‘ಬರ್ಗರ್ಸ್, ಕೋಲಾಗಳನ್ನು ಬಹಿಷ್ಕರಿಸಿ’; ಟ್ರಂಪ್ ಸುಂಕದ ವಿರುದ್ಧ ಭಾರತೀಯರಿಗೆ ಬಾಬಾ ರಾಮದೇವ್ ಒತ್ತಾಯ
ಯೋಗ ಗುರು ಬಾಬಾ ರಾಮದೇವ್ ಅವರು ಭಾರತೀಯ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಶೇ. 50ರಷ್ಟು ಸುಂಕದ ನಿರ್ಧಾರವನ್ನು ಟೀಕಿಸಿದ್ದಾರೆ. ಈ ಮೂಲಕ ರಾಜಕೀಯವಾಗಿ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆಕ್ಷೇಪಿಸುತ್ತಿದ್ದಾರೆ. ಭಾರತೀಯರು ಅಮೆರಿಕನ್ ಕಂಪನಿಗಳು ಮತ್ತು ಯುಎಸ್ ಫಾಸ್ಟ್-ಫುಡ್ ದೈತ್ಯ ಕಂಪನಿಗಳನ್ನು ಬಹಿಷ್ಕರಿಸುವಂತೆ ಅವರು ಒತ್ತಾಯಿಸಿದರು.

ನವದೆಹಲಿ, ಆಗಸ್ಟ್ 28: ರಷ್ಯಾದ ತೈಲ ಖರೀದಿಯ ಕಾರಣಕ್ಕೆ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಕ್ರಮದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ತೀವ್ರ ವಾಗ್ದಾಳಿ ನಡೆಸಿದರು. ಎಎನ್‌ಐ ಜೊತೆ ಮಾತನಾಡಿದ ಬಾಬಾ ರಾಮದೇವ್ ಈ ಕ್ರಮವನ್ನು “ರಾಜಕೀಯ ಬೆದರಿಸುವಿಕೆ, ಗೂಂಡಾಗಿರಿ ಮತ್ತು ಸರ್ವಾಧಿಕಾರತ್ವ” ಎಂದು ಟೀಕಿಸಿದರು. ಭಾರತೀಯರು ಅಮೆರಿಕನ್ ಕಂಪನಿಗಳು ಮತ್ತು ಯುಎಸ್ ಫಾಸ್ಟ್-ಫುಡ್ ದೈತ್ಯ ಕಂಪನಿಗಳನ್ನು ಬಹಿಷ್ಕರಿಸುವಂತೆ ಅವರು ಒತ್ತಾಯಿಸಿದರು.
“ಪೆಪ್ಸಿ, ಕೋಕಾ-ಕೋಲಾ, ಸಬ್‌ವೇ, ಕೆಎಫ್‌ಸಿ ಅಥವಾ ಮೆಕ್‌ಡೊನಾಲ್ಡ್ಸ್‌ನ ಕೌಂಟರ್‌ಗಳಲ್ಲಿ ಒಬ್ಬ ಭಾರತೀಯನೂ ಕಾಣಿಸಬಾರದು. ಅಂತಹ ಬೃಹತ್ ಬಹಿಷ್ಕಾರ ಇರಬೇಕು. ಈ ರೀತಿ ಬಹಿಷ್ಕರಿಸಿದರೆ ಅಮೆರಿಕದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಅಮೆರಿಕದಲ್ಲಿ ಉಂಟಾಗುವ ಹಣದುಬ್ಬರವು ಟ್ರಂಪ್ ಸ್ವತಃ ಈ ಸುಂಕಗಳನ್ನು ಹಿಂತೆಗೆದುಕೊಳ್ಳಬೇಕಾದ ಹಂತಕ್ಕೆ ಏರುತ್ತದೆ. ಟ್ರಂಪ್ ಭಾರತದ ವಿರುದ್ಧ ತಿರುಗಿ ಬೀಳುವ ಮೂಲಕ ತಪ್ಪು ಮಾಡಿದ್ದಾರೆ” ಎಂದು ರಾಮದೇವ್ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿಯ ಯುದ್ಧ ಎಂದು ಕರೆದ ಟ್ರಂಪ್ ಸಲಹೆಗಾರ ಪೀಟರ್
ಈ ಅಮೆರಿಕನ್ ಮಳಿಗೆಗಳ ಸಾಮೂಹಿಕ ಬಹಿಷ್ಕಾರವು “ಅಮೆರಿಕದಲ್ಲಿ ಅವ್ಯವಸ್ಥೆ”ಯನ್ನು ಸೃಷ್ಟಿಸುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದು ಹಣದುಬ್ಬರವನ್ನು ಎಷ್ಟು ತೀವ್ರಗೊಳಿಸುತ್ತದೆಯೆಂದರೆ ಟ್ರಂಪ್ ಭಾರತದ ವಿರುದ್ಧ ತಿರುಗಿಬಿದ್ದ ತಮ್ಮ ಪ್ರಮಾದವನ್ನು ಒಪ್ಪಿಕೊಂಡು ಈ ಭಾರೀ ಸುಂಕದ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
“ಭಾರತೀಯ ನಾಗರಿಕರು ಅಮೆರಿಕ ಭಾರತದ ಮೇಲೆ ವಿಧಿಸಿರುವ ಶೇ. 50ರಷ್ಟು ಸುಂಕವನ್ನು ಬಲವಾಗಿ ವಿರೋಧಿಸಬೇಕು. ಅಮೆರಿಕನ್ ಕಂಪನಿಗಳು ಮತ್ತು ಬ್ರ್ಯಾಂಡ್‌ಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟ್ರಂಪ್-ಮೋದಿಯ ಸ್ನೇಹ ಮುರಿದುಬಿದ್ದಿದ್ದು ಹೇಗೆ? ಇಲ್ಲಿಯವರೆಗೂ ಏನೇನಾಯ್ತು?
ಡೊನಾಲ್ಡ್ ಟ್ರಂಪ್ ಅವರು ಅಮೆರಿಕಕ್ಕೆ ಭಾರತೀಯ ಆಮದುಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸಿದೆ. ಬುಧವಾರದಿಂದ (ಆಗಸ್ಟ್ 27) ಈ ನಿಯಮ ಜಾರಿಗೆ ಬಂದಿದೆ. ರಷ್ಯಾದ ತೈಲ ಮತ್ತು ರಕ್ಷಣಾ ಉಪಕರಣಗಳನ್ನು ಖರೀದಿಸುವುದನ್ನು ಮುಂದುವರಿಸಿದ್ದಕ್ಕಾಗಿ ಭಾರತದ ಮೇಲೆ ಹೆಚ್ಚುವರಿ ವ್ಯಾಪಾರ ಸುಂಕಗಳನ್ನು ವಿಧಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




