ಉತ್ತರ ಪ್ರದೇಶದ 5 ನಗರಗಳಲ್ಲಿ ಲಾಕ್​ಡೌನ್: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ

|

Updated on: Apr 20, 2021 | 2:34 PM

Supreme Court: ಅಲಹಾಬಾದ್ ಹೈಕೋರ್ಟ್ ಐದು ನಗರಗಳಾದ ಪ್ರಯಾಗ್​ರಾಜ್, ಲಕ್ನೋ, ವಾರಣಾಸಿ, ಕಾನ್ಪುರ್ ನಗರ್ ಮತ್ತು ಗೋರಖ್‌ಪುರಗಳಲ್ಲಿ ಖಾಸಗಿ ಅಥವಾ ಸರ್ಕಾರಿ ನಡೆಸುವ ಎಲ್ಲಾ ಸಂಸ್ಥೆಗಳನ್ನು ಮುಚ್ಚುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಉತ್ತರ ಪ್ರದೇಶದ 5 ನಗರಗಳಲ್ಲಿ ಲಾಕ್​ಡೌನ್: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ಸುಪ್ರೀಂ ಕೋರ್ಟ್​
Follow us on

ಲಕ್ನೋ : ಉತ್ತರ ಪ್ರದೇಶ ನಗರಗಳಾದ ಪ್ರಯಾಗ್​ರಾಜ್ , ಲಕ್ನೋ, ವಾರಣಾಸಿ, ಕಾನ್ಪುರ್ ನಗರ್ ಮತ್ತು ಗೋರಖ್‌ಪುರಗಳಲ್ಲಿ ಏಪ್ರಿಲ್ 26 ರವರೆಗೆ ಕೋವಿಡ್ -19 ನಿರ್ಬಂಧಗಳನ್ನು ವಿಧಿಸುವ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ . ಕೊರೊನಾವೈರಸ್ ಸಾಂಕ್ರಾಮಿಕವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರ ಒಂದು ವಾರದೊಳಗೆ ಅಲಹಾಬಾದ್ ಹೈಕೋರ್ಟ್‌ಗೆ ವರದಿ ಸಲ್ಲಿಸಲು ಸುಪ್ರೀಂಕೋರ್ಟ ಹೇಳಿದೆ. ಅದೇ ವೇಳೆ ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರನ್ನು ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಾಗಿ (ನ್ಯಾಯಾಲಯಕ್ಕೆಸಹಕರಿಸುವ ವಕೀಲ) ಸುಪ್ರೀಂಕೋರ್ಟ್ ನೇಮಿಸಿದ್ದು, ಮುಂದಿನ ವಿಚಾರಣೆ ಎರಡು ವಾರಗಳ ನಂತರ ನಡೆಯಲಿದೆ.

ಸೋಮವಾರ ಅಲಹಾಬಾದ್ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಉತ್ತರ ಪ್ರದೇಶ ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಕರಿಸಿದ್ದರು. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾ ಪೀಠದ ಮುಂದೆ ಮಂಗವಾರ ಈ ವಿಚಾರಣೆ ನಡೆದಿದೆ.

ಒಂದು ದಿನದ ಹಿಂದೆ ಅಲಹಾಬಾದ್ ಹೈಕೋರ್ಟ್ ಐದು ನಗರಗಳಾದ ಪ್ರಯಾಗ್​ರಾಜ್, ಲಕ್ನೋ, ವಾರಣಾಸಿ, ಕಾನ್ಪುರ್ ನಗರ್ ಮತ್ತು ಗೋರಖ್‌ಪುರಗಳಲ್ಲಿ ಖಾಸಗಿ ಅಥವಾ ಸರ್ಕಾರಿ ನಡೆಸುವ ಎಲ್ಲಾ ಸಂಸ್ಥೆಗಳನ್ನು ಮುಚ್ಚುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಕೊವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಸಿದ್ಧತೆ ಮಾಡಿಲ್ಲ ಎಂದು ಹೇಳಿದ ಹೈಕೋರ್ಟ್, ರಾಜ್ಯ ಚುನಾವಣಾ ಆಯೋಗವು ಈ ಸಮಯದಲ್ಲಿ ಪಂಚಾಯತ್ ಚುನಾವಣೆಗಳನ್ನು ನಡೆಸಿದೆ. ಈ ಮೂಲಕ ಚುನಾವಣಾ ಅಧಿಕಾರಿಗಳು ವೈರಸ್ ಸಂಪರ್ಕಕ್ಕೆ ಬರುವಂತೆ ಮಾಡಲಾಗಿದೆ ಎಂದು ತರಾಟೆಗೆ ತೆಗೆದು ಕೊಂಡಿತ್ತು. ಹೈಕೋರ್ಟ್ ಆದೇಶವನ್ನು ವಿರೋಧಿಸಿದ ಉತ್ತರ ಪ್ರದೇಶ ಸರ್ಕಾರ ಈ ನಗರಗಳಲ್ಲಿ ಸದ್ಯಕ್ಕೆ ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಹೇಳಿತ್ತು.


ಸೋಮವಾರ ರಾತ್ರಿ 10: 45 ಕ್ಕೆ ರಾಜ್ಯ ಸರ್ಕಾರ ಒದಗಿಸಿರುವ ಅಧಿಕೃತ ಲೆಕ್ಕಾಚಾರದ ಪ್ರಕಾರ ಉತ್ತರಪ್ರದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 879,831 ರಷ್ಟಿದೆ. ಈ ಪೈಕಿ 208,523 ಸಕ್ರಿಯ ಪ್ರಕರಣಗಳಾಗಿದ್ದು, ಸಾವಿನ ಸಂಖ್ಯೆ ಸುಮಾರು 10,000 ಕ್ಕೆ ತಲುಪಿದೆ.

ಇದನ್ನೂ ಓದಿ: ಅಂತರ್ ಧರ್ಮೀಯ ವಿವಾಹಗಳಿಗೆ ನೋಟಿಸ್ ಪ್ರದರ್ಶನ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್

(Imposing Covid 19 curbs in five cities in Uttar Pradesh Supreme Court stays Allahabad HC order)

Published On - 2:34 pm, Tue, 20 April 21