ತಮಿಳುನಾಡು: ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದ ಗ್ರಾಮದಲ್ಲಿನ ನೀರಿನ ಟ್ಯಾಂಕ್ಗೆ ಮಲ ಸುರಿದ ಜನರು; ಮಕ್ಕಳು ಅಸ್ವಸ್ಥ, ಕೇಸು ದಾಖಲು
ಕುಡಿಯುವ ನೀರಿನ ಮೂಲವು ಕಲುಷಿತವಾಗಿದೆ. ಅದನ್ನು ಪರಿಶೀಲಿಸಬೇಕು ಎಂದು ವೈದ್ಯರು ಗ್ರಾಮಸ್ಥರಿಗೆ ಹೇಳಿದ್ದರು. ನೀರು ವಾಸನೆ ಬಂದಾಗ ಗ್ರಾಮದ ಕೆಲವು ಜನರು ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ ಮಾನವನ ಮಲ ಸುರಿದಿರುವುದು ಕಂಡು ಬಂದಿದೆ.
ತಮಿಳುನಾಡಿನ (Tamil nadu) ಪುದುಕ್ಕೋಟೈ ಜಿಲ್ಲೆಯ ಅನ್ನವಾಸಲ್ ಬ್ಲಾಕ್‌ನಲ್ಲಿರುವ ವೆಂಗೈವಾಯಲ್ (Vengaivayal) ಗ್ರಾಮದ ಕೆಲವು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಕೆಲವು ದಿನಗಳ ನಂತರ, ಗ್ರಾಮಸ್ಥರು ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುತ್ತಿರುವ ಗ್ರಾಮದ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಮಲ (human excreta) ಸುರಿದಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಊರಿನ ಮಕ್ಕಳಿಗೆ ಭೇದಿ ಮತ್ತು ವಾಂತಿ ಸೇರಿದಂತೆ ಅಸ್ವಸ್ಥತೆಯ ಬಗ್ಗೆ ದೂರು ನೀಡಲಾಗಿದ್ದು, ಕುಡಿಯುವ ನೀರಿನ ಮೂಲವು ಕಲುಷಿತವಾಗಿದೆ. ಅದನ್ನು ಪರಿಶೀಲಿಸಬೇಕು ಎಂದು ವೈದ್ಯರು ಗ್ರಾಮಸ್ಥರಿಗೆ ಹೇಳಿದ್ದರು. ನೀರು ವಾಸನೆ ಬಂದಾಗ ಗ್ರಾಮದ ಕೆಲವು ಜನರು ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ ಮಾನವನ ಮಲ ಸುರಿದಿರುವುದು ಕಂಡು ಬಂದಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈ ವಿಷಯ ತಿಳಿದ ಕೂಡಲೇ ವೆಲ್ಲನೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಮಗುವಿನ ಪೋಷಕರು ದಾಖಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಐಪಿಸಿ ಸೆಕ್ಷನ್ 277 (ನೀರನ್ನು ಕಲುಷಿತಗೊಳಿಸುವುದು) ಮತ್ತು 328 (ಉದ್ದೇಶ ಪೂರ್ವಕ ವಿಷ ಅಥವಾ ಇನ್ಯಾವುದೇ ವಸ್ತುವನ್ನು ಕಲಕಿ ಅಪರಾಧ ನಡೆಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದರ ಜತೆಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯಿದೆಯ ಸಂಬಂಧಿತ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿದ್ದಾರೆ.
ಈ ಘಟನೆ ಮೂರ್ನಾಲ್ಕು ದಿನಗಳ ಹಿಂದೆ ನಡೆದಿರಬಹುದು. ಮಕ್ಕಳು ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಆದರೆ ಗ್ರಾಮಸ್ಥರು ನಿರ್ದಿಷ್ಟವಾಗಿ ಯಾರನ್ನೂ ಅಥವಾ ಯಾವುದೇ ಸಮುದಾಯವನ್ನು ಹೆಸರಿಸಿಲ್ಲ. ಅವರು ಘಟನೆಯ ಬಗ್ಗೆ ನಮಗೆ ಮಾಹಿತಿ ನೀಡಿದರು ಮತ್ತು ಅದನ್ನು ಯಾರು ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ನಮ್ಮನ್ನು ಕೇಳಿದರು. ಆದ್ದರಿಂದ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪುದುಕೋಟೈ ಜಿಲ್ಲಾಧಿಕಾರಿ ಕವಿತಾ ರಾಮು ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ಪಾಂಡೆ ಅವರು ಮಂಗಳವಾರ ಗ್ರಾಮವನ್ನು ಪರಿಶೀಲಿಸಿದರು. ಗ್ರಾಮದಲ್ಲಿ ಜಾತಿ ತಾರತಮ್ಯ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಗ್ರಾಮಸ್ಥರು, ತಮ್ಮ ಗ್ರಾಮದಲ್ಲಿರುವ ಅರುಳ್ಮಿಗು ಅಯ್ಯನಾರ್ ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂದು ಹೇಳಿದ್ದು, ಟೀ ಅಂಗಡಿಗಳಲ್ಲಿ ಎರಡು ಲೋಟ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಎರಡು ಲೋಟ ವ್ಯವಸ್ಥೆಯು ತಾರತಮ್ಯವಾಗಿದ್ದು, ದಲಿತರು ಇತರರು ಬಳಸುವ ಅದೇ ಲೋಟದಲ್ಲಿ ಕುಡಿಯುವಂತಿಲ್ಲ.
ನಂತರ ಜಿಲ್ಲಾಧಿಕಾರಿ ಮತ್ತು ಎಸ್ಪಿ ಗ್ರಾಮಸ್ಥರನ್ನು ದೇವಸ್ಥಾನಕ್ಕೆ ಕರೆದೊಯ್ದು ದೇಗುಲ ಪ್ರವೇಶ ಮಾಡಿಸಿದ್ದಾರೆ. ಇಲ್ಲಿ ಜಾತಿ ತಾರತಮ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಕವಿತಾ ರಾಮು, ಘಟನೆಯ ಬಗ್ಗೆ ತಿಳಿದ ತಕ್ಷಣ ಎಫ್‌ಐಆರ್ ದಾಖಲಿಸಲಾಗಿದೆ. “ಗ್ರಾಮಸ್ಥರು ದೇವಾಲಯಗಳನ್ನು ಪ್ರವೇಶಿಸಿ ಸಂತೋಷಪಟ್ಟರು. ಆದರೆ ಇದು ಒಂದು ದಿನದ ವಿಷಯವಾಗಬಾರದು ಎಂದು ನಾವು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಗ್ರಾಮದ ಜನರಿಗೆ ನಿಯಮಿತವಾಗಿ ದೇವಾಲಯಕ್ಕೆ ಪ್ರವೇಶಿಸಲು ಅನುಮತಿಸುವುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ತಿಳಿಸಿದ್ದೇವೆ. ಗ್ರಾಮದಲ್ಲಿ ಯಾವುದೇ ಸಮಸ್ಯೆಯಾಗದಂತೆ ಶಾಂತಿ ಸಭೆ ನಡೆಸಲು ಕಂದಾಯ ವಿಭಾಗೀಯ ಅಧಿಕಾರಿಗೆ ಸೂಚಿಸಿದ್ದೇವೆ ಎಂದಿದ್ದಾರೆ
ಗ್ರಾಮದಲ್ಲಿ ಆರೋಗ್ಯದ ತೊಂದರೆ ಅನುಭವಿಸುತ್ತಿರುವ ನಿವಾಸಿಗಳಿಗೆ ಚಿಕಿತ್ಸೆ ನೀಡಲು ವಿಶೇಷ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Wed, 28 December 22