ಇನ್ನು ಮುಂದೆ ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್ಟಾಪ್ ಚಾರ್ಜ್ ಮಾಡಲು ಅವಕಾಶ ಸಿಗದು?
ಮುಂಜಾಗ್ರತಾ ಕ್ರಮವಾಗಿ ರೈಲುಗಳಲ್ಲಿ ರಾತ್ರಿವೇಳೆ ಚಾರ್ಜಿಂಗ್ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಬೆಂಕಿ ಅನಾಹುತಗಳನ್ನು ತಡೆಯುವ ಕುರಿತು ಜಾಗೃತಿ ಸಪ್ತಾಹ ಆಚರಿಸಲೂ ರೈಲ್ವೆ ಇಲಾಖೆ ಮುಂದಾಗಿದೆ.
ರಾತ್ರಿ ಪ್ರಯಾಣದ ವೇಳೆ ಮೊಬೈಲ್ ಮತ್ತು ಲ್ಯಾಪ್ಟಾಪ್ ಚಾರ್ಜ್ ಮಾಡಲು ಅವಕಾಶ ನೀಡದಿರುವ ಬಗ್ಗೆ ಭಾರತೀಯ ರೈಲ್ವೆ ಗಂಭೀರವಾಗಿ ಆಲೋಚಿಸುತ್ತಿದೆ. ಕೆಲ ರೈಲುಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ರೈಲುಗಳಲ್ಲಿ ರಾತ್ರಿವೇಳೆ ಚಾರ್ಜಿಂಗ್ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ಲೈವ್ಮಿಂಟ್’ ಜಾಲತಾಣ ವರದಿ ಮಾಡಿದೆ.
ರೈಲುಗಳಲ್ಲಿ ಸುರಕ್ಷತೆ ಹೆಚ್ಚಿಸುವ ಕುರಿತು ಹಿರಿಯ ರೈಲ್ವೆ ಅಧಿಕಾರಿ ಸಲ್ಲಿಸಿರುವ ವರದಿಯಲ್ಲಿ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಎಲೆಕ್ಟ್ರಿಕ್ ಉಪಕರಣಗಳ ಚಾರ್ಜಿಂಗ್ಗೆ ಬಳಸುವ ಪಾಯಿಂಟ್ಗಳಲ್ಲಿ ವಿದ್ಯುತ್ ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿದೆ. ಡೆಹ್ರಾಡೂನ್ ಸಮೀಪ ಮಾರ್ಚ್ 13ರಂದು ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕೇವಲ 6 ದಿನಗಳ ನಂತರ ರಾಂಚಿ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಎಂಜಿನ್ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.
‘ಭಾರತೀಯ ರೈಲ್ವೆಯ ಕಾರ್ಯಾಚರಣೆಗಳಲ್ಲಿ ಸುರಕ್ಷೆಗೆ ಹೆಚ್ಚು ಗಮನ ನೀಡಲಾಗುವುದು. ಈ ವಿಚಾರದಲ್ಲಿ ಯಾವುದೇ ತಪ್ಪುಗಳು ಆಗಲು ಯಾರೊಬ್ಬರೂ ಅವಕಾಶ ನೀಡಬಾರದು. ರೈಲುಗಳ ಸಂಚಾರದ ವೇಳೆ ಸುರಕ್ಷೆಯ ವಿಚಾರವನ್ನು ಸಮಗ್ರವಾಗಿ ಪರಾಮರ್ಶಿಸಬೇಕು ಮತ್ತು ಆಗಾಗ ಪರಿಶೀಲಿಸುತ್ತಿರಬೇಕು’ ಎಂದು ರೈಲ್ವೆ ಸಚಿವರು ಸುರಕ್ಷಾ ಕ್ರಮಗಳ ಬಗ್ಗೆ ಮಾತನಾಡುವಾಗ ಹೇಳಿದರು ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಧೂಮಪಾನ ಮತ್ತು ಹೊತ್ತಿ ಉರಿಯುವ ವಸ್ತುಗಳನ್ನು ರೈಲುಗಳಲ್ಲಿ ಸಾಗಿಸುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಸಂಚರಿಸುತ್ತಿದ್ದ ರೈಲುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಇದೂ ಮುಖ್ಯ ಕಾರಣ ಎಂದು ತಿಳಿದುಬಂದಿತ್ತು. ರೈಲುಗಳಲ್ಲಿ ಬೆಂಕಿ ದುರಂತ ತಡೆಯಲು ಅಗತ್ಯಕ್ರಮ ತೆಗೆದುಕೊಳ್ಳುವಂತೆ ರೈಲ್ವೆ ಇಲಾಖೆಯು ಎಲ್ಲ ವಿಭಾಗೀಯ ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಯಾಣಿಕರು ಮತ್ತು ಉದ್ಯೋಗಿಗಳಲ್ಲಿ ಅಗ್ನಿ ಅವಘಡ ತಡೆಯುವ ಕುರಿತು ಜಾಗೃತಿ ಮೂಡಿಸಲು ಸಪ್ತಾಹ ಆಚರಿಸುವಂತೆ ನಿರ್ದೇಶನ ರವಾನಿಸಿದೆ.
ಇದನ್ನೂ ಓದಿ: ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಅಗ್ನಿ, ಒಂದು ಬೋಗಿ ಭಸ್ಮ
Published On - 9:56 pm, Tue, 30 March 21