
ಜೈಪುರ, ಜುಲೈ 10: ಹೆತ್ತ ತಾಯಿಗಿಂತ ಮಿಗಿಲಾದ ದೈವವಿಲ್ಲ ಅಂತಾರೆ, ಆದರೆ ರಾಜಸ್ಥಾನದ ಜೈಪುರದಲ್ಲಿ ಹೆತ್ತ ಕರುಳೇ ಹಂತಕಿಯಾಗಿ ಬದಲಾದ ಮೈ ನಡುಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ತಾಯಿಯ ಸರ್ಕಾರಿ ಕೆಲಸ ಮತ್ತು ಆಸ್ತಿಯನ್ನು ತನ್ನದಾಗಿಸಿಕೊಳ್ಳಲು 23 ವರ್ಷದ ಯುವತಿಯೊಬ್ಬಳು ತನ್ನ ಸ್ವಂತ ತಾಯಿಯನ್ನೇ ಕಾರು ಹರಿಸಿ ಕೊಲೆ(Murder) ಮಾಡಿಸಿದ್ದಾಳೆ. ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಈ ಭೀಕರ ಕೊಲೆ ಪ್ರಕರಣವನ್ನು ಜೈಪುರ ಪೊಲೀಸರು ಭೇದಿಸಿದ್ದು, ಮಗಳು ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ. ಜುಲೈ 3 ರಂದು ಜೈಪುರದ ಪ್ರತಾಪ್ ನಗರದಲ್ಲಿ ಈ ಕ್ರೂರ ಕೃತ್ಯ ನಡೆದಿತ್ತು.
ಮೃತ ದುರ್ದೈವಿಯನ್ನು ನೀರಜ್ ಶರ್ಮಾ (45) ಎಂದು ಗುರುತಿಸಲಾಗಿದೆ. ಅವರು ಕೋರ್ಟ್‌ನಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಘಟನೆಯ ದಿನ ನೀರಜ್ ಅವರು ತನ್ನ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ನಡೆದುಕೊಂಡು ಮನೆಗೆ ಮರಳುತ್ತಿದ್ದರು.
ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಹಂತಕರು ಬರೋಬ್ಬರಿ 130 ಕಿ.ಮೀ ವೇಗದಲ್ಲಿ ಸ್ಕಾರ್ಪಿಯೋ ಕಾರನ್ನು ತಂದು ನೀರಜ್ ಅವರಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆಸಿದ್ದಾರೆ. ಡಿಕ್ಕಿಯ ರಭಸಕ್ಕೆ ನೀರಜ್ ಅವರ ದೇಹ ಸುಮಾರು 100 ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರಿ ಹೋಗಿ ನೆಲಕ್ಕೆ ಬಿದ್ದಿದೆ. ತಾಯಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆರಂಭದಲ್ಲಿ ಇದು ಹಿಟ್ ಅಂಡ್ ರನ್ ಎನ್ನಲಾಗಿತ್ತು. ಆದರೆ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರು ಬೇಕೆಂದೇ ಡಿಕ್ಕಿ ಹೊಡೆದಿದ್ದು ಪತ್ತೆಯಾಗಿ, ಇಡೀ ಪಿತೂರಿ ಬಯಲಾಗಿದೆ.
ವರ್ಷದ ಹಿಂದೆ ನೀರಜ್ ಅವರ ಪತಿ ನಿಧನರಾಗಿದ್ದರು. ಅವರ ಮರಣದ ನಂತರ ತನಗೆ ಆ ಸರ್ಕಾರಿ ಕೆಲಸ ಸಿಗಬೇಕೆಂದು ಮಗಳು ಆಯುಷಿ ಶರ್ಮಾ ಹಠ ಹಿಡಿದಿದ್ದಳು. ಆದರೆ ನಿಯಮಾನುಸಾರ ತಾಯಿ ನೀರಜ್ ಆ ಕೆಲಸವನ್ನು ಪಡೆದುಕೊಂಡಿದ್ದರು. ಇದೇ ವಿಷಯಕ್ಕೆ ಮಗಳಿಗೆ ತಾಯಿಯ ಮೇಲೆ ತೀವ್ರ ದ್ವೇಷವಿತ್ತು.
ತಂದೆಯ ಆಸ್ತಿಯೂ ತನಗೆ ಸಿಗಬೇಕೆಂದು ಮಗಳು ಕಳೆದ ಎರಡು ವರ್ಷಗಳಿಂದ ತಾಯಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು. ತನಗೆ ಜೀವ ಬೆದರಿಕೆ ಇದೆ ಎಂದು ನೀರಜ್ ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು. ಅಂತಿಮವಾಗಿ ತಾಯಿಯನ್ನು ಮುಗಿಸಿದರೆ ಕೆಲಸ ಮತ್ತು ಆಸ್ತಿ ಎರಡೂ ಸಿಗುತ್ತದೆ ಎಂದು ಮಗಳು ತೀರ್ಮಾನಿಸಿದಳು.
ಮತ್ತಷ್ಟು ಓದಿ: ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ‘ಕೊಲೆ ಸ್ಕೆಚ್’ ಕಲಿತಿದ್ದ ಸಿಯಾ ಗೋಯಲ್
ಈ ಕೆಲಸಕ್ಕೆ ಆಯುಷಿಗೆ ಆಕೆಯ ಸ್ವಂತ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರಸಂಬಂಧಿ ಬಲರಾಮ್ ಸಾಥ್ ನೀಡಿದ್ದರು. ಮೂವರೂ ಸೇರಿ ಭರತ್‌ಪುರದ ಹೇಮಂತ್ ಶರ್ಮಾ ಎಂಬ ಗುತ್ತಿಗೆ ಕೊಲೆಗಾರನಿಗೆ ಬರೋಬ್ಬರಿ 7 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು.
ತಾಯಿಯ ದಿನನಿತ್ಯದ ಚಲನವಲನಗಳನ್ನು ಗಮನಿಸಲು ಹಂತಕರು ಮೊದಲು ಬಾಡಿಗೆಗೆ ಥಾರ್ ಎಸ್‌ಯುವಿ ಬಳಸಿದ್ದರು, ಆದರೆ ಅದು ವಿಫಲವಾಗಿತ್ತು. ನಂತರ ಒಂದು ತಿಂಗಳ ಕಾಲ ಹೊಂಚು ಹಾಕಿ, ಘಟನೆಯ ದಿನ ಬೈಕ್‌ನಲ್ಲಿ ನಿಂತು ತಾಯಿಯ ಲೊಕೇಶನ್ ಶೇರ್ ಮಾಡಿ, ಕೊನೆಗೆ ಸ್ಕಾರ್ಪಿಯೋ ಕಾರನ್ನು ಅತಿವೇಗವಾಗಿ ಚಲಾಯಿಸಿ ತಾಯಿಯನ್ನೇ ಕೊಲೆ ಮಾಡಿಸಿದ್ದಾಳೆ.
ಸದ್ಯ ಪೊಲೀಸರು ಹಂತಕ ಮಗಳು ಆಯುಷಿ ಸೇರಿದಂತೆ ಏಳು ಜನರನ್ನು ಕಡ್ಡಾಯ ಜೈಲಿಗಟ್ಟಿದ್ದಾರೆ. ಆದರೆ ಈ ಇಡೀ ಜಾಲದ ಮುಖ್ಯ ಸಂಚುಕೋರ ಬಲರಾಮ್ ಅಲಿಯಾಸ್ ರವಿ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹಣ ಮತ್ತು ಅಧಿಕಾರದ ಆಸೆ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿಸುತ್ತದೆ ಎಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Fri, 10 July 26