MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ

| Updated By: ಸುಷ್ಮಾ ಚಕ್ರೆ

Updated on: Aug 17, 2021 | 1:08 PM

Afghanistan Crisis | ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸುಮಾರು 120 ಮಂದಿ ಭಾರತೀಯರನ್ನು ನಾಳೆಯೊಳಗೆ ಭಾರತೀಯ ವಾಯುಪಡೆ ವಿಮಾನದ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತದೆ. ಈಗಾಗಲೇ ವಿದೇಶಾಂಗ ಸಚಿವಾಲಯದಿಂದ ಸಹಾಯವಾಣಿಯನ್ನೂ ತೆರೆಯಲಾಗಿದೆ.

MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ (Ashraf Ghani) ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ, ದೇಶದಿಂದಲೇ ಪಲಾಯನ ಮಾಡುವ ಮೂಲಕ ಬಳಿಕ 20 ವರ್ಷಗಳ ಯುದ್ಧದಲ್ಲಿ ತಾಲಿಬಾನ್‌ ವಿಜಯ ಸಾಧಿಸಿದೆ. ಇಡೀ ಅಫ್ಘಾನಿಸ್ತಾನವನ್ನು(Afghanistan) ತಾಲಿಬಾನ್ ವಶಕ್ಕೆ ಪಡೆದಿರುವುದರಿಂದ ಅಲ್ಲಿರುವ ಬೇರೆ ದೇಶಗಳ ಜನರಿಗೆ ಹಾಗೂ ಮಹಿಳೆಯರಿಗೆ ಪ್ರಾಣಭೀತಿ ಎದುರಾಗಿದೆ. ಅಫ್ಘಾನ್​ನಲ್ಲಿದ್ದ ಭಾರತದ ರಾಯಭಾರ ಕಚೇರಿಯ ಹಲವು ಅಧಿಕಾರಿಗಳನ್ನು ಈಗಾಗಲೇ ಏರ್​ಲಿಫ್ಟ್​ ಮಾಡಲಾಗಿದೆ. ಇನ್ನೂ 120ಕ್ಕೂ ಹೆಚ್ಚು ಭಾರತೀಯರು ಅಫ್ಘಾನ್​ನಲ್ಲಿ ಸಿಲುಕಿದ್ದಾರೆ. ಅಫ್ಘಾನ್​ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆತರುವ ಸಲುವಾಗಿ ಭಾರತದ ವಿದೇಶಾಂಗ ಸಚಿವಾಲಯದಿಂದ ವಿಶೇಷ ಸಹಾಯವಾಣಿ (MEA Helpline) ತೆರೆಯಲಾಗಿದೆ.

ಕಳೆದ ಭಾನುವಾರ ರಾತ್ರಿ ತಾಲಿಬಾನ್‌ ಉಗ್ರರು ಅಧ್ಯಕ್ಷೀಯ ಭವನವನ್ನು ವಶಪಡಿಸಿಕೊಂಡ ಬಳಿಕ ಕಾಬೂಲ್‌ನಲ್ಲಿ ಆತಂಕ ಹೆಚ್ಚಾಗಿತ್ತು. ದೇಶದಲ್ಲಿ ಶಾಂತಿ ನೆಲೆಸಬೇಕು, ಜನರ ರಕ್ತಪಾತ ನಿಲ್ಲಬೇಕೆಂಬ ಕಾರಣ ನೀಡಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿರುವುದಾಗಿ ಘೋಷಿಸಿದ್ದರು. ಅಫ್ಘಾನ್ ತಾಲಿಬಾನ್ ಉಗ್ರರ ವಶವಾದ ಬಳಿಕ ಅಲ್ಲಿನ ಜನರು ಬೇರೆ ದೇಶಗಳಿಂದ ಬರುವ ವಿಮಾನಗಳನ್ನು ಹತ್ತಿಕೊಂಡು ದೇಶ ಬಿಟ್ಟು ತೆರಳುತ್ತಿದ್ದಾರೆ. 10 ದಿನಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 919717785379 ಸಹಾಯವಾಣಿ ತೆರೆಯಲಾಗಿದೆ. ಹಾಗೇ, MEAHelpdeskIndia@gmail.com ಇಮೇಲ್ ಹೆಲ್ಪ್​ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಬಯಸುವ ಅಫ್ಘಾನ್​ನಲ್ಲಿರುವ ಭಾರತೀಯರು ಭಾರತವನ್ನು ಸಂಪರ್ಕಿಸಬಹುದು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಮ್ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದೊಳಗೆ ನುಗ್ಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಅಫ್ಘಾನ್​ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಏರ್​ಲಿಫ್ಟ್ ಮೂಲಕ ವಾಪಾಸ್ ಕರೆಸಿಕೊಂಡಿದೆ. ಹಾಗೇ, ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ ಸಮುದಾಯದ ಜನರ ಜೊತೆ ನಿಕಟ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅವರನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದೇ ಬಾರಿ ಸಾವಿರಾರು ಜನರು ನುಗ್ಗಿ, ವಿಮಾನದ ಚಕ್ರದ ಮೇಲೆಲ್ಲ ಹತ್ತಿ ಆಕಾಶದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ವಿಡಿಯೋಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಿಂದ ಕಮರ್ಷಿಯಲ್ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಅಫ್ಘಾನ್​ನಲ್ಲಿರುವ ಭಾರತೀಯರನ್ನು ಶಿಫ್ಟ್ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕಾಬೂಲ್​ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅನುಮತಿ ಸಿಕ್ಕ ಬಳಿಕ ಸ್ಥಳಾಂತರ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ.

ಅಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಸಿಲುಕಿರುವ ಸುಮಾರು 120 ಮಂದಿ ಭಾರತೀಯರನ್ನು ನಾಳೆಯೊಳಗೆ ಭಾರತೀಯ ವಾಯುಪಡೆಯು ವಿಮಾನದ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಲ್ಲಿ ಕಾಬೂಲ್‍ನಲ್ಲಿ ಭದ್ರತಾ ಪರಿಸ್ಥಿತಿ ತೀರ ಹದಗೆಟ್ಟಿದೆ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇನ್ನೂ ಕೆಲವು ಭಾರತೀಯರು ಸಿಲುಕಿಕೊಂಡಿದ್ದು, ಹಿಂದಿರುಗಲು ಬಯಸುತ್ತಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಮ್ ಹೇಳಿದ್ದಾರೆ.

ಇದನ್ನೂ ಓದಿ: Taliban Rule In Afghanistan: ಮೊಬೈಲ್, ಇಂಟರ್​ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ

ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!

(Indian Ministry of External Affairs set up Helpline Number to Coordinate Repatriation from Afghanistan)

Published On - 12:59 pm, Tue, 17 August 21