ಜಮ್ಮು ಕಾಶ್ಮೀರ ಮೇಘಸ್ಫೋಟ: ರಾತ್ರೋರಾತ್ರಿ ಮಾರುಕಟ್ಟೆಯೇ ಕಣ್ಮರೆ! ನೂರಾರು ಮನೆಗಳಿಗೆ ಹಾನಿ, ರಸ್ತೆ ಸಂಚಾರ ಅಸ್ತವ್ಯಸ್ತ

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟ, ಭಾರಿ ಮಳೆ ಹಾಗೂ ಪ್ರವಾಹದಿಂದ ಸಂಭವಿಸಿದ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ನೂರಾರು ಮನೆಗಳಿಗೆ ಹಾನಿಯಾಗಿದ್ದು, ಮಾರುಕಟ್ಟೆ ಪ್ರದೇಶವೊಂದು ಸಂಪೂರ್ಣ ಮುಳುಗಡೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಕೆಲವು ಕಟ್ಟಡಗಳು ಸಂಪೂರ್ಣ ಧರಾಶಾಯಿಯಾಗಿದ್ದು, ಸುಮಾರು 8-10 ಕಾರುಗಳು ಅವಶೇಷಗಳಲ್ಲಿ ಸಿಲುಕಿಕೊಂಡಿವೆ.

ಜಮ್ಮು ಕಾಶ್ಮೀರ ಮೇಘಸ್ಫೋಟ: ರಾತ್ರೋರಾತ್ರಿ ಮಾರುಕಟ್ಟೆಯೇ ಕಣ್ಮರೆ! ನೂರಾರು ಮನೆಗಳಿಗೆ ಹಾನಿ, ರಸ್ತೆ ಸಂಚಾರ ಅಸ್ತವ್ಯಸ್ತ
ಜಮ್ಮು ಕಾಶ್ಮೀರ ಮೇಘಸ್ಫೋಟದ ಅವಾಂತರಗಳು

Updated on: Apr 21, 2025 | 8:03 AM

ಶ್ರೀನಗರ, ಏಪ್ರಿಲ್ 21: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹವಾಮಾನ ಬದಲಾವಣೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭಾನುವಾರ ರಾಂಬನ್ (Ramban) ಜಿಲ್ಲೆಯ ಬಾಗ್ನಾ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ (Cloudburst) ಮೂವರು ಮೃತಪಟ್ಟಿದ್ದಾರೆ. ಆದರೆ, ಏಕಾಏಕಿ ಸುರಿದ ವರ್ಷಧಾರೆಯಿಂದ ಸೃಷ್ಟಿಯಾದ ಪ್ರವಾಹ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಹಲವು ಕಡೆ ರಸ್ತೆಗಳು ಬಂದ್ ಆಗಿವೆ. ಕೇವಲ ಒಂದು ರಾತ್ರಿಯಲ್ಲಿ ಆ ಪ್ರದೇಶದ ಜನರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಅನೇಕ ಜನರ ಮನೆಗಳು ಮತ್ತು ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ. ರಾತ್ರೋರಾತ್ರಿ ಮಾರುಕಟ್ಟೆಯೇ ಜಲಾವೃತಗೊಂಡು ಕಣ್ಮರೆಯಾಗಿದೆ.

ರಾಂಬನ್​​ನ ಧಾರ್ಮಿಕ ಸ್ಥಳದಿಂದ ಸುಮಾರು 100 ಜನರನ್ನು ರಕ್ಷಿಸಲಾಗಿದೆ ಎಂದು ಎಸ್‌ಎಸ್‌ಪಿ ರಂಬನ್ ಕುಲ್ಬೀರ್ ಸಿಂಗ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ರಂಬನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 44 ಜಲಾವೃತಗೊಂಡು ಸಂಚಾರ ಬಂದ್ ಆಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
ಗಾಂಧಿ, ನೆಹರು ಬಗ್ಗೆಯೇ ತಪ್ಪು ಹೇಳಿದ ರಾಹುಲ್ ಗಾಂಧಿ;ಬಿಜೆಪಿ ಸಂಸದ ವ್ಯಂಗ್ಯ
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಬೆಂಬಲಕ್ಕೆ ನಿಂತ ಖರ್ಗೆ
ದೆಹಲಿ ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಕೆನಡಾದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವು

ಭಯಾನಕ ಅನುಭವ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು


ಮೇಘಸ್ಫೋಟ ಹಾಗೂ ಏಕಾಏಕಿ ಮಳೆ ಸುರಿದ ಬಗ್ಗೆ ರಾಂಬನ್ ನಿವಾಸಿ ಓಂ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಾನು ಅಂಗಡಿಯ ಅನತಿ ದೂರದಲ್ಲಿ ನದಿಯ ಇನ್ನೊಂದು ಬದಿಯಲ್ಲಿ ವಾಸಿಸುತ್ತಿದ್ದೇನೆ. ಮಳೆಯ ನಂತರ ಅಂಗಡಿ ಇದ್ದ ಸ್ಥಳಕ್ಕೆ ತಲುಪಿ ನೋಡಿದಾಗ, ಅಂಗಡಿ ಸೇರಿದಂತೆ ಇಡೀ ಮಾರುಕಟ್ಟೆ ಕಣ್ಮರೆಯಾಗಿತ್ತು. ಈ ರೀತಿ ಮಳೆಯಾಗಿದ್ದನ್ನು ನೋಡುತ್ತಿರುವುದು ಇದೇ ಮೊದಲು ಎಂದಿದ್ದಾರೆ.

ಪ್ರವಾಹದ ನಂತರದ ವಿಡಿಯೋ ನೋಡಿ


ನಮ್ಮ ಬಳಿ ಎರಡು ಅಂಗಡಿಗಳಿದ್ದು, ಅವು ರಾತ್ರೋರಾತ್ರಿ ಕಣ್ಮರೆಯಾಗಿವೆ ಎಂದು ರಾಂಬನ್‌ನ ಅಂಗಡಿ ಮಾಲೀಕ ರವಿ ಕುಮಾರ್ ಎಂಬವರು, ಹೇಳಿದ್ದಾರೆ. ನಾಶವಾದ ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಇದ್ದವು.

ಇದನ್ನೂ ಓದಿ: ಎಂಜಾಯ್ ಮಾಡಲು ನೀರಿಗೆ ಹಾರಿ ಒದ್ದಾಡಿ ಪ್ರಾಣ ಬಿಟ್ಟ ಗೆಳೆಯರು; ಶಾಕಿಂಗ್ ವಿಡಿಯೋ ಮೊಬೈಲ್​ನಲ್ಲಿ ಸೆರೆ

ಮೇಘಸ್ಫೋಟ, ಪ್ರವಾಹದಿಂದಾಗಿ 100 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮೂವರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ