ನವದೆಹಲಿ, ಜುಲೈ 1: ಇನ್ಮುಂದೆ ಸಿಆರ್ಪಿಸಿ, ಐಪಿಸಿ ಇತ್ಯಾದಿ ಸೆಕ್ಷನ್ಗಳು ಇತಿಹಾಸ ಪುಟ ಸೇರಲಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಈ ಕ್ರಿಮಿನಲ್ ಕಾನೂನುಗಳ ಬದಲು ಹೊಸ ಮಾದರಿಯ ಕಾನೂನು ಇಂದಿನಿಂದ ಜಾರಿಗೆ ಬಂದಿದೆ. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಕಾನೂನುಗಳು ಇಂದು ಸೋಮವಾರದಿಂದ ಅನುಷ್ಠಾನಕ್ಕೆ ಬರಲಿವೆ. ಇಂಡಿಯನ್ ಪೀನಲ್ ಕೋಡ್ ಬದಲು ಭಾರತೀಯ ನ್ಯಾಯ ಸಂಹಿತೆಯನ್ನು ರೂಪಿಸಲಾಗಿದೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಅಥವಾ ಸಿಆರ್ಪಿಸಿ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯನ್ನು ರಚಿಸಲಾಗಿದೆ. ಸಾಕ್ಷ್ಯ ಕಾಯ್ದೆ ಬದಲು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಜಾರಿಗೆ ತರಲಾಗಿದೆ.
ಈ ಹೊಸ ಮಾದರಿಯ ಅಪರಾಧ ಕಾನೂನುಗಳಲ್ಲಿನ ಕೆಲ ಅಂಶಗಳ ಬಗ್ಗೆ ವಿಪಕ್ಷಗಳು ಚಕಾರ ಎತ್ತಿವೆ. ಅದರ ನಡುವೆಯೇ ಹೊಸ ಕಾನೂನು ಇಂದಿನಿಂದ ಜಾರಿಯಲ್ಲಿರುತ್ತದೆ. ಪುರುಷರ ಮೇಲಿನ ಲೈಂಗಿಕ ದೌರ್ಜನ್ಯ, ಟ್ರಾನ್ಸ್ಜೆಂಡರ್ಗಳ ಮೇಲಿನ ಲೈಂಗಿಕ ಅಪರಾಧ ಇವೆಲ್ಲವನ್ನೂ ಹೊಸ ಕ್ರಿಮಿನಲ್ ಕಾನೂನಿನಲ್ಲಿ ಒಳಗೊಳ್ಳಲಾಗಿದೆ.
ಹೊಸ ಕಾನೂನುಗಳು ಜಾರಿಗೆ ಬಂದರೆ ಪ್ರತಿಯೊಬ್ಬರಿಗೂ ತ್ವರಿತವಾಗಿ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದೇಶದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಕಾನೂನುಗಳನ್ನು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ವಿಪಕ್ಷಗಳು ಇದನ್ನು ವಿರೋಧಿಸಿವೆ. ಆತುರಾತುರವಾಗಿ ಜಾರಿಗೆ ತರಲಾದ ಈ ಹೊಸ ಕ್ರಿಮಿನಲ್ ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆದು ಅದನ್ನು ಸಂಸತ್ತು ಮರುಪರಿಶೀಲಿಸಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಮಮತಾರ ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತವಲ್ಲ: ಜೆಪಿ ನಡ್ಡಾ ವಾಗ್ದಾಳಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ