ಭಾರತೀಯ ರೈಲ್ವೆಯಿಂದ ಜೂನ್ 21ಕ್ಕೆ ಶ್ರೀರಾಮಾಯಣ ಯಾತ್ರಾ ರೈಲು ಪ್ರಾರಂಭ

ಭಾರತೀಯ ರೈಲ್ವೆಯಿಂದ ಜೂನ್ 21ಕ್ಕೆ ಶ್ರೀರಾಮಾಯಣ ಯಾತ್ರಾ ರೈಲು ಪ್ರಾರಂಭ
ಶ್ರೀರಾಮಾಯಣ ಯಾತ್ರಾ ರೈಲು
Image Credit source: Ashwini Vaishnaw Twitter

ದೆಹಲಿಯ ಹೊರತಾಗಿ ಅಲಿಗಢ್, ತುಂಡ್ಲಾ, ಕಾನ್ಪುರ್ ಮತ್ತು ಲಖನೌ ಬೋರ್ಡಿಂಗ್ ಪಾಯಿಂಟ್‌ಗಳು. ಪ್ರಯಾಣಿಕರು ಯಾವ ನಿಲ್ದಾಣದಿಂದ ಪ್ರಯಾಣಿಸುತ್ತಾರೆ ಎಂಬುದನ್ನು ಪರಿಗಣಿಸದೆ ಟಿಕೆಟ್‌ನ ವೆಚ್ಚವು ಏಕರೂಪವಾಗಿರುತ್ತದೆ

TV9kannada Web Team

| Edited By: Rashmi Kallakatta

May 25, 2022 | 10:25 PM

ಲಖನೌ: ರಾಮನ ಜೀವನಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಜೂನ್ 21 ರಂದು ವಿಶೇಷ ಪ್ರವಾಸಿ ರೈಲಿನ ಮೂಲಕ 18 ದಿನಗಳ ‘ಶ್ರೀ ರಾಮಾಯಣ ಯಾತ್ರೆ‘ (Shri Ramayana Yatra)ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 21 ರಂದು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗುವ ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’  (Bharat Gaurav Tourist Train)ಮೂಲಕ ರಾಮಾಯಣ ಸರ್ಕ್ಯೂಟ್‌ನಲ್ಲಿ ಪ್ರವಾಸಕ್ಕಾಗಿ ಬುಕ್ಕಿಂಗ್ ನಡೆಯುತ್ತಿದೆ ಎಂದು ಲಖನೌದ ಐಆರ್​​ಸಿಟಿಸಿಯ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು. ಸುಮಾರು 600 ಪ್ರಯಾಣಿಕರ ವಸತಿ ಸಾಮರ್ಥ್ಯದ 11 ಥರ್ಡ್ ಎಸಿ ದರ್ಜೆಯ ಕೋಚ್‌ಗಳನ್ನು ಹೊಂದಿರುವ ಈ ರೈಲಿನ 18 ದಿನಗಳ ಪ್ರಯಾಣಕ್ಕೆ ಪ್ರಯಾಣಿಕರಿಗೆ ₹ 62,370 ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 14 ವರ್ಷಗಳ ಕಾಲ ಕಾಡಿನಲ್ಲಿ ವನವಾಸವನ್ನು ಕೈಗೊಂಡಾಗ ಭಗವಾನ್ ರಾಮ, ಅವರ ಪತ್ನಿ ಸೀತಾ ದೇವಿ ಮತ್ತು ಲಕ್ಷ್ಮಣರು ಕಾಲಿಟ್ಟ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಕನಸುಗಳನ್ನು ಸಾಕಾರಗೊಳಿಸುವ ಗುರಿಯನ್ನು ಈ ಪ್ರವಾಸ ಪ್ಯಾಕೇಜ್ ಹೊಂದಿದೆ ಎಂದು ಸಿನ್ಹಾ ಹೇಳಿದ್ದಾರೆ. ಅಯೋಧ್ಯೆ, ಜನಕ್‌ಪುರ (ನೇಪಾಳ), ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್‌ರಾಜ್, ಶೃಂಗವೇರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ (ಇದನ್ನು ದಕ್ಷಿಣ ಭಾರತದ ಅಯೋಧ್ಯೆ ಎನ್ನಲಾಗುತ್ತದೆ) ಒಳಗೊಂಡಿರುವ ಪ್ರಮುಖ ಸ್ಥಳಗಳನ್ನು  ಸ್ವದೇಶ್ ದರ್ಶನ್ ಯೋಜನೆಯಡಿ ಗುರುತಿಸಲಾದ ರಾಮಾಯಣ ಸರ್ಕ್ಯೂಟ್‌ನಲ್ಲಿ ರೈಲು ಚಲಿಸಲಿದೆ.

ಭಾರತದಿಂದ ನೇಪಾಳಕ್ಕೆ ಮೊದಲ ಬಾರಿಗೆ ಪ್ರವಾಸಿ ರೈಲು ಹೋಗಲಿದೆ. ಅಲ್ಲಿ ಎರಡು ಧಾರ್ಮಿಕ ನಗರಗಳಾದ ಅಯೋಧ್ಯೆ ಮತ್ತು ಜನಕ್‌ಪುರವನ್ನು ಸಂಪರ್ಕಿಸಲಿದೆ ಎಂದು ಸಿನ್ಹಾ ಹೇಳಿದ್ದಾಪೆ.

ದೆಹಲಿಯ ಹೊರತಾಗಿ ಅಲಿಗಢ್, ತುಂಡ್ಲಾ, ಕಾನ್ಪುರ್ ಮತ್ತು ಲಖನೌ ಬೋರ್ಡಿಂಗ್ ಪಾಯಿಂಟ್‌ಗಳು. ಪ್ರಯಾಣಿಕರು ಯಾವ ನಿಲ್ದಾಣದಿಂದ ಪ್ರಯಾಣಿಸುತ್ತಾರೆ ಎಂಬುದನ್ನು ಪರಿಗಣಿಸದೆ ಟಿಕೆಟ್‌ನ ವೆಚ್ಚವು ಏಕರೂಪವಾಗಿರುತ್ತದೆ

ಪ್ರವಾಸದ ಯೋಜನೆಯು ಆಹಾರ, ಹೋಟೆಲ್‌ನಲ್ಲಿ ಉಳಿಯುವುದು ಮತ್ತು ಭೇಟಿ ನೀಡುವ ಸ್ಥಳಗಳಲ್ಲಿ ಮಾರ್ಗದರ್ಶಿ ಸೇವೆಗಳನ್ನು ಒಳಗೊಂಡಿರುತ್ತದೆ ಎಂದು ಸಿನ್ಹಾ ಹೇಳಿದ್ದಾರೆ. ಸುಮಾರು 8,000 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸುವ ತನ್ನ ಪ್ರಯಾಣದ 18 ನೇ ದಿನದಂದು ದೆಹಲಿಗೆ ಹಿಂದಿರುಗಲಿದೆ ಈ ರೈಲು. ಭಾರತ್ ಗೌರವ್ ಟೂರಿಸ್ಟ್ ರೈಲಿನ ಒಳಾಂಗಣವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಈಗಾಗಲೇ 285 ಬುಕಿಂಗ್‌ಗಳನ್ನು ಮಾಡಲಾಗಿದೆ. ಗರಿಷ್ಠ 61 ಬುಕಿಂಗ್‌ಗಳು ಮಹಾರಾಷ್ಟ್ರದಿಂದಾಗಿದ್ದು ಉತ್ತರ ಪ್ರದೇಶದಿಂದ 55 ಬುಕಿಂಗ್ ಆಗಿದೆ.

ಐಆರ್​​ಸಿಟಿಸಿ ಪ್ರಯಾಣಿಕರಿಗೆ ಇಎಂಐ ಆಯ್ಕೆಗಳನ್ನು ಒದಗಿಸಲು Paytm ಮತ್ತು Razorpay ಪಾವತಿ ಗೇಟ್‌ವೇಗಳೊಂದಿಗೆ ಸಹ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ, ಮೊದಲ 50 ಪ್ರತಿಶತ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ 5 ಪ್ರತಿಶತದಷ್ಟು ಆರಂಭಿಕ ರಿಯಾಯಿತಿಯನ್ನು ನೀಡಲಾಗುತ್ತದೆ. ಐಆರ್​​ಸಿಟಿಸಿ ಇದೇ ಮೊದಲ ಬಾರಿ ಇಎಂಐ ಪಾವತಿ ಆಯ್ಕೆಯನ್ನು ನೀಡುತ್ತಿದೆ ಎಂದಿದ್ದಾರೆ ಸಿನ್ಹಾ.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada