ಮೀರತ್ನಲ್ಲಿ ಹಿಂದೂ ಮಹಾಸಭಾದಿಂದ ಗೋಡ್ಸೆ ಜನ್ಮದಿನಾಚರಣೆ: ಗೋಡ್ಸೆ ನಗರ ಎಂದು ಹೆಸರು ಬದಲಿಸಲು ಒತ್ತಾಯ
ಮೀರತ್ ನಗರದ ಹೆಸರನ್ನು ಗೋಡ್ಸೆ ನಗರವಾಗಿ ಬದಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದೂ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಪತ್ರ ಬರೆಯುವುದಾಗಿ ಘೋಷಿಸಿದರು.
ಮೀರತ್: ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ (Nathuram Godse) ಜನ್ಮದಿನವನ್ನು ಉತ್ತರಪ್ರದೇಶದ ಮೀರತ್ನಲ್ಲಿ ಹಿಂದೂ ಮಹಾಸಭಾ ಕಾರ್ಯಕರ್ತರು ಆಚರಿಸಿದರು. ಗೋಡ್ಸೆ ಜನ್ಮದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮೀರತ್ ನಗರದ ಹೆಸರನ್ನು ಗೋಡ್ಸೆ ನಗರವಾಗಿ ಬದಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದೂ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಪತ್ರ ಬರೆಯುವುದಾಗಿ ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು, ನಾಥೂರಾಮ್ ಗೋಡ್ಸೆ ಮತ್ತು ವಿನಾಯಕ ದಾಮೋದರ ಸಾವರ್ಕರ್ ಅವರ ಆದರ್ಶಗಳಿಗೆ ಅನುಗುಣವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಗೋಡ್ಸೆ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ‘ಹಿಂದು ವಿರೋಧಿ ಗಾಂಧಿವಾದ’ವನ್ನು ಕೊನೆಗೊಳಿಸಲಾಗುವುದು ಎಂದು ಅವರು ಘೋಷಿಸಿದರು.
ನಾಥೂರಾಮ್ ಗೋಡ್ಸೆ ಯಾರು?
ಸಾವರ್ಕರ್‌ರಿಂದ ಪ್ರಭಾವಿತರಾಗಿ ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದ ನಾಥುರಾಮ್ ಗೋಡ್ಸೆ ಹುಟ್ಟಿದ್ದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ. ಮರಾಠಿ ಭಾಷೆಯಲ್ಲಿ ಅಗ್ರಣಿ ಎಂಬ ವೃತ್ತಪತ್ರಿಕೆಯನ್ನು ಆರಂಭಿಸಿದ್ದ ಅವರು, ಅದರ ಹೆಸರನ್ನು ಹಿಂದೂರಾಷ್ಟ್ರ ಎಂದು ಬದಲಿಸಿದರು. ವೈಚಾರಿಕ ಕಾರಣದಿಂದ ಹಿಂದೂ ಮಹಾಸಭಾ ಮತ್ತು ನಾಥುರಾಮ ಗೋಡ್ಸೆ ಗಾಂಧಿಜಿಯವರನ್ನು ವಿರೋಧಿಸಲು ಪ್ರಾರಂಭಿಸಿದರು.
ನಾಥೂರಾಮ್ ಗಾಂಧಿಜಿಯವರ ಅಹಿಂಸೆಯ ಪ್ರತಿಪಾದನೆಯನ್ನು ವಿರೋಧಿಸುತ್ತಿದ್ದರು. ಅವರ ಪ್ರಕಾರ ಹಿಂದೂಗಳು ತಮ್ಮ ಸ್ವರಕ್ಷಣೆಯ ಹೋರಾಟಕ್ಕೆ ಅಗತ್ಯವಾದ ಸಂಕಲ್ಪಶಕ್ತಿಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿ ಅವರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿಬಿಡುತ್ತವೆ ಎಂದು ಹೇಳುತ್ತಿದ್ದರು. ಗಾಂಧಿಜಿಯವರನ್ನು ಹತ್ಯೆ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಅವರಿಗಿದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿತ್ತು ಎನ್ನಲಾಗಿದೆ. ಜನವರಿ 30, 1948ರಂದು ಸಂಜೆ ಸಮಯದಲ್ಲಿ ಗಾಂಧಿಜಿಯವರ ತೀರ ಸನಿಹದಲ್ಲಿ ನಿಂತುಕೊಂಡು, ಗುಂಡು ಹಾರಿಸಿ ಹತ್ಯೆ ಮಾಡಿದರು.
ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಅವರ ವಿಚಾರಣೆಯನ್ನು ಮೇ 27, 1948ರಂದು ಆರಂಭಿಸಲಾಯಿತು. ವಿಚಾರಣೆಯ ಸಮಯದಲ್ಲಿ ಅವರು ಆರೋಪದ ವಿರುದ್ಧ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಬದಲಾಗಿ ಮುಕ್ತವಾಗಿಯೇ ಗಾಂಧಿಜಿಯವರನ್ನು ಕೊಲ್ಲಲು ತನಗಿರುವ ಕಾರಣಗಳ ಕುರಿತು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯ ನವೆಂಬರ್ 8, 1948ರಂದು ಗೋಡ್ಸೆಗೆ ಮರಣದಂಡನೆ ವಿಧಿಸಿತು.
Published On - 9:10 am, Fri, 20 May 22