6 ಜನ ರಚಿಸಿರುವ ‘ಚಕ್ರವ್ಯೂಹ’ದಲ್ಲಿ ಆಧುನಿಕ ಭಾರತ ಸಿಲುಕಿದೆ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

|

Updated on: Jul 29, 2024 | 5:08 PM

2024ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಲೋಕಸಭೆಯಲ್ಲಿ ಮಂಡಿಸಿದರು. ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಭಾರತವನ್ನು ಭಯದ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ.

6 ಜನ ರಚಿಸಿರುವ ಚಕ್ರವ್ಯೂಹದಲ್ಲಿ ಆಧುನಿಕ ಭಾರತ ಸಿಲುಕಿದೆ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us on

ನವದೆಹಲಿ: ಲೋಕಸಭೆ ಅಧಿವೇಶನದಲ್ಲಿ ನಡೆಯುತ್ತಿರುವ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಮಾತನಾಡಿದ್ದಾರೆ. ‘ದೇಶದಲ್ಲಿ ಭಯದ ವಾತಾವರಣವಿದೆ’ ಎಂದು ಬಿಜೆಪಿಯನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಆಧುನಿಕ ಕಾಲದ ‘ಚಕ್ರವ್ಯೂಹ’ದಲ್ಲಿ ಭಾರತೀಯರನ್ನು ಸಿಕ್ಕಿಹಾಕಿಸಿದೆ ಎಂದಿದ್ದಾರೆ.

ಹಿಂದೂ ಮಹಾಕಾವ್ಯ ಮಹಾಭಾರತವನ್ನು ಉಲ್ಲೇಖಿಸಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ. ಆ ‘ಚಕ್ರವ್ಯೂಹ’ವನ್ನು ಪಿಎಂ ನರೇಂದ್ರ ಮೋದಿ ನೇತೃತ್ವದ 6 ಜನರು ನಡೆಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದು ಸಂಸತ್ತಿನಲ್ಲಿ ದೊಡ್ಡ ಪ್ರತಿಭಟನೆಗಳನ್ನು ಉಂಟುಮಾಡಿತು.

ಇದನ್ನೂ ಓದಿ: Modi Mann Ki Baat: ಪ್ಯಾರಿಸ್ ಒಲಿಂಪಿಕ್ಸ್​ ಅಥ್ಲೀಟ್​ಗಳನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಮನವಿ

“ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ 6 ಜನರು ಅಭಿಮನ್ಯುವನ್ನು ‘ಚಕ್ರವ್ಯೂಹ’ದಲ್ಲಿ ಸಿಲುಕಿಸಿ ಕೊಂದರು. ನಾನು ಕೂಡ ಆ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದ್ದೇನೆ. ‘ಚಕ್ರವ್ಯೂಹ’ವನ್ನು ‘ಪದ್ಮವ್ಯೂಹ’ ಎಂದೂ ಕರೆಯಲಾಗುತ್ತದೆ. ಅದರ ಅರ್ಥ ‘ಕಮಲ ರಚನೆ’ ಎಂದು ತಿಳಿಯಿತು. ಚಕ್ರವ್ಯೂಹವು ಕಮಲದ ಆಕಾರದಲ್ಲಿದೆ” ಎಂದು ಕಳೆದ ವಾರ ಮಂಡಿಸಿದ ಕೇಂದ್ರ ಬಜೆಟ್ ಮೇಲಿನ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದರು.


ಬಿಜೆಪಿಯ ಚಿಹ್ನೆಯನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶ ಈಗ ಕಮಲದ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಮಲದ ಚಿಹ್ನೆಯನ್ನು ಪ್ರಮುಖವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ ಅವರು 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹವನ್ನು ರಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ: ರೈತರೊಂದಿಗೆ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಭರವಸೆ

ಬಿಜೆಪಿ ರಚಿಸಿರುವ ಚಕ್ರವ್ಯೂಹ ಇಂದಿಗೂ ಆರು ಜನರ ನಿಯಂತ್ರಣದಲ್ಲಿದೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿಯವರ ನಿಯಂತ್ರಣದಲ್ಲಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.


ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರ ಮಧ್ಯಪ್ರವೇಶದ ನಂತರ, “ನೀವು ಬಯಸಿದರೆ, ನಾನು ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಅವರ ಹೆಸರನ್ನು ಬಿಟ್ಟುಬಿಡುತ್ತೇನೆ ಮತ್ತು ಕೇವಲ 3 ಹೆಸರುಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Mon, 29 July 24