
ನವದೆಹಲಿ, ಜುಲೈ 14: ನಾವು ಬಹಳ ಇಷ್ಟಪಟ್ಟು ತಿನ್ನುವ ಕೆಲವು ಆಹಾರಗಳು ನಮಗೇ ಗೊತ್ತಿಲ್ಲದಂತೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತೊಡಗುತ್ತವೆ. ಅನಾರೋಗ್ಯಕರ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಕ್ರಮದಲ್ಲಿ ಕೇಂದ್ರ ಸರ್ಕಾರ ಸಮೋಸಾ (Samosa) , ಜಿಲೇಬಿ (Jalebi), ಪಕೋಡಾ, ವಡಾ ಪಾವ್ (Vada Pav) ಮತ್ತು ಬಿಸ್ಕತ್ತುಗಳಂತಹ ಜನಪ್ರಿಯ ತಿಂಡಿಗಳ ಬಗ್ಗೆ ಜನರಿಗೆ ಅದರ ಆರೋಗ್ಯ ಸಮಸ್ಯೆಗಳನ್ನು ತಿಳಿಸಬೇಕೆಂಬ ಕಾರಣದಿಂದ ಶೀಘ್ರದಲ್ಲೇ ಸಿಗರೇಟ್ ರೀತಿಯ ಆರೋಗ್ಯ ಅಲರ್ಟ್ಗಳನ್ನು (Health Alert) ನೀಡಲಿದೆ. ಹೇಗೆ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಅಪಾಯಕಾರಿ ಎಂಬ ಅಲರ್ಟ್ ಇರುತ್ತದೆಯೋ ಅದೇರೀತಿ ಈ ಎಲ್ಲ ತಿಂಡಿಗಳ ಬಗ್ಗೆ ಸರ್ಕಾರಿ ಕ್ಯಾಂಟೀನ್ ಮತ್ತು ರೆಸ್ಟೋರೆಂಟ್ಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವುದು ಕಡ್ಡಾಯ ಎಂದು ಭಾರತ ಸರ್ಕಾರ ಘೋಷಿಸಿದೆ.
ಜೀವನಶೈಲಿಯ ಕಾಯಿಲೆಗಳಿಗೆ ನಿಕಟ ಸಂಬಂಧ ಹೊಂದಿರುವ ಈ ಆಹಾರಗಳಲ್ಲಿ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನ ಹೆಚ್ಚಿನ ಮಟ್ಟ ಇರುತ್ತದೆ. ಈ ಅಭಿಯಾನವನ್ನು ಮೊದಲು ನಾಗ್ಪುರದಲ್ಲಿ ಪ್ರಾರಂಭಿಸಲಾಗುತ್ತಿದೆ. ಅಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS ನಾಗ್ಪುರ) ಈ ಉಪಕ್ರಮದ ಆರಂಭಿಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಈ ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು, ಫುಡ್ ಕೌಂಟರ್‌ಗಳ ಪಕ್ಕದಲ್ಲಿ ಈ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ.
ಭಾರತವು ದಿನದಿಂದ ದಿನಕ್ಕೆ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರವು ಜನರು ತಮ್ಮ ತಟ್ಟೆಯಲ್ಲಿ ಏನಿದೆ ಎಂಬುದರತ್ತ ಗಮನ ಹರಿಸಬೇಕೆಂದು ಒತ್ತಾಯಿಸುತ್ತಿದೆ. ಕರಿದ ಮತ್ತು ಸಕ್ಕರೆ ತಿಂಡಿಗಳ ಸೇವನೆಯು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. 2050ರ ವೇಳೆಗೆ ಅಂದಾಜು 440 ಮಿಲಿಯನ್ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರಬಹುದು ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆ ಅಂದಾಜಿಸಿದೆ. ಹೀಗಾಗಿ, ಜನರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: Heart Health: ಹೃದಯದ ಆರೋಗ್ಯಕ್ಕೂ ಬೇಕು ಕಾಳಜಿ !
AIIMS ನಾಗ್ಪುರದಂತಹ ಸರ್ಕಾರಿ ಸ್ಥಳಗಳ ರೆಸ್ಟೋರೆಂಟ್, ಕ್ಯಾಂಟೀನ್ಗಳಲ್ಲಿ ದೊಡ್ಡದಾದ ಎಚ್ಚರಿಕೆ ಪೋಸ್ಟರ್‌ಗಳು, ಸಕ್ಕರೆ, ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬಿನ ಅಂಶದ ಬಗ್ಗೆ ಸ್ಪಷ್ಟ ಮಾಹಿತಿ, ಪದೇ ಪದೇ ಅದರ ಸೇವನೆಯಿಂದ ಉಂಟಾಗುವ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ವಿವರಿಸುವ ಸಂದೇಶಗಳನ್ನು ಹಾಕಲಾಗುವುದು. ಈ ಎಚ್ಚರಿಕೆಗಳನ್ನು ಸಿಗರೇಟ್ ಪ್ಯಾಕೇಜಿಂಗ್‌ನಲ್ಲಿನ ಎಚ್ಚರಿಕೆಗಳಂತೆಯೇ ನೇರ ಮತ್ತು ಪ್ರಭಾವಶಾಲಿಯಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಂತ ಈ ಜಿಲೇಬಿ, ಪಕೋಡದಂತಹ ತಿಂಡಿಗಳನ್ನು ಸರ್ಕಾರ ನಿಷೇಧಿಸಿಲ್ಲ. ಅದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
Nagpur, Maharashtra: Government canteens and restaurants will now display warning boards for items like samosas and jalebis, similar to tobacco warnings. Details of oil and sugar content must be mentioned
Cardiologist Amar Aamle says, “Samosa and jalebi are symbolic examples,… pic.twitter.com/qmW2Ck3wsi
— IANS (@ians_india) July 14, 2025
ಸಮೋಸಾ ಮತ್ತು ಜಿಲೇಬಿಗಳು ಇನ್ನೂ ಲಭ್ಯವಿರುತ್ತವೆ. ಆದರೆ ಗ್ರಾಹಕರು ಏನು ತಿನ್ನುತ್ತಿದ್ದಾರೆ ಎಂಬುದರ ಕುರಿತು ಅವರಿಗೆ ತಿಳಿಸುವ ಉದ್ದೇಶದಿಂದ ಫಲಕಗಳನ್ನು ಹಾಕಲಾಗುವುದು. ಈ ಆಹಾರಗಳ ಮೇಲೆ ನಿರ್ಬಂಧವಲ್ಲ, ಇವುಗಳ ಮಿತವಾದ ಸೇವನೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಎಚ್ಚರಿಕೆ ಲೇಬಲ್ ಅಭಿಯಾನವು ಮುಂಬರುವ ತಿಂಗಳುಗಳಲ್ಲಿ ಇತರ ನಗರಗಳು ಮತ್ತು ಸಂಸ್ಥೆಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ನಾವೆಲ್ಲರೂ ಒಗ್ಗೂಡಿ ‘ಫಿಟ್ ಇಂಡಿಯಾ’ನಿರ್ಮಿಸೋಣ” ಪ್ರಧಾನಿ ಮೋದಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಬಂದಿರುವ ಆದೇಶದಲ್ಲಿ ಸಮೋಸಾ ಮತ್ತು ಜಿಲೇಬಿಯಂತಹ ಆಹಾರ ಪದಾರ್ಥಗಳ ಬಳಿ ಈಗ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ನಾಗ್ಪುರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಅಮರ್ ಆಮ್ಲೆ ಹೇಳಿದ್ದಾರೆ. ಇದರ ಹಿಂದಿನ ಉದ್ದೇಶವೆಂದರೆ ಜನರು ತಮ್ಮ ಆರೋಗ್ಯದ ಬಗ್ಗೆ ತಿಳಿದಿರಬೇಕು ಎಂಬುದು. ಸಮೋಸಾ ಮತ್ತು ಜಿಲೇಬಿ ತಿನ್ನುವಾಗ ಜನರು ತಾವು ತಿನ್ನುವ ಆಹಾರದಲ್ಲಿ ಎಷ್ಟು ಸಕ್ಕರೆ, ಎಣ್ಣೆ ಮತ್ತು ಕೊಬ್ಬು ಇದೆ ಎಂದು ತಿಳಿದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಫಿಟ್ ಇಂಡಿಯಾದ ಉಪಕ್ರಮವನ್ನು ತೆಗೆದುಕೊಂಡಿದ್ದಾರೆ, ಇದರ ಅಡಿಯಲ್ಲಿ ಆರೋಗ್ಯ ಸಚಿವಾಲಯದ ಪರವಾಗಿ ಸರ್ಕಾರವು ಬಹಳ ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿದೆ ಎಂದು ಡಾ. ಅಮರ್ ಆಮ್ಲೆ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Mon, 14 July 25