Explainer | ಕೆಂಪುಕೋಟೆಯಲ್ಲಿ ರೈತ ಪ್ರತಿಭಟನಾಕಾರರು ಹಾರಿಸಿದ ಕೇಸರಿ ಧ್ವಜ ಯಾವುದು?
ಸಿಖ್ ಸಮುದಾಯದ ಜನರ ಗೌರವದ ಸಂಕೇತವಾಗಿದೆ ನಿಶಾನ್ ಸಾಹಿಬ್ ಎಂಬ ಧ್ವಜ. ಖಂದಾ ಸಂಕೇತವು ಸತ್ಯ ಮತ್ತು ಸುಳ್ಳನ್ನು ಬೇರ್ಪಡಿಸುವ ಶಕ್ತಿಯುತ ಆಯುಧ ಎಂದು ಇವರು ನಂಬುತ್ತಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮಂಗಳವಾರ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿ ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದರು. ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಅಲ್ಲಿದ್ದ ಧ್ವಜಸ್ತಂಭಕ್ಕೆ ಹತ್ತಿ ಕೇಸರಿ ಬಣ್ಣದ ಧ್ವಜ ಮತ್ತು ರೈತಸಂಘದ ಧ್ವಜವನ್ನು ಹಾರಿಸಿದ್ದಾರೆ. ಇದಾದ ನಂತರ ಕೆಂಪುಕೋಟೆಯ ಗುಮ್ಮಟದ ಮೇಲೆ, ಕೆಂಪುಕೋಟೆಯ ಕೆಳಗೆ ಹೀಗೆ ಮೂರು ಬಾರಿ ಪ್ರತಿಭಟನಾಕಾರರು ಧ್ವಜಾರೋಹಣ ಮಾಡಿದ್ದಾರೆ.
ರೈತರು ನೆಟ್ಟ ಕೇಸರಿ ಧ್ವಜ ಯಾವುದು? ಭಾರತೀಯ ಕಿಸಾನ್ ಸಂಘದ ಹಳದಿ ಬಣ್ಣದ ಬಾವುಟದ ಜತೆ ರೈತರು ಕೇಸರಿ ಬಣ್ಣದ ಧ್ವಜವೊಂದನ್ನು ಹಾರಿಸಿದ್ದಾರೆ. ಈ ಕೇಸರಿ ಧ್ವಜದ ಹೆಸರು ನಿಶಾನ್ ಸಾಹಿಬ್. ತ್ರಿಕೋನಾಕಾರದಲ್ಲಿರುವ ಈ ಧ್ವಜದ ಮಧ್ಯೆ ಸಿಖ್ ಸಂಕೇತ ಖಂದಾ ಇದೆ. ಎರಡು ಅಲಗಿರುವ ಖಡ್ಗ ಮತ್ತು ಚಕ್ರವೇ ಸಿಖ್ ಸಂಕೇತ. ಸಾಮಾನ್ಯವಾಗಿ ನಿಶಾನ್ ಸಾಹಿಬ್ ಅನ್ನು ಗುರುದ್ವಾರದ ಹೊರಗೆ ಕೇಸರಿ ಬಟ್ಟೆಯ ಹೊದಿಕೆ ಇರುವ ಸ್ಟೀಲ್ ಧ್ವಜಸ್ತಂಭದಲ್ಲಿ ಹಾರಿಸಲಾಗುತ್ತದೆ.
#WATCH A protestor hoists a flag from the ramparts of the Red Fort in Delhi#FarmLaws #RepublicDay pic.twitter.com/Mn6oeGLrxJ
— ANI (@ANI) January 26, 2021
ಏನಿದರ ಮಹತ್ವ? ಸಿಖ್ ಸಮುದಾಯದ ಜನರ ಗೌರವದ ಸಂಕೇತ ಈ ಧ್ವಜ. ಸತ್ಯ ಮತ್ತು ಸುಳ್ಳನ್ನು ಬೇರ್ಪಡಿಸುವ ಶಕ್ತಿಯುತ ಆಯುಧ ಖಂದಾ ಎಂದು ಸಿಖ್ಖರು ನಂಬುತ್ತಾರೆ. ಗುರು ಗೋಬಿಂದ್ ಸಿಂಗ್ ಅವರು ನೀರಿನ ಮೇಲೆ ಖಂದಾವನ್ನು ಅಲುಗಾಡಿಸಿ ಅದರಿಂದ ಅಮೃತವನ್ನು (ಪವಿತ್ರ ನೀರು) ತಯಾರಿಸಿದರು ಎಂದು ಹೇಳಲಾಗುತ್ತದೆ.
ಗುರು ಗೋಬಿಂದ್ ಸಿಂಗ್ ಅವರ ನಿಶಾನ್ ಸಾಹಿಬ್ನಲ್ಲಿ ವಾಹೇಗುರು ಜೀ ಕಿ ಫತೇ (ದೇವರ ಗೆಲುವು) ಎಂದು ಬರೆಯಲಾಗಿದೆ. ಅದೇ ವೇಳೆ ಮಹಾರಾಜಾ ರಂಜೀತ್ ಸಿಂಗ್ ಅವರ ನಿಶಾನ್ ಸಾಹಿಬ್ ನಲ್ಲಿ ಅಕಲ್ ಸಹೈ (ದೇವರು ಒಳ್ಳೆದು ಮಾಡಲಿ) ಎಂದು ಬರೆಯಲಾಗಿದೆ.
#WATCH Protestors enter Red Fort in Delhi, wave flags from the ramparts of the fort pic.twitter.com/4dgvG1iHZo
— ANI (@ANI) January 26, 2021
ಯುದ್ಧದ ಕತೆಯ ಮೆಲುಕು ನಿಶಾನ್ ಸಾಹಿಬ್ ಹಿಡಿದಿದ್ದ ಭಾಯಿ ಆಲಂ ಸಿಂಗ್ ಅವರನ್ನು ಯುದ್ಧವೊಂದರಲ್ಲಿ ಮೊಘಲ್ ಸೈನ್ಯ ವಶಕ್ಕೆ ಪಡೆದಕೊಂಡಿತ್ತು ಎಂಬ ಕತೆ ಇದೆ. ಕೈಯಲ್ಲಿರುವ ನಿಶಾನ್ ಸಾಹಿಬ್ನ್ನು ಬಿಸಾಡು, ಇಲ್ಲವಾದರೆ ನಿನ್ನ ಕೈ ಕತ್ತರಿಸುತ್ತೇವೆ ಎಂದು ಶತ್ರು ಸೈನಿಕರು ಬೆದರಿಕೆಯೊಡ್ಡಿದರು. ಆಗ ಸಿಂಗ್, ನನ್ನ ಕೈ ಕತ್ತರಿಸಿದರೆ ನಾನು ಕಾಲಿನಿಂದ ಈ ಧ್ವಜ ಹಿಡಿವೆ ಎಂದು ಉತ್ತರಿಸುತ್ತಾರೆ. ಹಾಗಾದರೆ ಕಾಲು ಕತ್ತರಿಸುತ್ತೇವೆ ಎಂದು ಶತ್ರು ಸೈನಿಕರು ಹೇಳಿದರು, ನೀವು ಕಾಲು ಕತ್ತರಿಸಿದರೆ ನಾನು ಅದನ್ನು ಬಾಯಿಯಲ್ಲಿ ಹಿಡಿವೆ ಅಂತಾರೆ ಸಿಂಗ್. ನಿನ್ನ ತಲೆಯನ್ನೇ ಕತ್ತರಿಸಿದರೆ? ಎಂದು ಹೇಳಿದಾಗ, ನಾನು ಯಾರ ಧ್ವಜವನ್ನು ಹಿಡಿದಿರುವೆನೋ ಆ ಗುರುವೇ ನನ್ನನ್ನು ಕಾಪಾಡುತ್ತಾರೆ ಎಂದು ಉತ್ತರಿಸಿದ್ದರಂತೆ ಭಾಯಿ ಆಲಂ ಸಿಂಗ್.
In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?
Delhi Farmers Tractor Rally Photos | ಇಂದು ದೆಹಲಿಯನ್ನು ನೋಡಿದ ಕಣ್ಣುಗಳು
Delhi Farmers Tractor Rally Photos | ಕೆಂಪುಕೋಟೆಗೆ ರೈತರ ಮುತ್ತಿಗೆ
Published On - 9:17 pm, Tue, 26 January 21