ದೆಹಲಿ ಒಂದೇ ಯಾಕೆ? ಇನ್ನೂ 4 ರಾಜಧಾನಿಗಳಿರಲಿ: ಮಮತಾ ಬ್ಯಾನರ್ಜಿ ಹೊಸ ರಾಗ
ಮೋದಿ ಸರ್ಕಾರ ರದ್ದುಗೊಳಿಸಿದ ಯೋಜನಾ ಆಯೋಗವನ್ನು ಪುನಃ ರಚಿಸಬೇಕು. ನೀತಿ ಆಯೋಗ ಮತ್ತು ಯೋಜನಾ ಆಯೋಗಗಳು ಒಟ್ಟಿಗೆ ಕೆಲಸ ನಿರ್ವಹಿಸಬಹುದಾಗಿದೆ. ಅದರಲ್ಲೂ ಯೋಜನಾ ಆಯೋಗ ನೇತಾಜಿಯವರ ಪರಿಕಲ್ಪನೆಯಾಗಿತ್ತು ಎಂದು ದೀದಿ ಹೇಳಿದರು.
ಕೋಲ್ಕತ್ತಾ: ಭಾರತಕ್ಕೆ ಯಾಕೆ ಒಂದೇ ರಾಜಧಾನಿ ಇರಬೇಕು? ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನದ ಪ್ರಯುಕ್ತ ಇಂದು ಕೋಲ್ಕತ್ತಾದ ನೇತಾಜಿ ಭವನ್ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತಕ್ಕೆ ದೆಹಲಿ ಮಾತ್ರ ರಾಜಧಾನಿ ಇರಬಾರದು. ಪರ್ಯಾಯವಾಗಿ ಒಟ್ಟು 4 ರಾಜಧಾನಿಗಳನ್ನು ಹೊಂದಬೇಕು ಎಂದು ಆಗ್ರಹಿಸಿದರು. ಹಾಗೇ, ಬ್ರಿಟಿಷರು ನಮ್ಮ ದೇಶಕ್ಕೆ ಬಂದಾಗ ಅವರ ರಾಜಧಾನಿ ಕೋಲ್ಕತ್ತಾ ಆಗಿತ್ತು. ಅಲ್ಲಿಂದ ಇಡೀ ದೇಶವನ್ನು ಆಳಿದ್ದರು ಎಂಬುದನ್ನೂ ನೆನಪಿಸಿದರು.
ಯೋಜನಾ ಆಯೋಗವನ್ನು ಪುನಃ ರಚಿಸಬೇಕು: ಹಾಗೇ ಮೋದಿ ಸರ್ಕಾರ ರದ್ದುಗೊಳಿಸಿದ ಯೋಜನಾ ಆಯೋಗವನ್ನು ಪುನಃ ರಚಿಸಬೇಕು. ನೀತಿ ಆಯೋಗ ಮತ್ತು ಯೋಜನಾ ಆಯೋಗಗಳು ಒಟ್ಟಿಗೆ ಕೆಲಸ ನಿರ್ವಹಿಸಬಹುದಾಗಿದೆ. ಅದರಲ್ಲೂ ಯೋಜನಾ ಆಯೋಗ ನೇತಾಜಿಯವರ ಪರಿಕಲ್ಪನೆಯಾಗಿತ್ತು. ಶೀಘ್ರವೇ ಅದನ್ನು ಸ್ಥಾಪಿಸಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು. ಹಾಗೇ ನೇತಾಜಿ ಜನ್ಮದಿನದಂದು ರಾಷ್ಟ್ರೀಯ ರಜಾ ದಿನ ಎಂದು ಘೋಷಿಸುವಂತೆಯೂ ಹೇಳಿದ್ದಾರೆ.
ಸುಭಾಷ್ ಚಂದ್ರ ಬೋಸ್ರು ಭಾರತೀಯ ಸೇನೆಯನ್ನು ರೂಪಿಸಿದಾಗ ಗುಜರಾತ್, ಪಶ್ಚಿಮ ಬಂಗಾಳ, ತಮಿಳುನಾಡು ಎಲ್ಲ ಕಡೆಯಿಂದಲೂ ಜನರನ್ನು ಸೇರಿಸಿಕೊಂಡರು. ಅವರು ಬ್ರಿಟಿಷರ ಒಡೆದು ಆಳುವ ನೀತಿಯನ್ನು ವಿರೋಧಿಸಿದ್ದರು. ಅಂಥ ಧೀಮಂತ ವ್ಯಕ್ತಿಯ ಸ್ಮಾರಕವನ್ನು ನಾವು ಕೋಲ್ಕತ್ತಾದಲ್ಲಿ ಆಜಾದ್ ಹಿಂದ್ ಹೆಸರಿನಲ್ಲಿ ನಿರ್ಮಾಣ ಮಾಡಲಿದ್ದೇವೆ ಎಂದು ತಿಳಿಸಿದರು.
ಸುಭಾಷ್ಚಂದ್ರ ಬೋಸ್ 125ನೇ ಜಯಂತಿ: ಶಂಖನಾದ ಮಾಡಿ ಮಮತಾ ಬ್ಯಾನರ್ಜಿ ಪಾದಯಾತ್ರೆ