ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಎರಡು ತಿಂಗಳ ಗಡಿ ದಾಟಿ ಮುಂದುವರಿಯುತ್ತಿದೆ. ರೈತರ ಹೋರಾಟದಲ್ಲಿ ಭಾಗಿಯಾಗಿರುವ ಚಳುವಳಿಗಾರರು, ಹರ್ಯಾಣ ಜಿಂದ್ ಜಿಲ್ಲೆಯ ಖಂಡೇಲಾ ಗ್ರಾಮದಲ್ಲಿ ಖಾಪ್ ಪಂಚಾಯತ್ ಸಭೆ ನಡೆಸಲಿದ್ದಾರೆ. ಹರ್ಯಾಣದ ಎಲ್ಲಾ ಖಾಪ್ ಪಂಚಾಯತ್ಗಳಿಗೂ ಮಹಾಪಂಚಾಯತ್ನಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.
ಇಂದು (ಫೆ.3) ನಡೆಯುವ ಮಹಾಪಂಚಾಯತ್, ರೈತರ ಚಳುವಳಿಯನ್ನು ಯಾವ ರೀತಿ ಮುಂದುವರಿಸಬೇಕು ಎಂಬ ಬಗ್ಗೆ ಚರ್ಚಿಸಲಿದೆ. ಕೇಂದ್ರ ಸರ್ಕಾರಕ್ಕೆ ರೈತ ಚಳುವಳಿ ಮತ್ತಷ್ಟು ಸಂಘಟಿತವಾಗಿ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೂಡ ಇಂದಿನ ಸಭೆ ನೀಡಲಿದೆ. ಜಿಂದ್ನಲ್ಲಿ ನಡೆಯುವ ಮಹಾಪಂಚಾಯತ್ನಲ್ಲಿ ನಾನೂ ಭಾಗವಹಿಸಲಿದ್ದೇನೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದರು.
ಮಹಾಪಂಚಾಯತ್ಗೆ ರಾಕೇಶ್ ಟಿಕಾಯತ್ ಆಗಮಿಸಿದರು
Haryana: Bharatiya Kisan Union (Arajnaitik) leader Rakesh Tikait reaches Jind where a 'Mahapanchayat' is underway pic.twitter.com/teG8JFYX2S
— ANI (@ANI) February 3, 2021
ಜಿಂದ್ನಲ್ಲಿ ನಡೆಯುತ್ತಿದ್ದ ರೈತ ಮುಖಂಡರ ಭಾಷಣದ ವೇಳೆ ಮಹಾಪಂಚಾಯತ್ ವೇದಿಕೆ ಕುಸಿದುಬಿದ್ದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರೈತರ ಜೊತೆ ಮಾತುಕತೆಗೆ ಸರ್ಕಾರ ಈಗಲೂ ಸಿದ್ಧವಿದೆ
ಲೋಕಸಭೆಯಲ್ಲಿ ವಿರೋಧಪಕ್ಷಗಳು ರೈತರ ಪರ ಮಾತನಾಡಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿರುವ ಬಗ್ಗೆ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ತಿದ್ದುಪಡಿ ಕಾನೂನುಗಳ ಬಗ್ಗೆ ಲೋಕಸಭಾ ಸದಸ್ಯರು ಚರ್ಚಿಸಲು ಸಿದ್ಧರಿದ್ದರೆ, ಸರ್ಕಾರವೂ ಮಾತನಾಡಲು ತಯಾರಿದೆ. ಸಂಸತ್ತಿನ ಹೊರಗೆ ಅಥವಾ ಒಳಗೆ ರೈತರಿಗೆ ಸಂಬಂಧಪಟ್ಟ ಯಾವುದೇ ವಿಚಾರವನ್ನು ಚರ್ಚಿಸಲು ಕೇಂದ್ರ ಸಿದ್ಧವಿದೆ ಎಂದು ಹೇಳಿದ್ದಾರೆ. ಸಂಸತ್ ಕಲಾಪವನ್ನು ಬಡವರ, ರೈತರ ಒಳಿತಿಗಾಗಿ ನಡೆಸಲು ಅನುವು ಮಾಡಿಕೊಡಿ ಎಂದು ವಿಪಕ್ಷ ಸದಸ್ಯರನ್ನು ಕೇಳಿಕೊಂಡಿದ್ದಾರೆ. ಸರ್ಕಾರವು ರೈತರ ಜೊತೆಗೆ ಮಾತುಕತೆ ನಡೆಸಲು ಈಗಲೂ ಸಿದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ.
ಗಣತಂತ್ರ ನಡೆದ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ
ಟ್ರಾಕ್ಟರ್ ಚಳುವಳಿ ದಿನದ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನಾವಳಿಗಳ ವಿರುದ್ಧ ದಾಖಲಾಗಿದ್ದ ಹಲವು ಅರ್ಜಿಗಳನ್ನು, ಸುಪ್ರೀಂ ಕೋರ್ಟ್ ಇಂದು ವಿಚಾರಣೆ ಮಾಡಲಿದೆ. ಗಣತಂತ್ರ ದಿನ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಲು ನಿವೃತ್ತ ಜಡ್ಜ್ ಒಬ್ಬರ ನೇತೃತ್ವದಲ್ಲಿ ಸಮಿತಿ ರಚಿಸುವ ಬಗ್ಗೆಯೂ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಆ ಬಗ್ಗೆಯೂ ಇಂದು ವಿಚಾರಣೆ ನಡೆಯಲಿದೆ.
ಹರ್ಯಾಣದ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಕಡಿತ ಮುಂದುವರಿಕೆ
ಹರ್ಯಾಣದ ಕೈತಾಲ್, ಪಾಣಿಪತ್, ಜಿಂದ್, ರೊಹ್ಟಕ್, ಚರ್ಕಿ ದಾದ್ರಿ, ಸೋನಿಪತ್ ಮತ್ತು ಝಾಜ್ಜರ್ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಇಂದು (ಫೆ.3) ಸಂಜೆ 5 ಗಂಟೆಯವರೆಗೆ ಕಡಿತಗೊಳಿಸಲಾಗಿದೆ. 2G/3G/4G/CDMA/GPRS, SMS ಸೇವೆಗಳನ್ನು ಕಡಿತ ಮಾಡಲಾಗಿದೆ. ವಾಯ್ಸ್ ಕಾಲ್ ಸೌಲಭ್ಯ ಮಾತ್ರ ಸದ್ಯ ಬಳಕೆದಾರರಿಗೆ ಲಭ್ಯವಿದೆ.
Published On - 2:42 pm, Wed, 3 February 21