ್ಯರಿಗೆ ಭದ್ರತಾ ಕಾನೂನನ್ನು ತರಬೇಕು. ಸಿಆರ್ಪಿಸಿ ಹಾಗೂ ಐಪಿಸಿ ಅಡಿಯಲ್ಲಿ ರಕ್ಷಣೆ ನೀಡುವುದರಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯ ರಕ್ಷಣಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಜಯಲಾಲ್ ಒತ್ತಾಯಿಸಿದ್ದಾರೆ.
ದೆಹಲಿ: ಭಾರತೀಯ ವೈದ್ಯಕೀಯ ಸಂಘವು (ಐಎಮ್ಎ) ದೇಶದ ಹಲವೆಡೆ ನಡೆದ ವೈದ್ಯರ ಮೇಲಿನ ಹಲ್ಲೆಗಳನ್ನು ಖಂಡಿಸಿ ಜೂನ್ 18ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ. ಕೊರೊನಾ ಕಠಿಣ ಪರಿಸ್ಥಿತಿಯ ನಡುವೆ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ವಿವಿಧೆಡೆ ಹಲ್ಲೆ ಆಗಿರುವ ಘಟನೆಗಳು ಇತ್ತೀಚೆಗೆ ವರದಿಯಾಗಿದ್ದವು. ಅದನ್ನು ಖಂಡಿಸಿ ಐಎಮ್ಎ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ಮುಖ್ಯಸ್ಥ ಡಾ. ಜೆ.ಎ. ಜಯಲಾಲ್ ಇಂದು (ಜೂನ್ 12) ತಿಳಿಸಿದ್ದಾರೆ.
ಇತ್ತೀಚೆಗಿನ ತಿಂಗಳುಗಳಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಕೊವಿಡ್-19 ಪರಿಸ್ಥಿತಿ ನಿಭಾಯಿಸಲು, ಚಿಕಿತ್ಸೆ ಕೊಡಲು ಮುಂಚೂಣಿಯ ಕಾರ್ಯಕರ್ತರಾಗಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಆದರೆ, ಈ ನಡುವೆ ಹಲ್ಲೆ ನಡೆದಿರುವುದು ಸರಿಯಲ್ಲ. ಕರ್ತವ್ಯನಿರತ ವೈದ್ಯರ ರಕ್ಷಣೆಗೆ ಸಿಆರ್ಪಿಸಿ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಹೊಸ ನಿಯಮ ತರಬೇಕು. ಆ ಮೂಲಕ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಭದ್ರತೆ ಒದಗಿಸಿಕೊಡಬೇಕು ಎಂದು ಜಯಲಾಲ್ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಸರ್ಕಾರವು ವೈದ್ಯರಿಗೆ ಭದ್ರತಾ ಕಾನೂನನ್ನು ತರಬೇಕು. ಸಿಆರ್ಪಿಸಿ ಹಾಗೂ ಐಪಿಸಿ ಅಡಿಯಲ್ಲಿ ರಕ್ಷಣೆ ನೀಡುವುದರಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯ ರಕ್ಷಣಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಜಯಲಾಲ್ ಒತ್ತಾಯಿಸಿದ್ದಾರೆ.
ಕೆಲವು ತಿಂಗಳಿಂದ ಅಸ್ಸಾಂ, ಉತ್ತರ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮುಂತಾದೆಡೆ ವೈದ್ಯರ ಮೇಲೆ ಹಲ್ಲೆ ನಡೆದಿತ್ತು. ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಕೊರೊನಾ ಸಮಯದಲ್ಲಂತೂ ಮುಂಚೂಣಿಯ ಕಾರ್ಯಕರ್ತರಿಗೆ ಭದ್ರತೆ ಒದಗಿಸಲೇ ಬೇಕಾಗಿದೆ.
ವೈದ್ಯರ ಮೇಲಿನ ಹಲ್ಲೆಯನ್ನು ವಿರೋಧಿಸಿ ಜೂನ್ 18ರಂದು ಐಎಮ್ಎ ಪ್ರತಿಬಟನೆ ನಡೆಸಲಿದೆ. ‘ಸೇವ್ ದಿ ಸೇವಿಯರ್ಸ್’ ಎಂಬ ಸಾಲಿನಡಿಯಲ್ಲಿ ಪ್ರತಿಭಟನೆ ನಡೆಯಲಿದೆ. ದೇಶದ ಎಲ್ಲಾ ರಾಜ್ಯದ ವೈದ್ಯರು ಕಪ್ಪು ಪಟ್ಟಿ, ಮಾಸ್ಕ್, ರಿಬ್ಬನ್ಸ್ ಹಾಗೂ ಶರ್ಟ್ ಧರಿಸಿ ಕಾರ್ಯನಿರ್ವಹಿಸಬೇಕು ಎಂದು ಜಯಲಾಲ್ ಕೇಳಿಕೊಂಡಿದ್ದಾರೆ. ಪ್ರತಿಭಟನೆಯ ದಿನದಂದು ವೈದ್ಯರ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎಲ್ಲರೂ ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಬೆಡ್ ಇಲ್ಲ ಅಂದಿದ್ದಕ್ಕೆ KC ಜನರಲ್ ವೈದ್ಯರ ಮೇಲೆ ಹಲ್ಲೆಗೆ ಯತ್ನ