ದೆಹಲಿ: ಭಾರತದಲ್ಲಿ ನಿನ್ನೆ ಹೊಸದಾಗಿ 36,011 ಪ್ರಕರಣಗಳು ಪತ್ತೆಯಾಗಿದ್ದು ಆರಂಭದಿಂದ ಇಲ್ಲಿಯ ತನಕದ ಕೊವಿಡ್ ಪ್ರಕರಣಗಳ ಸಂಖ್ಯೆ 96,44,222ಕ್ಕೆ ತಲುಪಿದೆ. ಆದರೆ, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,03,248ರಷ್ಟಿದ್ದು ಕಳೆದ 138 ದಿನಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದ ಆಸುಪಾಸಿಗೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಇದುವರೆಗೆ 91,00,792 ಜನ ಕೊವಿಡ್ ಸೋಂಕಿನಿಂದ ಪಾರಾಗಿದ್ದು ಗುಣಮುಖರಾಗುತ್ತಿರುವವರ ಪ್ರಮಾಣ ಶೇ.94.37ಕ್ಕೆ ತಲುಪಿದೆ. ನಿನ್ನೆ 482 ಜನ ಸೋಂಕಿಗೆ ಮೃತಪಡುವ ಮೂಲಕ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 1,40,182ಕ್ಕೆ ತಲುಪಿದೆ. ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿ ನಿಂತಿದೆ. ಸಾವಿಗೀಡಾದವರಲ್ಲಿ ಶೇ.70ರಷ್ಟು ಜನ ಕೊವಿಡ್ ಸೋಂಕಿಗೆ ಒಳಗಾಗುವ ಮೊದಲು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸದ್ಯ ಭಾರತದಲ್ಲಿ ದಾಖಲಾದ ಕೊವಿಡ್ ಪ್ರಕರಣಗಳ ಪ್ರಮಾಣವು ವಿಶ್ವದ ಒಟ್ಟಾರೆ ಪ್ರಕರಣಗಳ ಶೇ.4.18ರಷ್ಟಿದೆ. ಇದುವರೆಗೂ ದೇಶದಲ್ಲಿ 14,69,86,555 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ನಿನ್ನೆ ಒಂದೇ ದಿನ 11,01,063 ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Published On - 12:49 pm, Sun, 6 December 20