ಐಪಿಎಸ್ ಅಧಿಕಾರಿಗಳಿಗೆ ಹೊಸ ನಿಯಮ; ಕೇಂದ್ರದಲ್ಲಿ ಐಜಿಯಾಗಲು ಎರಡು ವರ್ಷ ಕೇಂದ್ರೀಯ ಸೇವೆ ಕಡ್ಡಾಯ
MHA mandates two-year Central stint as SP or DIG for IPS officers aiming IG rank: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 28ಕ್ಕೆ ಅನ್ವಯ ಆಗುವಂತೆ ಹೊಸ ನಿಯಮ ಮಾಡಿದೆ. ಐಪಿಎಸ್ ಸೇವೆಯಲ್ಲಿರುವವರು ಕೇಂದ್ರ ಮಟ್ಟದಲ್ಲಿ ಐಜಿ ಹುದ್ದೆಗೆ ಏರಲು ಕನಿಷ್ಠ ಎರಡು ವರ್ಷ ಮಧ್ಯಮ ಮಟ್ಟದಲ್ಲಿ ಕೇಂದ್ರೀಯ ಸೇವೆ ಕಡ್ಡಾಯವಾಗಿದೆ. ಕೇಂದ್ರೀಯ ಎಸ್ಪಿ ಅಥವಾ ಡಿಐಜಿ ಮಟ್ಟದ ಹುದ್ದೆಯನ್ನು ಎರಡು ವರ್ಷ ಕಡ್ಡಾಯವಾಗಿ ನಿಭಾಯಿಸಬೇಕು ಎಂಬುದು ನಿಯಮ.

ನವದೆಹಲಿ, ಜನವರಿ 31: ಐಪಿಎಸ್ ಅಧಿಕಾರಿಗಳು ಕೇಂದ್ರದಲ್ಲಿ ಐಜಿ ಮಟ್ಟದ ಅಧಿಕಾರಿಯಾಗಲು ಕನಿಷ್ಠ ಎರಡು ವರ್ಷ ಎಸ್ಪಿ ಅಥವಾ ಡಿಐಜಿ ಮಟ್ಟದಲ್ಲಿ ಕೇಂದ್ರೀಯ ಸೇವೆ ಪೂರ್ಣಗೊಳಿಸುವುದು (central deputation) ಕಡ್ಡಾಯ. ಹೀಗೊಂದು ಹೊಸ ನಿಯಮವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ಮಾಡಿದೆ. ಜನವರಿ 28ರಂದು ಹೊರಡಿಸಲಾದ ಈ ಮಾರ್ಗಸೂಚಿ ಪ್ರಕಾರ 2011, ಹಾಗೂ ನಂತರದ ಬ್ಯಾಚ್ ಅಧಿಕಾರಿಗಳಿಗೆ ಹೊಸ ನಿಯಮ ಅನ್ವಯ ಆಗುತ್ತದೆ.
ರಾಷ್ಟ್ರಮಟ್ಟದ ಜವಾಬ್ದಾರಿ ನಿಭಾಯಿಸಬಲ್ಲಂತಹ ಅಧಿಕಾರಿಗಳ ಸಮೂಹ ನಿರ್ಮಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಹೊಸ ನಿಯಮದಿಂದ ಅಧಿಕಾರಿಗಳು ಹಿರಿಯ ನಾಯಕತ್ವದ ಪಾತ್ರಕ್ಕೆ ಬೇಕಾದ ಕೇಂದ್ರೀಯ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ರವಿದಾಸ್ ಜಯಂತಿ: ಬಾಂಬ್ ಬೆದರಿಕೆ ನಡುವೆ ಇಂದು ಪ್ರಧಾನಿ ಮೋದಿ ಪಂಜಾಬ್ ಭೇಟಿ; ಅದಂಪುರ್ ಏರ್ಪೋರ್ಟ್ಗೆ ಗುರು ರವಿದಾಸ್ ಹೆಸರು
ಕೇಂದ್ರ ಮಟ್ಟದಲ್ಲಿ ಅನುಭವ ಇಲ್ಲದ ಐಪಿಎಸ್ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕ ಅಥವಾ ಐಜಿ ಮಟ್ಟದ ಹುದ್ದೆ ಏರುತ್ತಿದ್ದರು. ಇದರಿಂದ ಕೇಂದ್ರೀಯ ಮಟ್ಟದಲ್ಲಿ ಪೊಲೀಸ್ ವ್ಯವಸ್ಥೆ, ಗುಪ್ತಚರ ಮತ್ತು ಭದ್ರತೆಯನ್ನು ನಿಭಾಯಿಸಲು ಕಷ್ಟವಾಗುತ್ತಿರುವ ಕಾರಣ ಈ ಸುಧಾರಣಾ ಕ್ರಮ ಜಾರಿಗೆ ತರಲಾಗಿದೆ.
ಐಪಿಎಸ್ ಅಧಿಕಾರಿಗಳು ಸಿಎಪಿಎಫ್ ಮತ್ತಿತರ ಕೇಂದ್ರೀಯ ಹುದ್ದೆಗಳಲ್ಲಿ ಅನುಭವ ಹೊಂದಿದ ನಂತರ ಐಜಿಯಾಗಬೇಕಾಗುತ್ತದೆ.
ಇದನ್ನೂ ಓದಿ: ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ; ಮಹಾರಾಷ್ಟ್ರಕ್ಕೆ ಮೊತ್ತಮೊದಲ ಮಹಿಳಾ ಡಿಸಿಎಂ
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಈ ಅಧಿಸೂಚನೆಯು ಎಲ್ಲಾ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಅಧೀನ ಕಾರ್ಯದರ್ಶಿಗಳಿಗೂ ಕಳುಹಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
