AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

38 ಬೇಡಿಕೆ, 48 ಗಂಟೆಯ ಗಡುವು; ಪಿಒಕೆಯಲ್ಲಿ ಮತ್ತೆ ಸಂಘರ್ಷದ ಭೀತಿ

ಪಾಕಿಸ್ತಾನದ ವಿರುದ್ಧ ಧಂಗೆದ್ದಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪಾಕಿಸ್ತಾನ ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಆಡಳಿತ ವಿರೋಧಿ ಅಲೆ ಭುಗಿಲೆದ್ದಿದ್ದು, ಮಾತುಕತೆಗಳು ವಿಫಲವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಈ ಪ್ರದೇಶವು ಮತ್ತಷ್ಟು ಹಿಂಸಾತ್ಮಕ ಸಂಘರ್ಷಕ್ಕೆ ಸಾಕ್ಷಿಯಾಗುವ ಭೀತಿ ಎದುರಾಗಿದೆ. ಪ್ರಾದೇಶಿಕ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, 48 ಗಂಟೆಗಳ ಈ ಗಡುವು ಪಿಒಕೆಯನ್ನು ಮತ್ತೊಂದು ದೊಡ್ಡ ರಾಜಕೀಯ ಮತ್ತು ಹಿಂಸಾತ್ಮಕ ಸಂಘರ್ಷದ ಭೀತಿಯನ್ನು ಹೆಚ್ಚಿಸಿದೆ.

38 ಬೇಡಿಕೆ, 48 ಗಂಟೆಯ ಗಡುವು; ಪಿಒಕೆಯಲ್ಲಿ ಮತ್ತೆ ಸಂಘರ್ಷದ ಭೀತಿ
Pok Protest Image Credit source: x
ಸುಷ್ಮಾ ಚಕ್ರೆ
|

Updated on: Jul 09, 2026 | 7:59 PM

Share

ಕಾಶ್ಮೀರ, ಜುಲೈ 9: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ತೀವ್ರ ಪ್ರತಿಭಟನೆ ಈಗ ಅತ್ಯಂತ ಉಗ್ರ ಸ್ವರೂಪ ಪಡೆದುಕೊಂಡಿದೆ. ಅಲ್ಲಿನ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಯಕರು ಪಾಕಿಸ್ತಾನ ಸರ್ಕಾರದ ಜೊತೆಗಿನ ಮಾತುಕತೆಗಳು ಸಂಪೂರ್ಣ ವಿಫಲವಾಗಿವೆ ಎಂದು ಘೋಷಿಸಿದ್ದಾರೆ. “ಸರ್ಕಾರಕ್ಕೆ ಶಾಂತಿ ಬೇಡ, ಪಾಕಿಸ್ತಾನಕ್ಕೆ ರಕ್ತಪಾತವೇ ಬೇಕಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಇಡೀ ಪ್ರದೇಶದಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ರಾಜಕೀಯ ಹಾಗೂ ಆರ್ಥಿಕ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದೆ. ಜಮ್ಮು ಕಾಶ್ಮೀರ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಸರ್ಕಾರಕ್ಕೆ 48 ಗಂಟೆಗಳ ಅಂತಿಮ ಗಡುವು ನೀಡಿದೆ. ತಮ್ಮ 38 ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ. ಜುಲೈ 27ರಂದು ನಡೆಯಲಿರುವ ಪ್ರಾದೇಶಿಕ ಚುನಾವಣೆ ಈ ತಕ್ಷಣದ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಜೂನ್ 9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜೆಎಎಸಿ ಸಂಘಟನೆಯು ಮುಜಾಫರಾಬಾದ್‌ಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಘೋಷಿಸಿದೆ.

ಬೆಲೆ ಏರಿಕೆ, ಅತಿಯಾದ ವಿದ್ಯುತ್ ಬಿಲ್ ಮತ್ತು ಗೋಧಿಯ ಮೇಲಿನ ಸಬ್ಸಿಡಿ ಕಡಿತದ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಪಾಕಿಸ್ತಾನ ಸರ್ಕಾರ ಮತ್ತು ಸ್ಥಳೀಯ ಆಡಳಿತವು ಪ್ರತಿಭಟನಾ ನಾಯಕರೊಂದಿಗೆ ನಡೆಸಿದ ಸರಣಿ ಸಂಧಾನದ ಮಾತುಕತೆಗಳು ಮುರಿದುಬಿದ್ದಿವೆ. ಹೀಗಾಗಿ, ಪ್ರತಿಭಟನಾನಿರತರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಿಂಧೂ ಜಲ ಒಪ್ಪಂದದ ಬಗ್ಗೆ ನಮ್ಮ ನಿಲುವು ಬದಲಾಗಿಲ್ಲ; ಪಾಕಿಸ್ತಾನದ ಬೆದರಿಕೆಗೆ ಭಾರತ ತಿರುಗೇಟು

ಪ್ರತಿಭಟನೆಯ ಮುಂಚೂಣಿಯಲ್ಲಿರುವ ನಾಯಕರು ಪ್ರಕಟಣೆ ಹೊರಡಿಸಿ, ಸರ್ಕಾರವು ಸಾರ್ವಜನಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಬದಲು ತಂತ್ರಗಳನ್ನು ಹೂಡುತ್ತಿದೆ ಎಂದು ಕಿಡಿಕಾರಿದ್ದಾರೆ. “ನಾವು ಶಾಂತಿಯುತವಾಗಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಆದರೆ, ನಮ್ಮ ಹಕ್ಕುಗಳನ್ನು ಹತ್ತಿಕ್ಕಲು ಸರ್ಕಾರವು ಹಿಂಸಾತ್ಮಕ ಮಾರ್ಗಗಳನ್ನು ಮತ್ತು ಮಿಲಿಟರಿ ಬಲವನ್ನು ಬಳಸಲು ಮುಂದಾಗಿದೆ. ಇದನ್ನು ನೋಡಿದರೆ ಸರ್ಕಾರಕ್ಕೆ ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವುದಕ್ಕಿಂತ ರಕ್ತಪಾತವನ್ನು ಸೃಷ್ಟಿಸುವುದರಲ್ಲೇ ಹೆಚ್ಚಿನ ಆಸಕ್ತಿ ಇದ್ದ ಹಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ಪಿಒಕೆ ಏಕೆ ಅಗತ್ಯ?:

ಪಿಒಕೆ ಪ್ರದೇಶವು ಅರಣ್ಯ, ಅಮೂಲ್ಯ ಖನಿಜಗಳು ಮತ್ತು ನೀರಿನ ಸಂಪನ್ಮೂಲಗಳಿಂದ ಶ್ರೀಮಂತವಾಗಿದೆ. ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳ ಕೃಷಿಗೆ ಬಳಕೆಯಾಗುವ ಶೇ. 70ರಷ್ಟು ನೀರು ಪಿಒಕೆಯ ಸಿಂಧೂ ನದಿ ವ್ಯವಸ್ಥೆಯಿಂದಲೇ ಹರಿಯುತ್ತದೆ. ಅಲ್ಲದೆ ಪಾಕಿಸ್ತಾನದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ. 10ರಿಂದ 15ರಷ್ಟು ಭಾಗ ಇಲ್ಲಿನ ಜಲವಿದ್ಯುತ್ ಯೋಜನೆಗಳಿಂದಲೇ ಸಿಗುತ್ತದೆ. ಹೀಗಾಗಿ, ಪಾಕಿಸ್ತಾನದ ಪಾಲಿಗೆ ಪಿಒಕೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದೆ.

ಬೃಹತ್ ಪ್ರತಿಭಟನೆಯ ಎಚ್ಚರಿಕೆ:

ಪಾಕಿಸ್ತಾನ ಸರ್ಕಾರದ ಜೊತೆಗಿನ ಮಾತುಕತೆಗಳು ಮುರಿದುಬಿದ್ದ ಬೆನ್ನಲ್ಲೇ, ಪಿಒಕೆ ನಾಗರಿಕರು ಮತ್ತು ವ್ಯಾಪಾರಿ ಒಕ್ಕೂಟಗಳು ಕಠಿಣ ನಿರ್ಧಾರ ಕೈಗೊಂಡಿವೆ. ಮುಂಬರುವ ದಿನಗಳಲ್ಲಿ ಇಡೀ ಪಾಕ್ ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿ, ಇತಿಹಾಸದಲ್ಲೇ ಕಾಣದಂತಹ ಭಾರಿ ಜನಸಮೂಹದೊಂದಿಗೆ ಇಸ್ಲಮಾಬಾದ್ ಮತ್ತು ಸ್ಥಳೀಯ ಸರ್ಕಾರಿ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಪಿಒಕೆಯಲ್ಲಿ ಪ್ರತಿಭಟನೆಗೆ ಕಾರಣಗಳೇನು?:

ಅತಿಯಾದ ವಿದ್ಯುತ್ ದರ:

ಪಿಒಕೆ ಪ್ರದೇಶದಲ್ಲೇ ಭಾರಿ ಪ್ರಮಾಣದ ಜಲವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ, ಅಲ್ಲಿನ ಸ್ಥಳೀಯ ಜನರಿಗೆ ಪಾಕಿಸ್ತಾನ ಸರ್ಕಾರವು ಅತ್ಯಂತ ದುಬಾರಿ ದರದಲ್ಲಿ ವಿದ್ಯುತ್ ಮಾರಾಟ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಆಹಾರ ಧಾನ್ಯಗಳ ಕೊರತೆ ಮತ್ತು ಬೆಲೆ ಏರಿಕೆ:

ಬಡ ಜನರಿಗೆ ಸಿಗುತ್ತಿದ್ದ ಗೋಧಿ ಹಾಗೂ ಅಗತ್ಯ ವಸ್ತುಗಳ ಮೇಲಿನ ಸಬ್ಸಿಡಿಯನ್ನು ಪಾಕಿಸ್ತಾನ ಸರ್ಕಾರ ಕಡಿತಗೊಳಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದೌರ್ಜನ್ಯದ ವಿರುದ್ಧ ಹೋರಾಟ:

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಪಾಕಿಸ್ತಾನಿ ಪೊಲೀಸರು ಜೈಲಿಗಟ್ಟಿರುವುದು ಮತ್ತು ಲಾಠಿಚಾರ್ಜ್ ನಡೆಸಿರುವುದು ಉರಿಯುವ ಜ್ವಾಲೆಗೆ ತುಪ್ಪ ಸುರಿದಂತಾಗಿದೆ.

ಇದನ್ನೂ ಓದಿ: ನೀರಿಲ್ಲ ಎನ್ನುತ್ತಿದ್ದ ಪಾಕಿಸ್ತಾನದಲ್ಲೀಗ ಪ್ರವಾಹದ ಭೀತಿ; ಬಾಗ್ಲಿಹಾರ್ ಡ್ಯಾಂ ಗೇಟ್ ತೆರೆದ ಭಾರತ

12 ವಿಧಾನಸಭಾ ಸ್ಥಾನಗಳ ರದ್ದತಿಗೆ ಆಗ್ರಹ:

ಪ್ರತಿಭಟನೆಯ ಕೇಂದ್ರಬಿಂದು ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರಿ ನಿರಾಶ್ರಿತರಿಗಾಗಿ ಕಾಯ್ದಿರಿಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಯಾಗಿದೆ. ಈ ಸೀಟುಗಳ ಮೂಲಕ ಇಸ್ಲಾಮಾಬಾದ್ ಸರ್ಕಾರವು ಪಿಒಕೆ ರಾಜಕಾರಣದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದೆ ಎಂದು ಜೆಎಎಸಿ ವಾದಿಸಿದೆ. ಪಾಕಿಸ್ತಾನದಲ್ಲಿರುವ ಈ 12 ನಿರಾಶ್ರಿತರ ಸೀಟುಗಳು ಕೇವಲ 4.36 ಲಕ್ಷ ನೋಂದಾಯಿತ ಮತದಾರರನ್ನು ಪ್ರತಿನಿಧಿಸುತ್ತವೆ. ಆದರೆ, ಪಿಒಕೆಯಲ್ಲಿ ವಾಸಿಸುವ ಜನರ 33 ನೇರ ಚುನಾಯಿತ ಸೀಟುಗಳು ಬರೋಬ್ಬರಿ 33 ಲಕ್ಷ ಮತದಾರರನ್ನು ಪ್ರತಿನಿಧಿಸುತ್ತವೆ.

ನ್ಯಾಯಾಲಯದ ತೀರ್ಪು:

ಜೂನ್ 7ರಂದು ತೀರ್ಪು ನೀಡಿರುವ ಪಿಒಕೆ ಸುಪ್ರೀಂ ಕೋರ್ಟ್, ಈ 12 ಕಾಯ್ದಿರಿಸಿದ ಸ್ಥಾನಗಳಿಗೆ ಸಾಂವಿಧಾನಿಕ ರಕ್ಷಣೆ ಇರುವುದರಿಂದ ಇವುಗಳನ್ನು ಕೇವಲ ಸರ್ಕಾರದ ಆದೇಶದ ಮೂಲಕ ರದ್ದುಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಸಾಂವಿಧಾನಿಕ ತಿದ್ದುಪಡಿ ಅಗತ್ಯ ಎಂದು ಸ್ಪಷ್ಟಪಡಿಸಿದೆ.

2023ರಲ್ಲಿ ಸ್ಥಾಪನೆಯಾದ ಜೆಎಎಸಿ (JAAC) ಪಿಒಕೆಯಲ್ಲಿ ಅತ್ಯಂತ ಪ್ರಭಾವಶಾಲಿ ನಾಗರಿಕ ಹಕ್ಕುಗಳ ವೇದಿಕೆಯಾಗಿ ಹೊರಹೊಮ್ಮಿದೆ. ಮೇ 2024ರಲ್ಲಿ ನಡೆದ ಬೃಹತ್ ರಸ್ತೆ ತಡೆ ಮತ್ತು ಬಂದ್ ಪ್ರತಿಭಟನೆಗಳ ಮೂಲಕ ಈ ಸಂಘಟನೆ ಮುಂಚೂಣಿಗೆ ಬಂದಿತು. ಅಂದಹಾಗೆ, ಪಾಕಿಸ್ತಾನದ ಸಂವಿಧಾನದ ಆರ್ಟಿಕಲ್ 1ರ ಅಡಿಯಲ್ಲಿ ಪಿಒಕೆ ಪಾಕಿಸ್ತಾನದ ಭಾಗವಲ್ಲ. ಆದ್ದರಿಂದ ಅಲ್ಲಿನ ಜನರಿಗೆ ಪಾಕಿಸ್ತಾನದ ಸಂಸತ್ತಿನಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us