ಯುದ್ಧ ಬೇಡ ಶಾಂತಿ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಿ ಎಂದು ರಷ್ಯಾ-ಉಕ್ರೇನ್ (Russia-Ukraine)ಗಳಿಗೆ ಭಾರತ ಮನವಿ ಮಾಡುತ್ತಲೇ ಬಂದಿತ್ತು. ಆದರೆ ಈಗಂತೂ ಪರಿಸ್ಥಿತಿ ಕೈಮೀರಿ ಹೋಗಿದೆ. ರಷ್ಯಾ ತನ್ನ ನೆರೆರಾಷ್ಟ್ರ ಉಕ್ರೇನ್ ಮೇಲೆ ದಾಳಿ ನಡೆಸಿ 10ದಿನಗಳೇ ಕಳೆದು ಹೋಗಿವೆ. ಈ ಮಧ್ಯೆ ಭಾರತ, ಕದನ ವಿರಾಮ ಘೋಷಿಸುವಂತೆ ರಷ್ಯಾ ಮತ್ತು ಉಕ್ರೇನ್ಗಳಿಗೆ ಒತ್ತಾಯಿಸಿದೆ. ಯುದ್ಧ ತೀವ್ರವಾಗಿರುವ ಅದರಲ್ಲೂ ಖಾರ್ಕೀವ್ ಮತ್ತು ಸುಮಿ ವಲಯಗಳಲ್ಲಿ ಸಿಲುಕಿರುವ ಇನ್ನೂ ಸುಮಾರು 3 ಸಾವಿರ ಭಾರತೀಯ ನಾಗರಿಕರನ್ನು ತುರ್ತಾಗಿ ಸುರಕ್ಷಿತಗೊಳಿಸಬೇಕಾಗಿದೆ. ಆದರೆ ಇಲ್ಲಿ ನಿರಂತರವಾಗಿ ಶೆಲ್ ದಾಳಿ, ಬಾಂಬ್ ಸ್ಫೋಟಗಳು ಉಂಟಾಗುತ್ತಿದ್ದು, ವಿದ್ಯಾರ್ಥಿಗಳು ಹೊರಬೀಳುವುದೇ ಕಷ್ಟವಾಗಿದೆ. ನೀವು ಈ ಸ್ಥಳಗಳಲ್ಲಿ ಕದನ ವಿರಾಮ ಘೋಷಿಸಿದರೆ, ನಮಗೆ ಸ್ಥಳಾಂತರ ಕಾರ್ಯ ಸುಲಭವಾಗುತ್ತದೆ ಎಂದು ಭಾರತ ಹೇಳಿದ್ದಾಗಿ ವರದಿಯಾಗಿದೆ.
ಉಕ್ರೇನ್ನ ಸುಮಿ ಯುದ್ಧವಲಯದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನಮಗೆ ಕಾಳಜಿಯಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರತೆ ಹೆಚ್ಚಾಗಿರುವ ಸುಮಿಯಲ್ಲಿ ಇರುವ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಹೊರಬೀಳಬೇಡಿ. ಸಾಧ್ಯವಾದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಶೆಲ್ಟರ್ಗಳ ಒಳಗೇ ಇರಿ. ಎಲ್ಲರನ್ನೂ ರಕ್ಷಣೆ ಮಾಡುವ ಸಲುವಾಗಿ, ಕದನ ವಿರಾಮ ಘೋಷಿಸಿ ಸುರಕ್ಷಿತ ಕಾರಿಡಾರ್ ಸೃಷ್ಟಿಸಿಕೊಡುವಂತೆ ಭಾರತ ರಷ್ಯಾ ಮತ್ತು ಉಕ್ರೇನ್ಗೆ ನಾವು ಒತ್ತಾಯಿಸಿದ್ದೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
ಹಾಗೇ, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಘರ್ಷಣೆಯ ನಡುವೆ, ಭಾರತೀಯ ವಿದ್ಯಾರ್ಥಿಗಳು ಮತ್ತು ಉಕ್ರೇನ್ನಲ್ಲಿ ಸಿಲುಕಿರುವ ಇತರ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಪೂರ್ವ ಉಕ್ರೇನ್ ನಗರಗಳಾದ ಖಾರ್ಕಿವ್ ಮತ್ತು ಸುಮಿಗೆ ಹೋಗಲು ರಷ್ಯಾದ ಬಸ್‌ಗಳು ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಸಿದ್ಧವಾಗಿವೆ ಎಂದು ರಷ್ಯಾ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಖಾರ್ಕಿವ್ ಮತ್ತು ಸುಮಿಗೆ ಹೋಗಲು ಸಿದ್ಧವಾಗಿರುವ ‘ನೆಖೋಟೀವ್ಕಾ’ ಮತ್ತು ‘ಸುಡ್ಜಾ’ ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಇಂದು ಬೆಳಿಗ್ಗೆ 6ರಿಂದ 130 ಆರಾಮದಾಯಕ ಬಸ್‌ಗಳು ಕಾಯುತ್ತಿವೆ.
ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮಾಡಿದ್ದನ್ನೇ ಪ್ರತಿಪಕ್ಷಗಳು ಉಕ್ರೇನ್ ವಿಚಾರದಲ್ಲೂ ಮಾಡುತ್ತಿವೆ: ಪ್ರಧಾನಿ ನರೇಂದ್ರ ಮೋದಿ
Published On - 9:19 am, Sat, 5 March 22