3 ಮಕ್ಕಳನ್ನು ಮಾಡಿಕೊಳ್ಳಿ; ಭಾರತೀಯರಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ

ದೇಶದಲ್ಲಿನ ಜನಸಂಖ್ಯಾ ಅಸಮತೋಲನವನ್ನು ಎತ್ತಿ ತೋರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎಲ್ಲಾ ಭಾರತೀಯರು 3 ಮಕ್ಕಳನ್ನು ಹೊಂದಬೇಕು ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯ ಕುಟುಂಬಗಳು ಮೂರು ಮಕ್ಕಳನ್ನು ಹೊಂದಬೇಕೆಂದು ಒತ್ತಾಯಿಸಿದ್ದಾರೆ. ಕುಟುಂಬದ ಚಲನಶೀಲತೆ ಮತ್ತು ದೇಶದ ಜನಸಂಖ್ಯಾ ಸಮತೋಲನಕ್ಕೆ ಇದರಿಂದ ಆಗುವ ಪ್ರಯೋಜನಗಳನ್ನು ಅವರು ಎತ್ತಿ ತೋರಿಸಿದ್ದಾರೆ.

3 ಮಕ್ಕಳನ್ನು ಮಾಡಿಕೊಳ್ಳಿ; ಭಾರತೀಯರಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ
Mohan Bhagwat

Updated on: Aug 28, 2025 | 7:54 PM

ನವದೆಹಲಿ, ಆಗಸ್ಟ್ 28: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಭಾರತದಲ್ಲಿನ ಕುಟುಂಬಗಳು 3 ಮಕ್ಕಳನ್ನು ಹೊಂದಬೇಕು ಎಂದು ಹೇಳಿದ್ದಾರೆ. ಭಾರತೀಯ ಪೋಷಕರು ಮೂರು ಮಕ್ಕಳನ್ನು ಹೊಂದುವುದನ್ನು ಬೆಂಬಲಿಸುವುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ದೇಶದಲ್ಲಿ ಜನಸಂಖ್ಯಾ ಕುಸಿತವನ್ನು ತಡೆಯಲು ಇದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) 100 ವರ್ಷದ ಪ್ರಯುಕ್ತ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ದೇಶದ ಜನಸಂಖ್ಯೆಯು 2.1ರ ಫಲವತ್ತತೆ ದರವನ್ನು ಹೊಂದಿದೆ. ದೇಶದಲ್ಲಿ ಜನಸಂಖ್ಯೆಯು ನಿಯಂತ್ರಣದಲ್ಲಿದೆ ಎಂದ ಅವರು ಮತಾಂತರ, ಒಳನುಸುಳುವಿಕೆ ಮತ್ತು ಹಿಂದೂ-ಮುಸ್ಲಿಂ ಏಕತೆಯ ಬಗ್ಗೆಯೂ ಮಾತನಾಡಿದರು. ಸಂಘರ್ಷವನ್ನು ನಿಯಂತ್ರಿಸಲು ವಿಶ್ವಾಸ ಮತ್ತು ಸಹಬಾಳ್ವೆಯನ್ನು ಒತ್ತಾಯಿಸಿದರು.


ಮನೆ ಮತ್ತು ದೇಶ ಎರಡಕ್ಕೂ ಮೂರು ಮಕ್ಕಳನ್ನು ಹೊಂದುವುದು ಮುಖ್ಯ ಎಂದು ಮೋಹನ್ ಭಾಗವತ್ ವಾದಿಸಿದರು. “ಮೂರು ಮಕ್ಕಳನ್ನು ಹೊಂದುವುದು ಬಹಳ ಮುಖ್ಯ. ಮೂರು ಮಕ್ಕಳಿರುವ ಕುಟುಂಬಗಳಲ್ಲಿ ಅವರು ಅಹಂ ಮತ್ತು ಪರಸ್ಪರ ಚಲನಶೀಲತೆಯನ್ನು ನಿರ್ವಹಿಸಲು ಕಲಿಯುತ್ತಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ದೌರ್ಜನ್ಯ ನಡೆಸುವವರನ್ನು ಕೊಲ್ಲುವುದು ಕೂಡ ಧರ್ಮ; ಪಹಲ್ಗಾಮ್ ದಾಳಿ ಕುರಿತು ಮೋಹನ್ ಭಾಗವತ್ ಪ್ರತಿಕ್ರಿಯೆ

2.1ರ ಫಲವತ್ತತೆ ದರವನ್ನು ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿ ಹೋಗುತ್ತವೆ. ಹೀಗಾಗಿ, 3ಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿ ಮೂರು ಮಕ್ಕಳನ್ನು ಹೊಂದುವುದರಿಂದ ಪೋಷಕರು ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿರುತ್ತಾರೆ ಎಂದು ಮೋಹನ್ ಭಾಗವತ್ ಸಲಹೆ ನೀಡಿದರು.


ಜನಸಂಖ್ಯೆಯ ಏರಿಕೆಯು ಒಂದು ವರದಾನವಾಗಬಹುದು. ಹಾಗೇ, ಅದು ಹೊರೆಯೂ ಆಗಬಹುದು ಎಂಬುದನ್ನು ಮರೆಯಬಾರದು ಎಂದು ಅವರು ಒತ್ತಿ ಹೇಳಿದರು. “ಮಕ್ಕಳನ್ನು ಹೆತ್ತರೆ ಸಾಕಾಗದು. ನಾವು ಎಲ್ಲರಿಗೂ ಆಹಾರವನ್ನು ನೀಡಬೇಕು, ವಿದ್ಯೆ ನೀಡಬೇಕು. ಅದಕ್ಕಾಗಿಯೇ ಜನಸಂಖ್ಯಾ ನೀತಿ ಅಸ್ತಿತ್ವದಲ್ಲಿದೆ. ಜನಸಂಖ್ಯೆಯು ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಕುಟುಂಬಗಳು ಮೂರು ಮಕ್ಕಳನ್ನು ಹೊಂದಿರಬೇಕು. ಆದರೆ ಅದನ್ನು ಮೀರಿ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬಾರದು. ಅವರ ಪಾಲನೆ ಸರಿಯಾಗಿರಬೇಕು. ಹೊಸ ಪೀಳಿಗೆಗೆ ಮೂರು ಮಕ್ಕಳು ಇರಬೇಕು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೇವಸ್ಥಾನ, ನೀರು, ಸ್ಮಶಾನದ ನಡುವೆ ಯಾವ ವ್ಯತ್ಯಾಸವೂ ಇರಬಾರದು; ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಭಾರತವು ಕಳೆದ ವರ್ಷ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದ್ದರಿಂದ ಮೋಹನ್ ಭಾಗವತ್ ಅವರ ಹೇಳಿಕೆಗಳು ಮಹತ್ವದ್ದಾಗಿವೆ. ಆದರೆ, ಜೂನ್‌ನಲ್ಲಿ ಬಿಡುಗಡೆಯಾದ ಹೊಸ ವಿಶ್ವಸಂಸ್ಥೆಯ ಜನಸಂಖ್ಯಾ ವರದಿಯ ಪ್ರಕಾರ, ಭಾರತದ ಒಟ್ಟು ಫಲವತ್ತತೆ ದರವು ಬದಲಿ ದರಕ್ಕಿಂತ ಕಡಿಮೆಯಾಗಿದೆ.


“ಜನಸಂಖ್ಯಾಶಾಸ್ತ್ರದ ಬಗ್ಗೆ ನಮಗೆ ಕಾಳಜಿ ಇದೆ. ಜನಸಂಖ್ಯಾ ಸಮತೋಲನ ಬದಲಾದರೆ ದೇಶವು ವಿಭಜನೆಯ ಅಪಾಯವನ್ನು ಎದುರಿಸುತ್ತದೆ. ಪ್ರತಿಯೊಂದು ರಾಷ್ಟ್ರವು ಜನಸಂಖ್ಯಾ ಅಸಮತೋಲನದಿಂದ ಸವಾಲುಗಳನ್ನು ಎದುರಿಸುತ್ತದೆ” ಎಂದು ಅವರು ಹೇಳಿದರು. “ಉದ್ಯೋಗಗಳು ಹೊರಗಿನವರಿಗೆ ಹೋಗಬಾರದು; ಅವು ನಮ್ಮದೇ ದೇಶದಲ್ಲಿ ವಾಸಿಸುವವರಿಗೆ ಹೋಗಬೇಕು. ಒಳನುಸುಳುವಿಕೆಯನ್ನು ನಿಲ್ಲಿಸಬೇಕು” ಎಂದು ಹೇಳಿದರು.


“ಮತಾಂತರವು ಒಂದು ಸಮಸ್ಯೆಯಾಗಿದೆ. ಏಕೆಂದರೆ ಅದು ಸಂಖ್ಯೆಗಳ ಮೇಲೆ ಪರಿಣಾಮ ಬೀರುತ್ತದೆ. ಕ್ಯಾಥೊಲಿಕರು ತಾವು ಅದರಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ ಮತ್ತು ಉಲೇಮಾಗಳು ಅದನ್ನೇ ಹೇಳುತ್ತಾರೆ. ಧರ್ಮವು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ, ಆದ್ದರಿಂದ ಮತಾಂತರವು ಅನಪೇಕ್ಷಿತವಾಗಿದೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:51 pm, Thu, 28 August 25