ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಹೋರಿಗಳನ್ನು ಪಳಗಿಸುವ ಜಲ್ಲಿಕಟ್ಟುಗೆ ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿಯೊಡನೆ ಅಖಾಡದೊಳಗೆ ಇಬ್ಬರಿಗೆ ಮಾತ್ರ ಇರಲು ಅನುಮತಿ ನೀಡಿದೆ. ಕಳೆದ ಕೆಲವು ದಿನಗಳಿಂದ ತನ್ನ ಕೊವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆಯ ಮಧ್ಯೆ ತಮಿಳುನಾಡು ಸರ್ಕಾರ ಸೋಮವಾರ ಜಲ್ಲಿಕಟ್ಟುಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಗೇ, ಈ ಮೊದಲು ಜನವರಿ 16ರಂದು ನಿಗದಿಯಾಗಿದ್ದ ಜಲ್ಲಿಕಟ್ಟು ಕ್ರೀಡೆಯನ್ನು ಜನವರಿ 17ರಂದು ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಅಲಂಗನಲ್ಲೂರು ಜಲ್ಲಿಕಟ್ಟು ಕಾರ್ಯಕ್ರಮಗಳು ಜನವರಿ 16ರ ಬದಲು ಸೋಮವಾರ ಜನವರಿ 17ರಂದು ನಡೆಯಲಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ನೋಂದಣಿ ಸಮಯದಲ್ಲಿ ಹೋರಿಗಳ ಮಾಲೀಕರು ಮತ್ತು ಅದರ ತರಬೇತುದಾರರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಜಿಲ್ಲಾಡಳಿತ ನೀಡಿದ ಮಾನ್ಯ ಗುರುತಿನ ಚೀಟಿ ಹೊಂದಿರುವವರನ್ನು ಮಾತ್ರ ಕಣದ ಒಳಗೆ ಬಿಡಲಾಗುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಇಲ್ಲಿವೆ:
– ಪ್ರತಿ ಹೋರಿಯೊಡನೆ ಅಖಾಡದೊಳಗೆ ಕೇವಲ ಇಬ್ಬರಿಗೆ (ಗೂಳಿಯ ಮಾಲೀಕರು ಮತ್ತು ಸಹಾಯಕ) ಮಾತ್ರ ಅನುಮತಿಸಲಾಗುತ್ತದೆ.
-ಜಿಲ್ಲಾಡಳಿತವು ಇಬ್ಬರಿಗೆ ಗುರುತಿನ ಚೀಟಿ ನೀಡಲಿದೆ.
– ಕಾರ್ಡ್ ಇಲ್ಲದವರನ್ನು ರಿಂಗ್ ಒಳಗೆ ಬಿಡಲಾಗುವುದಿಲ್ಲ.
– ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಪೂರ್ಣ ವ್ಯಾಕ್ಸಿನೇಷನ್ ಮತ್ತು 48 ಗಂಟೆಗಳಿಗಿಂತ ಹಳೆಯದಾದ RT PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.
– ಹೋರಿಯ ಮಾಲೀಕರಂತೆ ಆಟಗಾರರಿಗೂ ಆಯಾ ಜಿಲ್ಲಾಡಳಿತದಿಂದ ಗುರುತಿನ ಚೀಟಿ ನೀಡಲಾಗುವುದು.
– ಜಲ್ಲಿಕಟ್ಟುಗೆ ಮೂರು ದಿನಗಳ ಮೊದಲು ಮಾಲೀಕರು ಮತ್ತು ಆಟಗಾರರಿಗೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲೆಗಳಿಗೆ ಸೂಚಿಸಲಾಗಿದೆ.
ತಮಿಳುನಾಡಿನ ವೆಲ್ಲೂರು, ತಿರುವಣ್ಣಾಮಲೈ, ರಾಣಿಪೇಟ್ ಮತ್ತು ತಿರುಪತ್ತೂರಿನಲ್ಲಿ ಜಿಲ್ಲಾಡಳಿತವು ಪೊಂಗಲ್ ಹಬ್ಬಕ್ಕೆ ಮುನ್ನ ಜಲ್ಲಿಕಟ್ಟು ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಷೇಧಿಸಿದೆ. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜಲ್ಲಿಕಟ್ಟು ಉತ್ಸಾಹಿಗಳ ದೊಡ್ಡ ಗುಂಪು ವೆಲ್ಲೂರು ಕಲೆಕ್ಟರೇಟ್‌ಗೆ ಘೇರಾವ್ ಮಾಡಿ, ಹಬ್ಬದ ಸಮಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಧಿಕಾರಿ ಪಿ. ಕುಮಾರವೇಲ್ ಪಾಂಡಿಯನ್ ಅವರಿಂದ ಅನುಮತಿ ಕೋರಿದೆ.
ನಾಲ್ಕು ದಿನಗಳ ಸುಗ್ಗಿಯ ಹಬ್ಬ ಪೊಂಗಲ್‌ನ ಮೂರನೇ ದಿನವಾದ ಮಟ್ಟು ಪೊಂಗಲ್‌ನ ಭಾಗವಾಗಿ ಜಲ್ಲಿಕಟ್ಟು ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಹೆಚ್ಚುತ್ತಿರುವ ಕೊವಿಡ್-19 ಸೋಂಕುಗಳ ಮಧ್ಯೆ ತಮಿಳುನಾಡು ಸರ್ಕಾರ ‘ಜಲ್ಲಿಕಟ್ಟು’ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಸಾಮಾನ್ಯವಾಗಿ ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆಯುವ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಲಾಗಿದ್ದರೂ, ಪ್ರೇಕ್ಷಕರ ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ. ಕಡ್ಡಾಯವಾಗಿ ಕೊವಿಡ್ ಲಸಿಕೆ ಪಡೆಯಲು ಆದೇಶಿಸಲಾಗಿದೆ.
ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಎರಡು ಡೋಸ್ ಕೊವಿಡ್ ಲಸಿಕೆ ಮತ್ತು RT PCR ನೆಗೆಟಿವ್ ಸರ್ಟಿಫಿಕೆಟ್ ಅನ್ನು ಕಡ್ಡಾಯಗೊಳಿಸಲಾಗಿದೆ. ಗೂಳಿ ಮಾಲೀಕರಂತೆ ಆಟಗಾರರಿಗೂ ಆಯಾ ಜಿಲ್ಲಾಡಳಿತಗಳು ಗುರುತಿನ ಚೀಟಿ ನೀಡಲಿವೆ. ಜಲ್ಲಿಕಟ್ಟುಗೂ ಮೂರು ದಿನಗಳ ಮೊದಲು ಮಾಲೀಕರು ಮತ್ತು ಆಟಗಾರರಿಗೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲೆಗಳಿಗೆ ಸೂಚಿಸಲಾಗಿದೆ.
300 ಆಟಗಾರರಿಗೆ ‘ಜಲ್ಲಿಕಟ್ಟು’ ಅಥವಾ ಗೂಳಿ ಪಳಗಿಸಲು ಅವಕಾಶವಿದ್ದರೆ, 150 ಆಟಗಾರರಿಗೆ ತಮಿಳಿನಲ್ಲಿ ‘ಎರುತು ಬಿಡುತಾಳ್’ ಎಂದು ಕರೆಯಲಾಗುವ ಬುಲ್ ರೇಸಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಅಲ್ಲದೆ, ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು, ಕ್ರೀಡೆಯ ಸಂಘಟಕರು ಮತ್ತು ಪ್ರೇಕ್ಷಕರು ಎರಡು ಡೋಸ್ಗಳ ಕೊವಿಡ್-19 ಲಸಿಕೆಯನ್ನು ಪಡೆದಿರಬೇಕು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: Jallikattu: ಕೊವಿಡ್ ಹೆಚ್ಚಳದ ನಡುವೆಯೂ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಅನುಮತಿ; ನಿಯಮಗಳು ಹೀಗಿವೆ
ಜಲ್ಲಿಕಟ್ಟು ಕ್ರೀಡೆಯಲ್ಲಿ ವಿದೇಶಿ ತಳಿಗಳ ಎತ್ತುಗಳನ್ನು ಬಳಸುವಂತಿಲ್ಲ: ಮದ್ರಾಸ್ ಹೈಕೋರ್ಟ್ ಆದೇಶ