Nitish Kumar: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು 50 ಸೀಟ್ಗಳಿಗೆ ಕಟ್ಟಿಹಾಕಬಹುದು: ನಿತೀಶ್ ಕುಮಾರ್
ಬಿಹಾರದ ಸಾಮಾಜಿಕ ಮತ್ತು ಕೋಮು ಸೌಹಾರ್ದ ಕದಡಲು ಬಿಜೆಪಿ ಪ್ರಯತ್ನಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪಾಟ್ನಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 50 ಸೀಟ್ಗಳಿಗೆ ಕಟ್ಟಿಹಾಕಲಾಗುವುದು. ಇದಕ್ಕಾಗಿಯೇ ವಿರೋಧ ಪಕ್ಷಗಳ ಸಂಘಟನೆ ಮತ್ತು ಏಕೀಕೃತ ಮೈತ್ರಿಕೂಟ ರಚನೆ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar) ಹೇಳಿದರು. ಜೆಡಿಯು (JDU) ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶ್ ಕುಮಾರ್ ಬಿಜೆಪಿಯ ಗೆಲುವಿಗೆ ಕಡಿವಾಣ ಹಾಕುವ ಆಶಯ ವ್ಯಕ್ತಪಡಿಸಿದರು.
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಹಲವು ಸಂಚುಗಳನ್ನು ನಡೆಸುವ ಮೂಲಕ ಜೆಡಿಯು ಗೆಲುವಿಗೆ ಕಡಿವಾಣ ಹಾಕಿತ್ತು. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಆಸೆಯೂ ನನಗಿರಲಿಲ್ಲ ಎಂದು ನಿತೀಶ್ ಸಭೆಯಲ್ಲಿ ಹೇಳಿದರು. ಜೆಡಿಯು ಮತ್ತು ಬಿಜೆಪಿ ನಡುವೆ ಹಲವು ಭಿನ್ನಮತಗಳಿಗೆ ಅದೇ ವಿಧಾನಸಭಾ ಚುನಾವಣೆಯು ಬೀಜ ಬಿತ್ತಿತ್ತು. ಜೆಡಿಯು ಮಾಜಿ ಅಧ್ಯಕ್ಷ ಆರ್.ಸಿ.ಪಿ.ಸಿಂಗ್ ಬಿಜೆಪಿ ಪರವಾಗಿ ಚಿತಾವಣೆ ಮಾಡುತ್ತಿರುಬಹುದು ಎಂಬ ಶಂಕೆಗಳಿಗೂ ಈ ಚುನಾವಣೆಯ ನಂತರದ ಬೆಳವಣಿಗೆಗಳು ಕಾರಣವಾಗಿದ್ದವು.
ಆರ್ಸಿಪಿ ಸಿಂಗ್ ನೇತೃತ್ವದಲ್ಲಿ ಜೆಡಿಯು ವಿಭಜನೆಗೆ ಸಂಚು ನಡೆಯುತ್ತಿದೆ ಎಂಬ ಅನುಮಾನಗಳು ಬಲಗೊಂಡ ನಂತರ ಬಿಜೆಪಿಯ ನಂಟು ಕಡಿದುಕೊಳ್ಳಲು ನಿತೀಶ್ ಕುಮಅರ್ ತೀರ್ಮಾನಿಸಿದರು. ಅನಂತರದ ಬೆಳವಣಿಗೆಯಲ್ಲಿ ಆರ್ಜೆಡಿ-ಕಾಂಗ್ರೆಸ್ ಬೆಂಬಲದೊಂದಿಗೆ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸಿದರು. ಬಿಹಾರ ಸರ್ಕಾರಕ್ಕೆ ಎಡಪಕ್ಷಗಳು ಹೊರಗಿನಿಂದ ಬೆಂಬಲ ಸೂಚಿಸಿವೆ.
‘ಎಲ್ಲ (ವಿರೋಧ) ಪಕ್ಷಗಳು ಒಗ್ಗೂಡಿ ಹೋರಾಡಿದರೆ ಬಿಜೆಪಿಯನ್ನು ಕೇವಲ 50 ಸ್ಥಾನಗಳಿಗೆ ಕಟ್ಟಿಹಾಕಬಹುದು. ಈ ಅಭಿಯಾನಕ್ಕೆ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತಿದ್ದೇನೆ’ ಎಂದು ನಿತೀಶ್ ಕುಮಾರ್ ಹೇಳಿದರು. ರಾಜಕೀಯ ಅಭಿಯಾನದ ಭಾಗವಾಗಿ ಮೂರು ದಿನಗಳ ಪ್ರವಾಸ ಹೊರಟಿರುವ ನಿತೀಶ್, ನಾಳೆ (ಸೆಪ್ಟೆಂಬರ್ 5) ದೆಹಲಿಗೆ ತೆರಳಲಿದ್ದಾರೆ. ಸುಮಾರು 30 ವರ್ಷ ಬಿಜೆಪಿಯ ಮಿತ್ರರಾಗಿದ್ದ ನಿತೀಶ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆಯ ಕಿವಿಮಾತನ್ನೂ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸಬಹುದು ಎಂಬುದು ಅವರ ಆತಂಕವಾಗಿದೆ.
‘ಬಿಹಾರದ ಸಾಮಾಜಿಕ ಮತ್ತು ಕೋಮು ಸೌಹಾರ್ದ ಕದಡಲು ಬಿಜೆಪಿ ಪ್ರಯತ್ನಿಸಬಹುದು. ಅವರ ಪ್ರಯತ್ನಗಳನ್ನು ನಾವು ವಿಫಲಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ನಾವು ಕಟ್ಟೆಚ್ಚರ ವಹಿಸಬೇಕು’ ಎಂದು ನಿತೀಶ್ ಜೆಡಿಯು ಕಾರ್ಯಕರ್ತರಿಗೆ ಕರೆ ನೀಡಿದರು.
Published On - 9:17 am, Sun, 4 September 22