GDP Growth: ಜಾಗತಿಕ ಯುದ್ಧ, ಪೂರೈಕೆ ಬಿಕ್ಕಟ್ಟಿನ ನಡುವೆಯೂ ಶೇ.7.8ರಷ್ಟು ಜಿಡಿಪಿ ಜಿಗಿತ: ಟೀಕಾಕಾರರಿಗೆ ಪ್ರಧಾನಿ ಮೋದಿ ತಿರುಗೇಟು

PM Narendra Modi on India’s GDP Growth: ಜಾಗತಿಕ ಯುದ್ಧ ಮತ್ತು ಪೂರೈಕೆ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಇದು ಆರ್‌ಬಿಐ ಅಂದಾಜನ್ನೂ ಮೀರಿಸಿದೆ. ಪ್ರಧಾನಿ ಮೋದಿ ಈ ಯಶಸ್ಸನ್ನು ಶ್ಲಾಘಿಸಿ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಸೇವಾ, ರಿಯಲ್ ಎಸ್ಟೇಟ್ ಕ್ಷೇತ್ರಗಳ ಬಲದಿಂದ ಭಾರತ ಅತಿ ವೇಗದ ಆರ್ಥಿಕತೆಯಾಗಿ ಹೊರಹೊಮ್ಮಿದೆ.

GDP Growth: ಜಾಗತಿಕ ಯುದ್ಧ, ಪೂರೈಕೆ ಬಿಕ್ಕಟ್ಟಿನ ನಡುವೆಯೂ ಶೇ.7.8ರಷ್ಟು ಜಿಡಿಪಿ ಜಿಗಿತ: ಟೀಕಾಕಾರರಿಗೆ ಪ್ರಧಾನಿ ಮೋದಿ ತಿರುಗೇಟು
ನರೇಂದ್ರ ಮೋದಿ

Updated on: Sep 01, 2026 | 10:01 AM

ನವದೆಹಲಿ, ಸೆಪ್ಟೆಂಬರ್ 1: ಜಾಗತಿಕ ಯುದ್ಧ ಸಂಘರ್ಷಗಳು, ತೈಲ ಬೆಲೆ ಏರಿಕೆ ಹಾಗೂ ಪೂರೈಕೆ ಸರಪಳಿ ಅಡೆತಡೆಗಳ ನಡುವೆಯೂ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ನಿರೀಕ್ಷೆಗೂ ಮೀರಿದ ಅಂದರೆ ಶೇ. 7.8 ರಷ್ಟು ಜಿಡಿಪಿ(GDP) ಬೆಳವಣಿಗೆಯನ್ನು ದಾಖಲಿಸಿದೆ.

ಈ ಐತಿಹಾಸಿಕ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಆರ್ಥಿಕತೆಯ ಕುರಿತು ನಕಾರಾತ್ಮಕತೆ ಹರಡುತ್ತಿದ್ದ ವಿರೋಧ ಪಕ್ಷಗಳು ಹಾಗೂ ವಿಮರ್ಶಕರನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಭರ್ಜರಿ ಯಶಸ್ಸು ದೇಶದ 1.4 ಶತಕೋಟಿ ನಾಗರಿಕರ ಕಠಿಣ ಪರಿಶ್ರಮ ಮತ್ತು ಸಾಮೂಹಿಕ ಇಚ್ಛಾಶಕ್ತಿಗೆ ಸಂದ ಜಯ. ಜಗತ್ತು ಬಿಕ್ಕಟ್ಟುಗಳಲ್ಲಿದ್ದರೂ ಭಾರತ ಹೊಸ ದಾಖಲೆ ಬರೆದಿದೆ ಎಂದು ಪ್ರಧಾನಿ ಶ್ಲಾಘಿಸಿದರು.

ಟೀಕಾಕಾರರಿಗೆ ಕಟು ತಿರುಗೇಟು: ದೇಶದ ಆರ್ಥಿಕತೆಯ ಬಗ್ಗೆ ಹತಾಶೆ ಮತ್ತು ‘ಜೂಟ್ ಕಿ ಗೂಂಜ್’ (ಸುಳ್ಳುಗಳ ಪ್ರತಿಧ್ವನಿ) ಹರಡುವ ವರ್ಗಕ್ಕೆ ಈ ಶೇ.7.8 ರಷ್ಟು ಬೆಳವಣಿಗೆಯೇ ತಕ್ಕ ಉತ್ತರ. ಕೆಲವರು ದೇಶದ ಬೆಳವಣಿಗೆಯನ್ನು ಮರೆಮಾಚಲು ಸುಳ್ಳುಗಳ ಸುರಿಮಳೆಗೈಯುತ್ತಾರೆ, ಆದರೆ ಭಾರತ ನಿರಂತರವಾಗಿ ಮುನ್ನಡೆಯುತ್ತಿದೆ ಎಂದು ವಿಪಕ್ಷಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದರು.

ಪ್ರಧಾನಿ ಮೋದಿ ವಿಡಿಯೋ

ಆತ್ಮನಿರ್ಭರ ಭಾರತಕ್ಕೆ ಒತ್ತು: ಜಾಗತಿಕ ಏರಿಳಿತಗಳಿಂದ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಲು ಸ್ವಾವಲಂಬನೆ ಅತ್ಯಗತ್ಯವಾಗಿದ್ದು, ಈ ಬೆಳವಣಿಗೆಯ ವೇಗವನ್ನು ಮುಂದುವರೆಸಬೇಕಿದೆ ಎಂದರು.
ಆರ್‌ಬಿಐ ಅಂದಾಜು ಮೀರಿಸಿದ ಸಾಧನೆ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂದಾಜಿಸಿದ್ದ ಶೇ. 7.0ಗಿಂತಲೂ ಹೆಚ್ಚಿನ ವೇಗದಲ್ಲಿ ಆರ್ಥಿಕತೆ ಚೇತರಿಸಿಕೊಂಡಿದೆ. ಸೇವಾ ವಲಯವು ಶೇ. 10.0 ಹಾಗೂ ರಿಯಲ್ ಎಸ್ಟೇಟ್ ಮತ್ತು ಐಟಿ ವಲಯಗಳು ಶೇ. 12.1 ರಷ್ಟು ಪ್ರಬಲ ಬೆಳವಣಿಗೆ ದಾಖಲಿಸಿವೆ. ಪ್ರಸಕ್ತ ಬೆಲೆಗಳಲ್ಲಿ ನಾಮಿನಲ್ ಜಿಡಿಪಿ ಶೇ. 10.3 ರಷ್ಟು ವೃದ್ಧಿಸಿದ್ದು, ಒಟ್ಟು ಮೌಲ್ಯ 88.27 ಲಕ್ಷ ಕೋಟಿ ರೂ.ಗೆ ತಲುಪಿದೆ.

ಮತ್ತಷ್ಟು ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

 

ಜಾಗತಿಕ ಹಿಂಜರಿತದ ನಡುವೆ ನಂ.1: ಅಮೆರಿಕ, ಯುರೋಪ್ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳು ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಒತ್ತಡ ಎದುರಿಸುತ್ತಿರುವಾಗ, ಭಾರತವು ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಕೇಂದ್ರ ಹಣಕಾಸು ಸಚಿವರ ಮೆಚ್ಚುಗೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಸರ್ಕಾರದ ಸುಧಾರಣಾ ಕ್ರಮಗಳು ಹಾಗೂ ಚುರುಕಾದ ಆರ್ಥಿಕ ನಿರ್ವಹಣೆಯು ಸಕಾರಾತ್ಮಕ ಫಲಿತಾಂಶ ನೀಡುತ್ತಿವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us