ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುತ್ತಿರುವ ಭಾರತೀಯ ವಾಯುಪಡೆ (Air Force) ತನ್ನ ವಿಮಾನ ಸಂಚಾರಕ್ಕೆ ಪಾಕಿಸ್ತಾನ ವಾಯುಮಾರ್ಗವನ್ನು ಬಳಸುತ್ತಿಲ್ಲ ಎಂದು ಹೇಳಲಾಗಿದೆ. ಐಎಎಫ್ನ ಸಿ-17 ಗ್ಲೋಬ್ಮಾಸ್ಟರ್ ಟ್ರಾನ್ಸ್ಪೋರ್ಟ್ನ ನಾಲ್ಕು ವಿಮಾನಗಳು ಯುದ್ಧ ಪೀಡಿತ ಉಕ್ರೇನ್ನಿಂದ (Ukraine)ಭಾರತೀಯರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿವೆ. ಈಗಾಗಲೇ ಏರ್ಫೋರ್ಸ್ ವಿಮಾನಗಳು 800 ಭಾರತೀಯರನ್ನು ಕರೆತಂದಿವೆ. ಆದರೆ ಇವು ಪಾಕಿಸ್ತಾನದ ಏರ್ಸ್ಪೇಸ್ ಬಳಸಿಕೊಳ್ಳುತ್ತಿಲ್ಲ. ಇಂಥ ಸಂದರ್ಭದಲ್ಲಿ ನಾವ್ಯಾಕೆ ಪಾಕಿಸ್ತಾನದಿಂದ ಸಹಾಯ ಕೇಳಬೇಕು? ಆ ದೇಶದಿಂದ ಮಿಲಿಟರಿ ಸಹಕಾರವನ್ನು ಕೇಳಬೇಕು? ಪಾಕಿಸ್ತಾನ ವಾಯುಮಾರ್ಗ ಬಳಸಿಕೊಳ್ಳದೆ ಇದ್ದರೆ 25-30 ನಿಮಿಷ ಹೆಚ್ಚು ಸಮಯ ಬೇಕಾಗಬಹುದು ಹೊರತು ಇನ್ನೇನೂ ವ್ಯತ್ಯಾಸ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಉಕ್ರೇನ್ನಲ್ಲಿ ಪರಿಸ್ಥತಿ ಹದಗೆಟ್ಟಿದೆ. ಭಾರತೀಯರು ಸೇರಿ ಹಲವು ದೇಶಗಳ ಪ್ರಜೆಗಳನ್ನು ಬಂಕರ್ನಲ್ಲಿ, ಹಾಸ್ಟೆಲ್ನ ಬೇಸ್ಮೆಂಟ್ಗಳಲ್ಲಿ ಅವಿತಿಟ್ಟುಕೊಂಡು ಜೀವ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ವಾಪಸ್ ಕರೆತರಲು ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಎಂಬ ಕಾರ್ಯಾಚರಣೆ ನಡೆಸುತ್ತಿದೆ. ಇನ್ನಿತರ ಕಮರ್ಷಿಯಲ್ ವಿಮಾನಗಳ ಜತೆ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ. ಈ ಹಿಂದೆ ಲಡಾಖ್ನಲ್ಲಿ ಚೀನಾದೊಂದಿಗೆ ಸಂಘರ್ಷ ಹೆಚ್ಚಾಗಿದ್ದಾಗ ಅಲ್ಲಿಗೆ ಯುದ್ಧ ಟ್ಯಾಂಕ್ಗಳನ್ನು ಸಾಗಿಸಿದ್ದು ಇದೇ ಸಿ-17 ಗ್ಲೋಬ್ ಮಾಸ್ಟರ್ ಏರ್ಕ್ರಾಫ್ಟ್. ಅಷ್ಟೇ ಅಲ್ಲ, ಕೊವಿಡ್ 19 ಎರಡನೇ ಅಲೆಯಲ್ಲಿ ದೇಶದಲ್ಲಿ ಆಕ್ಸಿಜನ್ ಕೊರತೆಯಾದಾಗ ವಿವಿಧ ದೇಶಗಳಿಂದ ಆಕ್ಸಿಜನ್ ಟ್ಯಾಂಕರ್ ಹೊತ್ತು ತಂದಿದೆ. ಇತ್ತೀಚೆಗೆ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗ ಅಲ್ಲಿರುವವ ಭಾರತೀಯರು, ಅಲ್ಪಸಂಖ್ಯಾತರನ್ನೂ ಹೊತ್ತು ತಂದಿದ್ದು ಇದೇ ವಿಮಾನವಾಗಿದೆ. ಸುಮಾರು 80 ಟನ್ಗಳಷ್ಟು ತೂಕವನ್ನು ಹೊರಬಲ್ಲ ಸಾಮರ್ಥ್ಯ ಇರುವ ಸಿ-17 ಗ್ಲೋಬ್ ಮಾಸ್ಟರ್ ಸದ್ಯ ಉಕ್ರೇನ್ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್ ಜತೆ ಫೋನ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ; ಭಾರತೀಯರ ಸ್ಥಳಾಂತರದ ಬಗ್ಗೆ ಚರ್ಚೆ
Published On - 9:57 am, Thu, 3 March 22