Delhi Chalo ವಿಶ್ಲೇಷಣೆ | ಇದು ಈ ಕಾಲದ ಚಳವಳಿ; ಬೀದಿಗೂ ಸೈ, ಸೋಷಿಯಲ್ ಮೀಡಿಯಾಗೂ ಜೈ ಎಂದ ಪಂಜಾಬ್ ಯುವಜನರು
ಬದಲಾದ ಕಾಲದಲ್ಲಿ ರಸ್ತೆ ತಡೆದು, ಮೌನ ಮೆರವಣಿಗೆ ಕುಳಿತು ಚಳವಳಿಗಳು ನಡೆದರೆ ಸಾಲದು, ಅಂತರ್ಜಾಲದಲ್ಲೂ ಚಳವಳಿಗಳ ಕೊಂಡಿ ಬೆಸೆಯಬೇಕು ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ ದೆಹಲಿ ಚಲೋ.
ಕಾಲ ಬದಲಾಗಿದೆ, ಸಹಜವಾಗಿ ಪ್ರತಿಭಟನೆ, ಚಳವಳಿಗಳ ಸ್ವರೂಪವೂ ಬದಲಾಗುತ್ತಿದೆ. ಕೇವಲ ಮೌನ ಮೆರವಣಿಗೆ ನಡೆಸಿ, ರಸ್ತೆ ತಡೆದು ಪ್ರತಿಭಟಿಸಿದರಷ್ಟೇ ಸಾಲದು. ಈ ಕಾಲದಲ್ಲಿ ಪ್ರತಿಭಟನೆ ಕಾವೇರಬೇಕಾದರೆ ಅಂತರ್ಜಾಲವೆಂಬ ಅಮೂರ್ತ ವೇದಿಕೆಯಲ್ಲಿ ಚಳವಳಿ ನಡೆಯಬೇಕಿದೆ. ದೆಹಲಿ ಚಲೋ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
40 ದಿನಗಳಿಂದ ದೇಶದ ರಾಜಧಾನಿಯ ರಸ್ತೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿಸಿದ್ದು ಒಂದು ಘೋಷಣೆ. ಅದುವೇ, ‘ನಾವು ದೆಹಲಿ ಪ್ರವಾಸಕ್ಕೆ ಬಂದಿಲ್ಲ’.
ನವೆಂಬರ್ ತಿಂಗಳ ಆರಂಭದಿಂದಲೇ ರೈತರ ದನಿಗೆ ಬೆಂಗಾವಲಾಗಿ ಪಂಜಾಬ್ನ ಯುವಪಡೆ ದೃಢವಾಗಿ ನಿಂತಿತ್ತು. ಸ್ಥಳೀಯರನ್ನೂ ಒಳಗೊಂಡಂತೆ ಕೆನಡಾ, ಅಮೆರಿಕ ದೇಶಗಳಲ್ಲಿ ನೆಲೆಸಿರುವ ಪಂಜಾಬಿಗರು ಈ ಚಳವಳಿಯ ಭಾಗವಾಗಿದ್ದು ಸಾಮಾಜಿಕ ಜಾಲತಾಣಗಳಿಂದಲೇ. ಈ ಸಾಮಾಜಿಕ ಜಾಲತಾಣ ಚಳವಳಿ ಪದೇಪದೇ ಮುನ್ನೆಲೆಗೆ ಬರುತ್ತಲಿದೆ. ಆಧುನಿಕ ಕಾಲದಲ್ಲಿ ಚಳವಳಿಗಳು ಭೌತಿಕವೊಂದೇ ಅಲ್ಲದೇ, ಅಂತರ್ಜಾಲದಲ್ಲೂ ಪ್ರಬಲವಾಗಿ ರೂಪುಗೊಳ್ಳಬೇಕಿದೆ.
ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಜೊತೆಗೆ ಯೂಟ್ಯೂಬ್ಗಳಲ್ಲಿ ದೆಹಲಿ ಚಲೋದ ಕುರಿತ ಲಕ್ಷಾಂತರ ‘ಕಂಟೆಂಟ್’ಗಳು ಪ್ರತಿಧ್ವನಿಸಿದವು. ರೈತರ ಟ್ರಾಕ್ಟರ್ಗಳು ದೆಹಲಿಯ ಗಡಿಗಳನ್ನು ತಡೆದರೆ, ರೈತಪರ ಹ್ಯಾಷ್ಟ್ಯಾಗ್ಗಳು ಟ್ರೆಂಡ್ ಆದವು. ಟ್ರಾಕ್ಟರ್ನಿಂದ ಟ್ವಿಟರ್ವರೆಗೆ ದೆಹಲಿ ಚಲೋ ಆವರಿಸಿಕೊಂಡಿತು.
delhichalo, dillichalo, BoycottFood, chalodilli, #Aaj_Bharat_Bandh_Hai , #TractorToTwitter, #IStandWithFarmers, #Kisan, #FarmersProtest, #NoFarmersNoFood ಮುಂತಾದ ಹ್ಯಾಷ್ಟ್ಯಾಗ್ಗಳು ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗುತ್ತಲೇ ಇದ್ದವು. ನೇರವಾಗಿ ದೆಹಲಿಗೆ ತೆರಳಿ ಚಳವಳಿ ಸೇರಲು ಸಾಧ್ಯವಾಗದವರು ಟ್ವಿಟ್ಟರ್ ಚಳವಳಿ ಸೇರಿದರು. ಪಂಜಾಬ್ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಳ್ಳುವುದು ಕಳೆದ ತಿಂಗಳಿಂದ ಗಣನೀಯವಾಗಿ ಹೆಚ್ಚಿತ್ತು.
It is not necessary that the hands and feet be safe to fight the struggle, even with high courage and determination, wars are won!#FarmersProtests #FarmBills2020 #FarmersAppealTotalRepeal #TractorToTwitter #TakeBackFarmLaws2020 #ModiSellingFarmers #ModiRepealFarmLaws pic.twitter.com/siGSCa1vT4
— Karan Dhaliwal (@KarandhaliwalO7) December 31, 2020
‘ಪ್ರತಿಭಟನೆ, ಚಳವಳಿಗಳನ್ನು ಹತ್ತಿಕ್ಕಲು ಚಳವಳಿ ನಡೆಸುವವರನ್ನೇ ತಪ್ಪಾಗಿ ವ್ಯಾಖ್ಯಾನಿಸುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚಾಗಿತ್ತು. ದೆಹಲಿ ಚಲೋಗೂ ಈ ಅಪಾಯ ಎದುರಾಗಿತ್ತು. ಒಂದು ಹಂತದಲ್ಲಿ ಚಳವಳಿಕಾರರನ್ನು ದೇಶ ವಿರೋಧಿಗಳೆಂದು ಬಿಂಬಿಸಲಾಯಿತು. ಖಲಿಸ್ತಾನಿ ಪರ ಹೋರಾಟವೆಂದು ವ್ಯಾಖ್ಯಾನಿಸಲಾಯಿತು. ಇಂತಹ ಅಪವ್ಯಾಖ್ಯಾನಗಳನ್ನು ತಡೆಯಲೆಂದು ಪ್ರತಿದಿನ ನೂರಾರು ಪೋಸ್ಟ್ಗಳನ್ನು ಚಳವಳಿನಿರತ ಯುವಕರು ಬರೆದರು. ಟ್ವಿಟರ್ ಟ್ರೆಂಡಿಂಗ್ಗಳನ್ನು ಸೃಷ್ಟಿ ಮಾಡಿದೆವು’ ಎಂದು ರಾಷ್ಟ್ರೀಯ ಸುದ್ದಿತಾಣವೊಂದಕ್ಕೆ @Tractor2twitr ಖಾತೆಯ ಅಡ್ಮಿನ್ ವಿವರಿಸುತ್ತಾರೆ. 23 ಸಾವಿರಕ್ಕೂ ಹೆಚ್ಚು ಹಿಂಬಾಲಕರಿರುವ ಈ ಖಾತೆಯಂತಹ ನೂರಾರು ಖಾತೆಗಳು ದೆಹಲಿ ಚಲೋದ ಮುಖ್ಯ ಭಾಗವಾಗಿದ್ದವು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕೇಂದ್ರ ಸರ್ಕಾರದ ಸಚಿವರು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ರೈತರ ಚಳವಳಿ ದಾರಿ ತಪ್ಪುತ್ತಿದೆ ಎಂದು ಹೇಳುತ್ತಲೇ ಇದ್ದರು. ದೇಶದ ಜನರನ್ನು ಮುಖ್ಯ ವಾಹಿನಿಯ ಮಾಧ್ಯಮಗಳ ಮೂಲಕ ತಲುಪುವ ಮೂಲಕ ದೆಹಲಿ ಚಲೋವನ್ನು ಕುಗ್ಗಿಸುವ ಪ್ರಯತ್ನಗಳು ಪರೋಕ್ಷವಾಗಿ ನಡೆದವು. ಆದರೆ ಈ ಪ್ರಯತ್ನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಚಿತ್ರ, ಬರಹಗಳೇ ಸುಳ್ಳಾಗಿಸುತ್ತಿದ್ದವು ಎಂದು ಸಾಮಾಜಿಕ ಮಾಧ್ಯಮದಲ್ಲಿ ಚಳವಳಿ ನಿರತ ಯುವಕರೋರ್ವರು ವಿವರಿಸುತ್ತಾರೆ. ರೈತ ಚಳವಳಿಯ ಚಿತ್ರಗಳು ಅಷ್ಟು ಪರಿಣಾಮಕಾರಿಯಾಗಿದ್ದವು.
When you eat food today, it is necessary to think once who has grown it and how much dedication and devotion it has taken. Every kitchen is built by these farmers.#YourKitchenVsTheirKitchen #NoFarmersNoFood #SupportFarmers #FarmersProtest #TractorToTwitter @bymahiofficial @kisaan pic.twitter.com/HRAFvRKi2N
— RUPESH SAHAY (@sahayrupesh) January 2, 2021
ಚಳವಳಿನಿರತ ರೈತ ಸಂಘಟನೆಯೊಂದರ ಖಾತೆಯನ್ನು ಫೇಸ್ಬುಕ್ನ ಸ್ವಯಂಚಾಲಿತ ವ್ಯವಸ್ಥೆ ಟ್ರಾಶ್ ಎಂದು ಪರಿಗಣಿಸಿ ಮೂರು ಘಂಟೆಗಳ ಕಾಲ ಸ್ಥಗಿತಗೊಳಿಸಿತ್ತು. ಖಾತೆಯಲ್ಲಿ ಏಕಾಏಕಿ ಕಂಟೆಂಟ್ಗಳು ಪೋಸ್ಟ್ ಆದ ಕಾರಣ ತನ್ನ ಸ್ವಯಂ ಚಾಲಿತ ವ್ಯವಸ್ಥೆಯಿಂದ ಹೀಗಾಗಿದೆ ಎಂದು ಸ್ಪಷ್ಟೀಕರಣ ನೀಡಿದ ಫೇಸ್ಬುಕ್, ಖಾತೆಯನ್ನು ಪುನಃ ಸಕ್ರಿಯಗೊಳಿಸಿತ್ತು. ಖಾತೆ ಸ್ಥಗಿತಗೊಳಿಸಿದ್ದನ್ನು ರೈತ ಸಂಘಟನೆ ತೀವ್ರವಾಗಿ ಖಂಡಿಸಿತ್ತು. ತಮ್ಮ ಸಂದೇಶಗಳನ್ನು ತಲುಪಿಸಲು ಫೇಸ್ಬುಕ್ ಬೇಕೆಂದೇ ಒಡ್ಡಿದ ತಡೆ ಇದು ಎಂದು ದೂರಿತ್ತು.
ಸಾಮಾಜಿಕ ತಾಣಗಳ ಪರಿಣಾಮಕಾರಿ ಬಳಕೆ ಚಳವಳಿಗಳನ್ನು ರೂಪಿಸಬಲ್ಲದು, ಚಳವಳಿಗಳನ್ನು ಬಲಪಡಿಸಬಲ್ಲದು. ಅಧಿಕಾರಕ್ಕೆ ತರಬಲ್ಲದು, ಅಧಿಕಾರದಿಂದ ಕೆಳಗಿಳಿಸಲೂಬಲ್ಲದು ಎಂಬುದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಪದೇಪದೇ ಸಾಬೀತಾಗುತ್ತಲೇ ಇದೆ. 2020ರಲ್ಲಿ ಇದಕ್ಕೆ ಸ್ಪಷ್ಟ ಉದಾಹರಣೆ ದೆಹಲಿ ಚಲೋ.
Delhi Chalo | ಸರ್ಕಾರ-ರೈತರ ನಡುವಿನ 7ನೇ ಸುತ್ತಿನ ಸಭೆಯಲ್ಲಿ ನಡೆದ 5 ಮುಖ್ಯ ಬೆಳವಣಿಗೆಗಳು
Published On - 6:52 am, Wed, 6 January 21