ಜಮ್ಮು ಕಾಶ್ಮೀರದಲ್ಲಿ ಮಾರ್ಚ್ ಒಳಗೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣ: ಜನತಂತ್ರದತ್ತ ಹೆಜ್ಜೆ

ಜಮ್ಮು ಕಾಶ್ಮೀರದಲ್ಲಿ ಮಾರ್ಚ್ ಒಳಗೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣ: ಜನತಂತ್ರದತ್ತ ಹೆಜ್ಜೆ
ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯ ಕಾವಲು ಕಾಯುತ್ತಿರುವ ಸಿಆರ್​ಪಿಎಫ್ ಸಿಬ್ಬಂದಿ

ಸದ್ಯಕ್ಕೆ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆ ನಡೆಯುತ್ತಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಬೇಕೆಂಬ ಡೆಡ್​ಲೈನ್ ನೀಡಲಾಗಿದೆ.

S Chandramohan

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 05, 2021 | 10:17 PM

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಇಂದಿಗೆ 2 ವರ್ಷ ಪೂರ್ಣವಾಗಿದೆ. ಜಮ್ಮು ಕಾಶ್ಮೀರದ ಝೀಲಂ ನದಿಯಲ್ಲಿ ಕಳೆದ 2 ವರ್ಷದಲ್ಲಿ ಸಾಕಷ್ಟು ನೀರು ಹರಿದಿದೆ. ಆದರೆ, ಜಮ್ಮು ಕಾಶ್ಮೀರದಲ್ಲಿ ಇನ್ನೂ ವಿಧಾನಸಭೆ ಚುನಾವಣೆ ನಡೆದಿಲ್ಲ. ಸದ್ಯಕ್ಕೆ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆ ನಡೆಯುತ್ತಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಬೇಕೆಂಬ ಡೆಡ್​ಲೈನ್ ನೀಡಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ಮಾಡುವುದೇ ಈಗ ದೊಡ್ಡ ಸವಾಲು.

ಜಮ್ಮು ಕಾಶ್ಮೀರ ಭಾರತದ ಮುಕುಟಮಣಿ. ಅಲ್ಲೀಗ ರಾಜಕೀಯ ಚಟುವಟಿಕೆಗಳೇ ಸ್ತಬ್ಧವಾಗಿವೆ. ಜಮ್ಮು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಇಂದಿಗೆ 2 ವರ್ಷ ಪೂರ್ಣವಾಗಿದೆ. 2019ರ ಆಗಸ್ಟ್ 5ರಂದು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದರು. ಅಂದೇ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಆಗಿತ್ತು. 2019ರ ಆಗಸ್ಟ್ 6ರಂದೇ ರಾಜ್ಯಸಭೆಯಲ್ಲೂ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲಾಗಿತ್ತು. ಈಗ ಜಮ್ಮು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗರ್ವನರ್ ಆಳ್ವಿಕೆ ಜಾರಿಯಲ್ಲಿದೆ.

ಜಮ್ಮು ಕಾಶ್ಮೀರದಲ್ಲಿ ಈಗ ವಿಧಾನಸಭೆ ಆಸ್ತಿತ್ವದಲ್ಲಿಲ್ಲ, ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯು ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಮುಕ್ತಾಯವಾಗಲಿದೆ. ಈ ಹಿಂದೆ 1981ರ ಜನಗಣತಿ ಆಧರಿಸಿ 1995ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿತ್ತು. ಈಗ 26 ವರ್ಷದ ಬಳಿಕ ಕ್ಷೇತ್ರ ಪುನರ್ ವಿಂಗಡಣೆಯನ್ನು ನಡೆಸಲಾಗುತ್ತಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಾದ ರಂಜನ್ ಪ್ರಕಾಶ್ ದೇಸಾಯಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಆಯೋಗ ರಚಿಸಲಾಗಿದೆ. ಕಳೆದ ತಿಂಗಳು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಈ ಆಯೋಗಕ್ಕೆ ಇದುವರೆಗೂ 280 ನಿಯೋಗಗಳು, 800 ಮಂದಿ ಮನವಿ ನೀಡಿದ್ದಾರೆ. ಈ ಮೊದಲು ಇದ್ದ 12 ಜಿಲ್ಲೆಗಳ ಸಂಖ್ಯೆ ಈಗ 20ಕ್ಕೆ ಏರಿಕೆಯಾಗಿದೆ. ತಾಲ್ಲೂಕುಗಳ ಸಂಖ್ಯೆಯು 58ರಿಂದ 270ಕ್ಕೆ ಏರಿಕೆಯಾಗಿದೆ.

ಕೆಲ ವಿಧಾನಸಭಾ ಕ್ಷೇತ್ರಗಳು ಎರಡೆರೆಡು ಜಿಲ್ಲೆಗೆ ಸೇರ್ಪಡೆಯಾಗಿವೆ. ಒಂದೇ ಕ್ಷೇತ್ರದ ಅರ್ಧ ಭಾಗ ಒಂದು ಜಿಲ್ಲೆಗೆ ಸೇರಿದ್ದರೇ, ಇನ್ನರ್ಧ ಭಾಗ ಮತ್ತೊಂದು ಜಿಲ್ಲೆಗೆ ಸೇರಿದೆ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ, ಕ್ಷೇತ್ರಗಳ ಗಡಿಯನ್ನು ಸರಿಯಾಗಿ ಗುರುತಿಸಿ ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಬೇಕಾಗಿದೆ. ಸೆಕ್ಷನ್ 9ರ ಪ್ರಕಾರ ವಿಧಾನಸಭಾ ಕ್ಷೇತ್ರಗಳು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲೇ ಇರಬೇಕು. ಕನಿಷ್ಠ 12 ಜಿಲ್ಲೆ ಹಾಗೂ 88 ತಾಲ್ಲೂಕುಗಳ ಗಡಿಗಳು ವಿಧಾನಸಭಾ ಕ್ಷೇತ್ರದ ಆಚೆಗೂ ಇವೆ. ಇದನ್ನು ಈಗ ಮರುರಚನೆ ಮಾಡಬೇಕು. ಸಾಂಬಾ, ರಿಯಸಿ, ರಾಂಬಾನ್, ದೊಡಾ, ಗಂದೇರಬಾಲ್, ಬುಡ್ಗಾಮ್ ವಿಧಾನಸಭಾ ಕ್ಷೇತ್ರಗಳು ಎರಡೆರೆಡು ಜಿಲ್ಲೆಗೆ ಹಂಚಿ ಹೋಗಿವೆ. ಕುಪ್ವಾರ, ಶ್ರೀನಗರ, ಬಾರಾಮುಲ್ಲಾ, ಗಂದೇರಬಾಲ್ ಕ್ಷೇತ್ರಗಳು ಅನೇಕ ತಾಲ್ಲೂಕುಗಳ ನಡುವೆ ಹಂಚಿ ಹೋಗಿವೆ. ವಿಧಾನಸಭಾ ಕ್ಷೇತ್ರಗಳ ಗಡಿಯನ್ನು ಮರುರಚನೆ ಮಾಡಿ ನಿಗದಿಪಡಿಸುವುದೇ ಈಗ ಕ್ಷೇತ್ರ ಪುನರ್ ವಿಂಗಡಣಾ ಆಯೋಗಕ್ಕೆ ಇರುವ ದೊಡ್ಡ ಸವಾಲು.

ಬೆಟ್ಟಗುಡ್ಡಗಳ ಪ್ರದೇಶಗಳನ್ನು ಶಾಸಕರಾದವರು ಕಡೆಗಣಿಸದಂತೆ ಕ್ಷೇತ್ರ ರಚಿಸುವ ಸವಾಲು ಇದೆ. ಜಮ್ಮು ಕಾಶ್ಮೀರದಲ್ಲಿ ಈಗ 107 ವಿಧಾನಸಭಾ ಕ್ಷೇತ್ರಗಳಿದ್ದು, ಇವುಗಳ ಸಂಖ್ಯೆಯನ್ನು 114ಕ್ಕೇರಿಸಲಾಗುತ್ತೆ. ಈ 114 ಕ್ಷೇತ್ರಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ 24 ಕ್ಷೇತ್ರಗಳೂ ಸೇರಿವೆ. ಈ ಹಿಂದೆ ಪಿಓಕೆಯ 24 ಕ್ಷೇತ್ರಗಳನ್ನು ಹೊರತುಪಡಿಸಿದರೆ, ಜಮ್ಮು ಕಾಶ್ಮೀರ ವಿಧಾನಸಭೆ ಸದಸ್ಯರ ಬಲ 83 ಆಗಿತ್ತು. ಈಗ ಕ್ಷೇತ್ರ ಪುನರ್ ವಿಂಗಡಣೆಯ ಮೂಲಕ, ಪಿಒಕೆ ಹೊರತುಪಡಿಸಿದ ಜಮ್ಮು ಕಾಶ್ಮೀರ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 90ಕ್ಕೆ ಏರಿಕೆ ಮಾಡಲಾಗುತ್ತೆ.

ಕಳೆದ ವಿಧಾನಸಭೆಯಲ್ಲಿ ಜಮ್ಮು ಪ್ರಾಂತ್ಯದ 7 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಯಾವುದೇ ಮೀಸಲು ಕ್ಷೇತ್ರಗಳು ಇರಲಿಲ್ಲ. ಈಗ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರಗಳನ್ನು ನಿಗದಿಪಡಿಸಿ ನೀಡಬೇಕಾಗಿದೆ. ಜಮ್ಮು ಪ್ರಾಂತ್ಯ ಹಾಗೂ ಕಾಶ್ಮೀರ ಪ್ರಾಂತ್ಯದ ನಡುವೆ ಕ್ಷೇತ್ರಗಳನ್ನು ಸಮಾನವಾಗಿ ಹಂಚಲಾಗುತ್ತದೆಯೇ ಇಲ್ಲವೇ ಎನ್ನುವುದು ರಾಜಕೀಯ ಚರ್ಚೆಗೂ ಕಾರಣವಾಗಿದೆ. ಈಗ ಹೆಚ್ಚುವರಿಯಾಗಿ 7 ಕ್ಷೇತ್ರಗಳನ್ನು ಸೇರಿಸಬೇಕಾಗಿದೆ. ಈ 7 ಕ್ಷೇತ್ರಗಳ ಪೈಕಿ ಯಾವ್ಯಾವ ಪ್ರಾಂತ್ಯಕ್ಕೆ ಎಷ್ಟೆಷ್ಟು ಕ್ಷೇತ್ರಗಳನ್ನು ಸೇರಿಸಲಾಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 7 ಕ್ಷೇತ್ರಗಳನ್ನು ಎರಡು ಪ್ರಾಂತ್ಯಗಳ ನಡುವೆ ಹಂಚಿಕೆ ಮಾಡಿದರೆ ಬುಡಕಟ್ಟು ಸಮುದಾಯಗಳಾದ ಗುಜ್ಜರ್, ಬಕಾರವಾಲಾ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ನೀಡಬಹುದು. ಪಂಡಿತ್ ಸಮುದಾಯ 90ರ ದಶಕದಲ್ಲಿ ಹಿಂಸಾಚಾರ, ದೌರ್ಜನ್ಯ, ಉಗ್ರಗಾಮಿಗಳ ಹಾವಳಿಯ ಕಾರಣದಿಂದ ಜಮ್ಮು ಕಾಶ್ಮೀರವನ್ನು ಬಿಟ್ಟು ಬೇರೆಡೆಗೆ ವಲಸೆ ಹೋಗಿತ್ತು. ಸಮುದಾಯ ಮತ್ತೆ ಜಮ್ಮು ಕಾಶ್ಮೀರಕ್ಕೆ ಹಿಂತಿರುಗುವಂತೆ ಮಾಡಲು ಪ್ರತ್ಯೇಕ ಕ್ಷೇತ್ರ ಸೃಷ್ಟಿಸಿ, ಪಂಡಿತ್ ಸಮುದಾಯದ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ನೀಡಬೇಕೆಂಬ ಬೇಡಿಕೆಯೂ ಇದೆ.

ಇದನ್ನೂ ಓದಿ: Jammu Kashmir: ಕಾಶ್ಮೀರದ ಪೊಲೀಸರಿಂದ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ

ಜಮ್ಮು ಮತ್ತು ಕಾಶ್ಮೀರ ನಕಾಶೆ

ಯಾವ ಪ್ರಾಂತ್ಯದಲ್ಲಿ ಹೆಚ್ಚಿನ ಕ್ಷೇತ್ರ ಸೃಷ್ಟಿಯಾಗುತ್ತೆ? ಈ ಹಿಂದಿನ ವಿಧಾನಸಭೆಯಲ್ಲಿ ಕಾಶ್ಮೀರ ಪ್ರಾಂತ್ಯದಲ್ಲಿ 46 ವಿಧಾನಸಭಾ ಕ್ಷೇತ್ರಗಳಿದ್ದವು. ಜಮ್ಮು ಪ್ರಾಂತ್ಯದಲ್ಲಿ 37 ವಿಧಾನಸಭಾ ಕ್ಷೇತ್ರಗಳಿದ್ದವು. ಕಾಶ್ಮೀರ ಪ್ರಾಂತ್ಯವು ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ ಪ್ರಾಂತ್ಯ. ಈ ಪ್ರಾಂತ್ಯದಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್ ಪಕ್ಷಗಳು ಪ್ರಬಲವಾಗಿವೆ. ಕಾಶ್ಮೀರ ಪ್ರಾಂತ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಿದ್ದರಿಂದ ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್ ಪಕ್ಷಗಳೇ ಜಮ್ಮು ಕಾಶ್ಮೀರದಲ್ಲಿ ಬಹುಮತ ಗಳಿಸಿ ಅಧಿಕಾರ ಹಿಡಿಯುತ್ತಿದ್ದವು ಎನ್ನುವ ಆರೋಪ ಇದೆ. ಈ ಹಿಂದಿನ ಪುನರ್ ವಿಂಗಡಣಾ ಆಯೋಗಗಳು ಕಾಶ್ಮೀರ ಪ್ರಾಂತ್ಯಕ್ಕೆ ಹೆಚ್ಚಿನ ಮಹತ್ವ ನೀಡಿ, ಹೆಚ್ಚಿನ ಕ್ಷೇತ್ರಗಳನ್ನು ಕಾಶ್ಮೀರ ಪ್ರಾಂತ್ಯಕ್ಕೆ ನೀಡಿವೆ, ಜಮ್ಮು ಪ್ರಾಂತ್ಯವನ್ನು ಕಡೆಗಣಿಸಿದ್ದವು ಎಂಬ ಆರೋಪ ಇದೆ.

ಜಮ್ಮು ಪ್ರಾಂತ್ಯದಲ್ಲಿ ಹಿಂದೂ ಸಮುದಾಯ ಪ್ರಬಲವಾಗಿದೆ. ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷ ಈಗ ಪ್ರಬಲವಾಗಿದೆ. ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈಗ ಕೇಂದ್ರದಲ್ಲಿ ಬಿಜೆಪಿಯು ಅಧಿಕಾರದಲ್ಲೇ ಇರುವುದರಿಂದ ಜಮ್ಮು ಪ್ರಾಂತ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳನ್ನು ಸೃಷ್ಟಿಸಬಹುದು. ಆ ಮೂಲಕ ಜಮ್ಮು ಕಾಶ್ಮೀರ ರಾಜಕಾರಣದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆ, ವ್ಯಾಖ್ಯಾನಗಳ ಕಾರಣದಿಂದಾಗಿಯೇ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಪುನರ್ ವಿಂಗಡಣೆ ಆಯೋಗದ ಮುಂದೆ ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್ ಪಕ್ಷಗಳ ನಾಯಕರು ಯಾವುದೇ ಮನವಿ ಸಲ್ಲಿಸಿಲ್ಲ.

ಕ್ಷೇತ್ರ ಪುನರ್ ವಿಂಗಡಣೆ ಮಾಡುವಾಗ ರಾಜ್ಯದ ಜನಸಂಖ್ಯೆಯನ್ನು ಮಾನದಂಡವಾಗಿ ಪರಿಗಣಿಸಬೇಕು. 2011ರ ಜನಗಣತಿ ಪ್ರಕಾರ, ಕಾಶ್ಮೀರ ಪ್ರಾಂತ್ಯದಲ್ಲಿ 68 ಲಕ್ಷ ಜನಸಂಖ್ಯೆ ಇದೆ. ಜಮ್ಮು ಪ್ರಾಂತ್ಯದಲ್ಲಿ 53 ಲಕ್ಷ ಜನಸಂಖ್ಯೆ ಇದೆ. ಕ್ಷೇತ್ರ ಪುನರ್ ವಿಂಗಡಣಾ ಆಯೋಗವು ಕ್ಷೇತ್ರಗಳ ಗಡಿ ಪುನರ್ ರಚನೆಯಲ್ಲಿ ವಿಭಾಗಾಧಿಕಾರಿಗಳ ನೆರವು ಕೋರಿದೆ. ಇದರ ಬಗ್ಗೆ ಇನ್ನೂ ಕೆಲ ಸುತ್ತಿನ ಸಭೆ ನಡೆಯಬೇಕಾಗಿದೆ. ಇದಾದ ಬಳಿಕ ಆಯೋಗವು ಕ್ಷೇತ್ರಗಳನ್ನು ಪುನರ್ ವಿಂಗಡಣೆಯ ಕರಡು ರಚಿಸಲಿದೆ. ಇದನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಲಾಗುತ್ತೆ. ಬಳಿಕವಷ್ಟೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತೆ. ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣವಾದ ಬಳಿಕ ವಿಧಾನಸಭಾ ಚುನಾವಣೆಯನ್ನು ನಡೆಸಲಾಗುತ್ತೆ. ಈ ಬಗ್ಗೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರದ ಸರ್ವಪಕ್ಷ ನಾಯಕರಿಗೆ ಭರವಸೆ ನೀಡಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣಾ ಆಯೋಗವು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ರಾಜಕೀಯ ಪಕ್ಷಗಳು, ನಾಯಕರು, ಜನರ ಅಭಿಪ್ರಾಯ, ಮನವಿಯನ್ನು ಸ್ವೀಕರಿಸಿದೆ. ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

(Jammu Kashmir delimitation process begins state heads towards democracy again)

ಇದನ್ನೂ ಓದಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರದ 11 ಸರ್ಕಾರಿ ನೌಕರರು ವಜಾ

ಇದನ್ನೂ ಓದಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ 2ವರ್ಷ; ಇಷ್ಟು ದಿನಗಳಲ್ಲಿ ಅಲ್ಲಿ ಆಗಿರುವ ಬದಲಾವಣೆಗಳೇನು?-ಇಲ್ಲಿದೆ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada