ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ 2ವರ್ಷ; ಇಷ್ಟು ದಿನಗಳಲ್ಲಿ ಅಲ್ಲಿ ಆಗಿರುವ ಬದಲಾವಣೆಗಳೇನು?-ಇಲ್ಲಿದೆ ಮಾಹಿತಿ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ 2ವರ್ಷ; ಇಷ್ಟು ದಿನಗಳಲ್ಲಿ ಅಲ್ಲಿ ಆಗಿರುವ ಬದಲಾವಣೆಗಳೇನು?-ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ

Jammu-Kashmir ಜಮ್ಮು-ಕಾಶ್ಮೀರದಲ್ಲಿ ಹಲವು ಬದಲಾವಣೆಗಳು ಆಗಿವೆ. ಹಾಗೇ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಗಮನಹರಿಸುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಸೇರಿ ಗುಪ್ಕಾರ್​ ಮೈತ್ರಿಕೂಟ ರಚಿಸಿಕೊಂಡಿವೆ.

TV9kannada Web Team

| Edited By: Lakshmi Hegde

Aug 05, 2021 | 1:11 PM

ಎರಡು ವರ್ಷಗಳ ಹಿಂದೆ ಇದೇ ದಿನ, ಅಂದರೆ 2029ರ ಆಗಸ್ಟ್​ 5ರಂದು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದನ್ನು ಮರೆಯುವಂತಿಲ್ಲ. ಜಮ್ಮು-ಕಾಶ್ಮೀರ (Jammu-Kashmir) ಕ್ಕೆ ವಿಶೇಷ ಸ್ಥಾನಮಾನ (Special Status) ಕೊಟ್ಟಿದ್ದ ಆರ್ಟಿಕಲ್​ 370 ಮತ್ತು 35 (ಎ) (Article 370 and 35 (A)ಗಳನ್ನು ರದ್ದುಗೊಳಿಸಿ ಇಂದಿಗೆ ಸರಿಯಾಗಿ ಎರಡು ವರ್ಷ. ಅಲ್ಲಿನ ವಿಶೇಷ ಸ್ಥಾನ ಮಾನ ರದ್ದುಗೊಳಿಸಿ, ಕೇಂದ್ರಾಡಳಿತಪ್ರದೇಶವನ್ನಾಗಿ ರೂಪಿಸಿದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಕಂಡುಬಂದ ಬದಲಾವಣೆಗಳೇನು? ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷ (Political Parties)ಗಳಂತೂ ಕೇಂದ್ರ ಸರ್ಕಾರದ ವಿರುದ್ಧ ಇಂದಿಗೂ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಜಮ್ಮು-ಕಾಶ್ಮೀರಕ್ಕೆ ರಾಜ್ಯತ್ವ (Statehood)ದ ಸ್ಥಾನಮಾನ ನೀಡಿ ಎಂದು ಪದೇಪದೆ ಆಗ್ರಹಿಸುತ್ತಲೇ ಇವೆ.

ಅಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ವರ್ಷಗಳಾದ ಹೊತ್ತಲ್ಲಿ ಏನೇನೆಲ್ಲ ಬದಲಾವಣೆಗಳಾಗಿದೆ ಎಂಬುದರ ಒಂದು ವರದಿ ಇಲ್ಲಿದೆ..

1.ಹೊರಗಿನವರಿಗೂ ಭೂಮಿ ಖರೀದಿಸಲು ಅವಕಾಶ ಹಿಂದೆ ವಿಶೇಷ ಸ್ಥಾನಮಾನ ಇದ್ದಾಗ ಜಮ್ಮುಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡಲು, ಹೊರಗಿನವರಿಗೆ ಅಂದರೆ ಬೇರೆ ರಾಜ್ಯಗಳ ಜನರಿಗೆ ಅವಕಾಶ ಇರಲಿಲ್ಲ. ಆದರೆ ಈಗ ಅದು ಬದಲಾಗಿದೆ. ಕಳೆದ ವರ್ಷ ಅಕ್ಟೋಬರ್​ನಿಂದ ಹೊರಗಿನವರಿಗೂ ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡುವ ಅವಕಾಶ ಸಿಕ್ಕಂತಾಗಿದೆ. ಜಮ್ಮು-ಕಾಶ್ಮೀರದ ಕಾಯಂ ನಿವಾಸಿಗಳು ತಮ್ಮ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡಬಹುದು ಎಂದು ಗೆಜೆಟ್​ ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿದ್ದರೂ, ಕೃಷಿ ಭೂಮಿಯನ್ನು ಕೃಷಿ-ರಹಿತ ಕಾರ್ಯಕ್ಕಾಗಿ ಯಾರಿಗೂ ವರ್ಗಾಯಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ.

2.ನಿವಾಸ ಪ್ರಮಾಣ ಪತ್ರ ನಿಯಮ ಬದಲು ಜಮ್ಮು-ಕಾಶ್ಮೀರದ ಮಹಿಳೆಯರು, ಬೇರೆ ರಾಜ್ಯದ ಪುರುಷನನ್ನು ಮದುವೆಯಾಗಿ ಇಲ್ಲೇ ಉಳಿದಿದ್ದರೆ ಆಕೆಯ ಪತಿಗೂ ಇಲ್ಲಿನ ನಿವಾಸ ಪ್ರಮಾಣ ಪತ್ರ ಕೊಡುವ ನಿಯಮ ಜುಲೈನಿಂದ ಜಾರಿಯಾಗಿದೆ. ಅದರಿಂದಾಗಿ ಆ ಪುರುಷ ಜಮ್ಮು-ಕಾಶ್ಮೀರದಲ್ಲಿ ಆಸ್ತಿ-ಭೂಮಿ ಖರೀದಿ ಮಾಡಬಹುದು. ಇಲ್ಲಿ ಸರ್ಕಾರಿ ಉದ್ಯೋಗಕ್ಕೂ ಅರ್ಜಿ ಸಲ್ಲಿಸಬಹುದು. ಇನ್ನು, ಈ ಕೇಂದ್ರಾಡಳಿತ ಪ್ರದೇಶದಲ್ಲಿ 15ವರ್ಷಕ್ಕೂ ಹೆಚ್ಚು ಕಾಲ ವಾಸವಾಗಿರುವ, ಇಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಏಳುವರ್ಷ ಶಿಕ್ಷಣ ಪೂರೈಸಿ, 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಬರೆದ ಎಲ್ಲರಿಗೂ ಜಮ್ಮು-ಕಾಶ್ಮೀರ ನಿವಾಸ ಪ್ರಮಾಣ ಪತ್ರ ದೊರೆಯಲಿದೆ.

3. ಪ್ರತ್ಯೇಕ ಧ್ವಜ ಇಲ್ಲ ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್​ 370ರಡಿ ಒಂದು ಪ್ರತ್ಯೇಕ ಧ್ವಜ ಇತ್ತು. ಕೆಂಪುಬಣ್ಣದ ಆಯತಾಕಾರದ ಧ್ವಜ ಇದಾಗಿತ್ತು. ಅದರ ಮೇಲೆ ಮೂರು ಬಿಳಿಬಣ್ಣದ ಪಟ್ಟಿಗಳೊಂದಿಗೆ, ಅದೇ ಬಣ್ಣದಲ್ಲಿ ನೇಗಿಲ ಚಿತ್ರವೂ ಇತ್ತು. ಸುಮಾರು ಆರು ದಶಕಗಳ ಕಾಲ ಇದು ಭಾರತದ ಧ್ವಜದ ಪಕ್ಕದಲ್ಲಿ ಹಾರಾಡುತ್ತಿತ್ತು. ಆದರೆ ಯಾವಾಗ ಕೇಂದ್ರ ಸರ್ಕಾರ ಆರ್ಟಿಕಲ್​ 370ನ್ನು ರದ್ದುಗೊಳಿಸಿತೋ..ಅಂದಿಗೆ ಈ ಧ್ವಜವೂ ಕೂಡ ನಿಷ್ಕ್ರಿಯಗೊಂಡಿತು. ಜಮ್ಮು-ಕಾಶ್ಮೀರ ಧ್ವಜ ತೆಗೆಯಲಾಗಿದ್ದು, ಇದೀಗ ಭಾರತದ ಏಕತೆಯ ಪ್ರತೀಕವಾದ ತ್ರಿವರ್ಣಧ್ವಜ ಮಾತ್ರ ಹಾರಾಡುತ್ತಿದೆ.

4. ಕಲ್ಲೂ ತೂರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಮ್ಮು-ಕಾಶ್ಮೀರದಲ್ಲಿ ಸೈನಿಕರು, ನಾಗರಿಕರ ಮೇಲೆ ಕಲ್ಲು ತೂರಾಟ ಮಾಡುವವರಿದ್ದಾರೆ. ಹೀಗೆ ಕಲ್ಲುತೂರಾಟ ಮತ್ತು ಇತರ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಪಾಸ್​ಪೋರ್ಟ್ ಮತ್ತು ಇತರ ಸರ್ಕಾರಿ ಸೌಲಭ್ಯ ಪಡೆಯಲು ಅಗತ್ಯ ಇರುವ ಭದ್ರತಾ ಅನುಮತಿಗಳನ್ನು ನಿರಾಕರಿಸುವುದಾಗಿ ಜಮ್ಮು-ಕಾಶ್ಮೀರ ಪೊಲೀಸ್​ನ ಸಿಐಡಿ ದಳ ಹೇಳಿದೆ. ಕಲ್ಲು ತೂರಾಟ ಸೇರಿ ಇತರ ಇನ್ಯಾವುದೇ ಕಾನೂನು-ಸುವ್ಯವಸ್ಥೆ ಹಾಳುಮಾಡುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಹಲವು ಬದಲಾವಣೆಗಳು ಆಗಿವೆ. ಹಾಗೇ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಗಮನಹರಿಸುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಸೇರಿ ಗುಪ್ಕಾರ್​ ಮೈತ್ರಿಕೂಟ ರಚಿಸಿಕೊಂಡಿವೆ. ಮೆಹಬೂಬಾ ಮುಫ್ತಿ, ಫಾರೂಕ್​ ಅಬ್ದುಲ್ಲಾ, ಒಮರ್​ ಅಬ್ದುಲ್ಲಾ ಸೇರಿ ಹಲವು ಪ್ರಮುಖ ನಾಯಕರೆಲ್ಲ ಒಟ್ಟಾಗಿ, ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯತ್ವ ಸ್ಥಾನಮಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದಾಗ ಇವರನ್ನೆಲ್ಲ ಗೃಹಬಂಧನದಲ್ಲಿ ಇಡಲಾಗಿತ್ತು.

ಇದನ್ನೂ ಓದಿ: N Mahesh: ಕೊಳ್ಳೇಗಾಲದ ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆ

2 years of abrogation of Article 370 In Jammu Kashmir

Follow us on

Related Stories

Most Read Stories

Click on your DTH Provider to Add TV9 Kannada