ಭಾರತೀಯ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ, ವಿಮರ್ಶಕ ಸುನಿಲ್ ಕೊಠಾರಿ ನಿಧನ
ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಅದಮ್ಯ ಸೇವೆ ಸಲ್ಲಿಸಿದ್ದ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ ಹಾಗೂ ವಿಮರ್ಶಕ ಸುನಿಲ್ ಕೊಠಾರಿ (87) ನಿಧನರಾಗಿದ್ದಾರೆ.
ದೆಹಲಿ: ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಅದಮ್ಯ ಸೇವೆ ಸಲ್ಲಿಸಿದ್ದ ನಾಟ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ ಹಾಗೂ ವಿಮರ್ಶಕ ಸುನಿಲ್ ಕೊಠಾರಿ (87) ನಿಧನರಾಗಿದ್ದಾರೆ. ಇಂದು ಮುಂಜಾನೆಯ ವೇಳೆ ಹೃದಯಾಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಕೊಠಾರಿ ಕೊನೆಯುಸಿರೆಳೆದಿದ್ದಾರೆ. ದೆಹಲಿಯಲ್ಲಿ ವಾಸವಾಗಿದ್ದ ಅವರು, ನವೆಂಬರ್ ತಿಂಗಳಲ್ಲಿ ಕೊವಿಡ್-19ಗೆ ತುತ್ತಾಗಿದ್ದರು.
‘ನಾವು ಖುಷಿ, ದುಃಖಗಳನ್ನು ಹಂಚಿಕೊಂಡಿದ್ದೆವು. ಹಲವು ವಿಚಾರಗಳಿಗೆ ಜಗಳವಾಡಿದ್ದೆವು. ನಂತರ ಎಲ್ಲವನ್ನೂ ಮರೆತು ಸಹಜವಾಗಿ ಬದುಕಿದ್ದೆವು. ಅದೆಲ್ಲವನ್ನೂ ಸಾಧ್ಯವಾಗಿಸಲು ಈಗ ನೀವು ಇಲ್ಲಿಲ್ಲ. ನೀವು ಅತಿಯಾಗಿ ಪ್ರೀತಿಸುತ್ತಿದ್ದ ನೃತ್ಯ ಪ್ರಪಂಚ ಈಗ ಖಾಲಿಯಾದಂತೆ ಭಾಸವಾಗುತ್ತಿದೆ. ನೀವು ಬಿಟ್ಟು ಹೋದ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಭಾರತದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಟಿವಿ9 ಕನ್ನಡ ಡಿಜಿಟಲ್ನೊಂದಿಗೆ ಸುನಿಲ್ ಕೊಠಾರಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸುನಿಲ್ ಕೊಠಾರಿ ಅವರು 2001ರಲ್ಲಿ ಪದ್ಮಶ್ರೀ ಹಾಗೂ 1995ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಅವರು, ಮುಂಬೈನ ಸಿಡೆನ್ಹ್ಯಾಮ್ ವಾಣಿಜ್ಯ ಹಾಗೂ ಅರ್ಥಶಾಸ್ತ್ರ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಗಿದ್ದರು.
ಭಾರತೀಯ ನಾಟ್ಯಶಾಸ್ತ್ರದ ಹಲವು ವಿಧಾನಗಳ ಬಗ್ಗೆ ಸಂಶೋಧನೆ ನಡೆಸಿದ್ದ ಸುನಿಲ್ ಕೊಠಾರಿ, ಭಾಗವತ ಮೇಳ ನಾಟಕ, ಕೂಚಿಪುಡಿ, ಕೊರವಂಜಿ ವಿಷಯಗಳ ಅಧ್ಯಯನಕ್ಕೆ ಪಿಎಚ್ಡಿಯನ್ನೂ ಪಡೆದಿದ್ದರು. ಉತ್ತರ ಗುಜರಾತ್ನ ನೃತ್ಯ ಶಿಲ್ಪಕಲೆಗಳ ಸಂಶೋಧನೆಗೆ, ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯ 1986ರಲ್ಲಿ ಡಿ.ಲಿಟ್ ನೀಡಿ ಗೌರವಿಸಿತ್ತು. ಭಾರತೀಯ ನಾಟ್ಯಶಾಸ್ತ್ರದ ವಿವಿಧ ಪ್ರಕಾರಗಳ ಬಗ್ಗೆ 20 ಪುಸ್ತಕಗಳನ್ನೂ ಬರೆದಿದ್ದರು.
ಹಿರಿಯ ವಿದ್ವಾಂಸರ ನಿಧನಕ್ಕೆ ಪದ್ಮಶ್ರೀ ಗೀತಾ ಚಂದ್ರನ್, ಶೋಭನಾ ನಾರಾಯಣ್, ಮಲ್ಲಿಕಾ ಸಾರಾಭಾಯ್ ಮುಂತಾದವರು ಕಂಬನಿ ಮಿಡಿದಿದ್ದಾರೆ.
Published On - 1:09 pm, Sun, 27 December 20