ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ನಗ್ನಫೋಟೊ, ತಿರುಚಿದ ಫೋಟೊಗಳಿರುವ ಪೋಸ್ಟ್ನ್ನು 36ಗಂಟೆಗಳೊಳಗೆ ತೆಗೆದುಹಾಕಲಾಗುವುದು: ರವಿಶಂಕರ್ ಪ್ರಸಾದ್
Ravi Shankar Prasad: ದೇಶದ ಏಕತೆ ಮತ್ತು ಸಾರ್ವಭೌಮತೆಗೆ, ಭದ್ರತೆ ಮತ್ತು ಸುರಕ್ಷೆಗೆ ಧಕ್ಕೆ ತರುವಂತವುಗಳು, ಪ್ರಧಾನವಾಗಿ ಮಹಿಳೆಯರ ಘನತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು 36ಗಂಟೆಗಳೊಳಗೆ ತೆಗೆದು ಹಾಕಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ .
ನವದೆಹಲಿ: ಅಂತರ್ಜಾಲದಲ್ಲಿ ಪ್ರಭುತ್ವ ಸಾಧಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿದ್ದು ಇದನ್ನು ನಾವು ಒಪ್ಪಲ್ಲ ಎಂದು ಕೇಂದ್ರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಟ್ವಿಟರ್ ಖಾತೆಗಳನ್ನು ರದ್ದು ಮಾಡುವ ವಿಷಯದ ಬಗ್ಗೆ ಗುರುವಾರ ರಾಜ್ಯಸಭೆಯ ಪ್ರಶ್ನೋತ್ತರ ವೇಳೆ ಮಾತನಾಡಿದ ಸಚಿವರು, ಸರ್ಕಾರ ಟೀಕೆಗಳನ್ನು ಸ್ವೀಕರಿಸುತ್ತದೆ. ಆದರೆ ಸಾಮಾಜಿಕ ಮಾಧ್ಯಮವನ್ನು ದುರುಪಯೋಗ ಪಡಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಟೂಲ್ ಕಿಟ್ ಪ್ರಕರಣದಲ್ಲಿ ಪರಿಸರವಾದಿ ದಿಶಾ ರವಿ ಬಂಧನ ಬಗ್ಗೆ ಕಾಂಗ್ರೆಸ್ ಪಕ್ಷದ ಜಿ.ಸಿ.ಚಂದ್ರಶೇಖರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಭಾರತದಲ್ಲಿ ಸುಮಾರು 140 ಕೋಟಿ ಸೋಷಿಯಲ್ ಮೀಡಿಯಾ ಬಳಕೆದಾರರಿದ್ದಾರೆ. ಲಿಂಕ್ಡ್ ಇನ್, ವಾಟ್ಸ್ಆ್ಯಪ್, ಟ್ವಿಟರ್, ಫೇಸ್ಬುಕ್ ಮೊದಲಾದವುಗಳು ಭಾರತದಲ್ಲಿ ಉಚಿತವಾಗಿವೆ. ಇವು ಸಾಮಾನ್ಯ ಭಾರತೀಯರನ್ನು ಸಬಲಗೊಳಿಸಿವೆ. ನಾವು ಭಿನ್ನಾಭಿಪ್ರಾಯಗಳನ್ನ ಸ್ವಾಗತಿಸುತ್ತೇವೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವುದರಲ್ಲಿ ಅಲ್ಲ ಸಮಸ್ಯೆ ಇರುವುದು, ಅವುಗಳನ್ನು ದುರುಪಯೋಗಪಡಿಸುವುದರಲ್ಲಿ ಎಂದಿದ್ದಾರೆ.
ಮನುಷ್ಯನ ಅತೀ ಪ್ರಬಲವಾದ ಸಂಶೋಧನೆಗಳಲ್ಲೊಂದು ಅಂತರ್ಜಾಲ. ಆದರೆ ಇದು ಕೆಲವರ ಮಾತ್ರ ಪೂರ್ಣಾಧಿಕಾರದಲ್ಲಿರಬಾರದು. ಕೆಲವು ಸಂಸ್ಥೆಗಳು ಮಾತ್ರ ಇದರ (ಅಂತರ್ಜಾಲ) ಮೇಲೆ ಪ್ರಭುತ್ವವನ್ನು ಸ್ಥಾಪಿಸಿದರೆ ಅದು ಸ್ವೀಕಾರರ್ಹವಲ್ಲ ಎಂಬ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ದಿಶಾ ರವಿ ನ್ಯಾಯಾಂಗದ ಪರಿಗಣನೆಯಲ್ಲಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೆಳೆಯಲು, ಭಾರತವನ್ನು ಜಾಗತಿಕ ಮಟ್ಟದಲ್ಲಿ ಅಪಖ್ಯಾತಿಗೀಡು ಮಾಡುವ ಪ್ರಯತ್ನಕ್ಕೆ ನಾವೇನು ಮಾಡಬೇಕು ಎಂಬುದನ್ನು ಸದನ ಚರ್ಚಿಸಬೇಕು ಎಂದಿದ್ದಾರೆ ಪ್ರಸಾದ್.
ಕೆಲವೊಂದು ಪ್ರಕರಣಗಳಲ್ಲಿ ಮಹಿಳೆಯರ ನಗ್ನ ಫೋಟೊಗಳನ್ನು ಪ್ರದರ್ಶಿಸಿ ಅಥವಾ ತಿರುಚಿದ ಫೋಟೊಗಳನ್ನು ಪ್ರದರ್ಶಿಸಿ ಆಕೆಯ ಘನತೆಗೆ ಧಕ್ಕೆ ತರಲಾಗುತ್ತದೆ. ಈ ಬಗ್ಗೆ ನೀವೇನಂತೀರೀ? ಎಂದು ಕೇಳಿದಾಗ, ಮಾರ್ಗಸೂಚಿಗಳು ಸ್ಪಷ್ಟವಾಗಿವೆ. ಈ ರೀತಿಯ ವಿಷಯಗಳನ್ನು 36 ಗಂಟೆಗಳೊಳಗೆ ತೆಗೆದು ಹಾಕಲಾಗುವುದು ಎಂದಿದ್ದಾರೆ. ದೇಶದ ಏಕತೆ ಮತ್ತು ಸಾರ್ವಭೌಮತೆಗೆ, ಭದ್ರತೆ ಮತ್ತು ಸುರಕ್ಷೆಗೆ ಧಕ್ಕೆ ತರುವಂತವುಗಳು, ಪ್ರಧಾನವಾಗಿ ಮಹಿಳೆಯರ ಘನತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು 36ಗಂಟೆಗಳೊಳಗೆ ತೆಗೆದು ಹಾಕಲಾಗುವುದು. ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಬಗ್ಗೆ ನಾವು ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಬಳಕೆದಾರರು ಏನು ಹೇಳಲು ಬಯಸುತ್ತಿದ್ದಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ ರವಿಶಂಕರ್ ಪ್ರಸಾದ್.
ಚುನಾವಣೆ ಹೊತ್ತಲ್ಲಿ ಸುಳ್ಳು ಸುದ್ದಿಗಳಿಗೆ ನಿಯಂತ್ರಣ ಚುನಾವಣೆಯ ಹೊತ್ತಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಬಳಕೆಯಾಗುವ ಸುಳ್ಳು ಸುದ್ದಿ, ಸುಳ್ಳು ಮಾಧ್ಯಮಗಳ ಮೇಲೆ ನಿಯಂತ್ರ ಹೇರಲು ಸಮರ್ಥವಾದ ವಿಭಾಗವನ್ನು ಚುನಾವಣಾ ಆಯೋಗ ರಚಿಸಲಿದೆ ಎಂದು ಸಚಿವರು ಹೇಳಿದ್ದಾರೆ. ಕ್ಯಾಂಬ್ರಿಡ್ಜ್ ಅನಲೆಟಿಕಾ ವನ್ನು ನಿಷೇಧಿಸಿತ್ತು, ಬ್ರಿಟನ್ ಮೂಲದ ಈ ಸಂಸ್ಥೆ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಭಾರತದ ಚುನಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವುದಕ್ಕಾಗಿ ಸರ್ಕಾರ ಚುನಾವಣಾ ಆಯೋಗದ ಜತೆ ಕಾರ್ಯ ನಿರ್ವಹಿಸುತ್ತಿದ್ದ, ಸುಳ್ಳು ಸುದ್ದಿಗಳು ಮತದಾರರ ಮೇಲೆ ಪ್ರಭಾವ ಬೀರದಂತೆ ಖಾತ್ರಿ ಪಡಿಸುತ್ತೇವೆ ಎಂದಿದ್ದಾರೆ. ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗೆ ಸಿದ್ಧತೆ ನಡೆಸಿವೆ. ಮಾರ್ಚ್ ಕೊನೆಯ ವಾರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು ಮೇ.2ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಮತದಾರರ ಪಟ್ಟಿ ಜತೆ ಆಧಾರ್ ಜೋಡಣೆಗೆ ಸರ್ಕಾರ ಚಿಂತನೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಫೇಸ್ಬುಕ್ ದತ್ತಾಂಶ ಅಕ್ರಮ ಸಂಗ್ರಹ: ಕೇಂಬ್ರಿಡ್ಜ್ ಅನಾಲಿಟಿಕಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ ಸಿಬಿಐ
Published On - 5:15 pm, Thu, 18 March 21