ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ

Mukesh Ambani: ಉದ್ಯಮಿ ಮುಕೇಶ್ ಅಂಬಾನಿ ಅವರಿಂದ ಬಿಟ್​ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಜೈಶ್-ಉಲ್-ಹಿಂದ್, ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಬಳಿ ನಡೆದಿದ್ದ ಸ್ಫೋಟದ ಹಿಂದಿನ ಕೈಗಳನ್ನು ಪತ್ತೆಹಚ್ಚಲು ಸಾಧ್ಯವಾಗದೇ ಇರುವುದರ ಕುರಿತು ತನಿಖಾ ಸಂಸ್ಥೆಗಳಿಗೆ ಸವಾಲು ಎಸೆದಿದೆ.

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ
ಮುಕೇಶ್ ಅಂಬಾನಿ ನಿವಾಸದ ಬಳಿ ಬಾಂಬ್ ಪತ್ತೆ & ನಿಷ್ಕ್ರಿಯ ದಳದ ತಜ್ಞರು
Edited By:

Updated on: Feb 28, 2021 | 11:02 AM

ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆಯ ಬಳಿ ಪತ್ತೆಯಾಗಿದ್ದ ಸ್ಫೋಟಕವಿರಿಸಿದ್ದ ಎಸ್​ಯುವಿ ಕಾರಿನ ಹಿಂದೆ ತನ್ನ ಕೈವಾಡವಿದೆಯೆಂದು ಜೈಶ್-ಉಲ್-ಹಿಂದ್ ಸಂಘಟನೆ ಹೇಳಿಕೊಂಡಿದೆ. ಕಾರಿನೊಳಗೆ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅಂಬಾನಿ ಕುಟುಂಬಕ್ಕೆ ಬೆದರಿಕೆಯೊಡ್ಡಿರುವ ಪತ್ರವೂ ಇತ್ತು. ಟೆಲಿಗ್ರಾಂ ಆ್ಯಪ್​ನಲ್ಲಿ ಸಂದೇಶ ಕಳುಹಿಸುವ ಮೂಲಕ ಈ ಕೃತ್ಯದ ಹೊಣೆಯನ್ನು ಜೈಶ್ ಉಲ್ ಹಿಂದ್ ಹೊತ್ತಿದ್ದು ಮುಂಬೈ ಪೊಲೀಸರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ ಎಂದು ಟಿವಿ9 ಮರಾಠಿ ವರದಿ ಮಾಡಿದೆ.

ಉದ್ಯಮಿ ಮುಕೇಶ್ ಅಂಬಾನಿ ಅವರಿಂದ ಬಿಟ್​ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಜೈಶ್-ಉಲ್-ಹಿಂದ್, ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಬಳಿ ನಡೆದಿದ್ದ ಸ್ಫೋಟದ ಹಿಂದಿನ ಕೈಗಳನ್ನು ಪತ್ತೆಹಚ್ಚಲು ಸಾಧ್ಯವಾಗದೇ ಇರುವುದರ ಕುರಿತು ತನಿಖಾ ಸಂಸ್ಥೆಗಳಿಗೆ ಸವಾಲು ಎಸೆದಿದೆ. ರಾಷ್ಟ್ರೀಯ ತನಿಖಾ ದಳ (National Investigation Agency) ಇಸ್ರೇಲಿ ಗುಪ್ತದಳ ಜತೆ ಕೈಜೋಡಿಸಿ ರಾಯಭಾರ ಕಚೇರಿ ಬಳಿಯ ಸ್ಫೋಟದ ಕುರಿತು ತನಿಖೆ ನಡೆಸಿದರೂ ಕೃತ್ಯದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಜೈಶ್-ಉಲ್-ಹಿಂದ್ ಸಂಘಟನೆ ಸವಾಲೆಸೆದಿದೆ.

ಇದು ಟ್ರೇಲರ್ ಮಾತ್ರ ಎಂದ ಉಗ್ರ ಸಂಘಟನೆ
ಮುಕೇಶ್ ಅಂಬಾನಿ ಅವರ ಮನೆ ಬಳಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿರುವುದು ಕೇವಲ ಟ್ರೇಲರ್ ಮಾತ್ರ ಎಂದು ಹೇಳಿರುವ ಜೈಶ್-ಉಲ್-ಹಿಂದ್, ‘ಈ ಕೃತ್ಯ ಎಸಗಿದ ಸಹೋದರ ಈಗಾಗಲೇ ತನ್ನ ಮನೆಗೆ ಸುರಕ್ಷಿತ ಸ್ಥಳಕ್ಕೆ ತಲುಪಿದ್ದಾನೆ. ಅದೊಂದು ಟ್ರೇಲರ್ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಕೃತ್ಯಗಳು ನಡೆಯಲಿವೆ. ದೆಹಲಿಯಲ್ಲಿ ನಿಮ್ಮ ಮೂಗಿನ ಕೆಳಗೇ ಸ್ಫೋಟ ನಡೆಸಿದರೂ ನಿಮ್ಮ ಬಳಿ ಏನನ್ನೂ ಮಾಡಲು ಸಾಧ್ಯಗಲಿಲ್ಲ. ಬಿಟ್​ಕಾಯಿನ್ ಮೂಲಕ ನಮಗೆ ಹಣ ವರ್ಗಾಯಿಸಿ’ ಎಂದು ಟೆಲಿಗ್ರಾಂ ಆ್ಯಪ್​ನಲ್ಲಿ ಮೆಸೇಜ್ ಕಳುಹಿಸಲಾಗಿದೆ.

ಏನಿದು ಪ್ರಕರಣ?

ಮುಕೇಶ್ ಅಂಬಾನಿಯವರ ‘ಅಂತಿಲ್ಲಾ’ ನಿವಾಸದ ಬಳಿ ಸ್ಕಾರ್ಪಿಯೊ ವಾಹನವೊಂದು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದರು. ಈ ವೇಳೆ, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಜೆಲೆಟಿನ್​ ಕಡ್ಡಿಗಳು ಇರುವುದು ಕಂಡುಬಂದಿತ್ತು.

ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ಮುಂಬೈ ಪೊಲೀಸ್​ ವಕ್ತಾರ DCP ಚೈತನ್ಯ, ವಾಹನದಲ್ಲಿ ಸ್ಫೋಟಕ ಜಿಲೆಟಿನ್​ ಕಡ್ಡಿಗಳು ಇರುವುದು ಪತ್ತೆಯಾಗಿತ್ತು. ಆದರೆ, ಇದು ಬಾಂಬ್​ ಮಾದರಿಯಲ್ಲಿ ರೂಪಿಸಿರುವುದಾಗಿ ಸದ್ಯಕ್ಕೆ ಕಂಡುಬಂದಿಲ್ಲ. ಸದ್ಯ, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದರು.

ಅಂದ ಹಾಗೆ, ಈ ಸ್ಕಾರ್ಪಿಯೊ ವಾಹನದ ನೋಂದಣಿ ಸಂಖ್ಯೆ ಉದ್ಯಮಿಯ ಭದ್ರತಾ ಸಿಬ್ಬಂದಿ ಬಳಸುವ ವಾಹನಗಳಿಗೆ ಹೋಲುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಜೊತೆಗೆ, ವಾಹನದಿಂದ ಪತ್ರವೊಂದು ಸಹ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದರು.

ಈ ಪತ್ರ ಹಿಂದಿಯಿಂದ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಬರೆದದ್ದಾಗಿದ್ದು, ಹಲವಾರು ಕಾಗುಣಿತ ದೋಷಗಳಿವೆ. ಪತ್ರವನ್ನು ನೋಡಿದರೆ ಪತ್ರ ಬರೆದ ವ್ಯಕ್ತಿಗೆ ಸರಿಯಾಗಿ ಬರೆಯಲು ಬರುವುದಿಲ್ಲ ಅಥವಾ ಬರೆಯಲು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಗಿರಬಹುದು ಎಂದು ಮುಂಬೈ ಪೊಲೀಸರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಗಾಂದೇವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಾಹನ ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಇತರ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದವು. ಕಾರನ್ನು ತಪಾಸಣೆಗೊಳಪಡಿಸಿದಾಗ ಅದರೊಳಗೆ ಜಿಲೆಟಿನ್ ಪತ್ತೆಯಾಗಿದೆ. ಅದು ಬಿಡಿ ಬಿಡಿಯಾಗಿಯೇ ಇದ್ದುಸ್ಫೋಟಕವನ್ನು ಸಿದ್ಧಪಡಿಸಿರಲಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸ್ ವಕ್ತಾರ, ಉಪ ಪೊಲೀಸ್ ಆಯುಕ್ತ ಚೈತನ್ಯ. ಎಸ್ ಹೇಳಿದ್ದರು.

ಇದನ್ನೂ ಓದಿ:  ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ

Asia’s Richest Person Mukesh Ambani: ಏಷ್ಯಾದ ಅತ್ಯಂತ ಶ್ರೀಮಂತ ಕಿರೀಟ ಮತ್ತೆ ಮುಕೇಶ್ ಮುಡಿಗೆ