ಇತ್ತೀಚೆಗೆ ಜಾರ್ಖಂಡ್ನಲ್ಲಿ ನಡೆದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸಲು ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ನಿರ್ಧರಿಸಿದ್ದಾರೆ. ಧನ್ಬಾಗ್ ಜಿಲ್ಲಾ ಮತ್ತು ಸೆಶನ್ಸ್ ಕೋರ್ಟ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರು ಮುಂಜಾನೆ ಜಾಗಿಂಗ್ ಮಾಡುತ್ತಿದ್ದಾಗ, ಟೆಂಪೋವೊಂದು ಅವರಿಗೆ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದು ಹೋಗಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದಾದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಕೇಸ್ನ್ನು ಸಿಬಿಐಗೆ ವಹಿಸಲು ಸಿಎಂ ನಿರ್ಧರಿಸಿದ್ದಾರೆ.
49 ವರ್ಷದ ಈ ನ್ಯಾಯಾಧೀಶ ಇತ್ತೀಚೆಗೆ ಹೈಪ್ರೊಫೈಲ್ ಪ್ರಕರಣದ ವಿಚಾರಣೆಯೊಂದನ್ನು ನಡೆಸಿ, ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಹತ್ಯೆಗೀಡಾಗಿದ್ದಾರೆ. ಮೊದಲು ಸಹಜ ಅಪಘಾತ ಎಂದೇ ಹೇಳಲಾಗಿತ್ತು. ಆದರೆ ಸಿಸಿಟಿವಿ ದೃಶ್ಯ ನೋಡುತ್ತಿದ್ದಂತೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ಮಧ್ಯೆ ಜಾರ್ಖಂಡ ಸರ್ಕಾರ, ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT)ವನ್ನು ರಚಿಸಿತ್ತು.
ಶುಕ್ರವಾರ ಮುಖ್ಯಮಂತ್ರಿ ಸೊರೆನ್ ಅವರು ನ್ಯಾಯಾಧೀಶರ ಕುಟುಂಬವನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದರು. ಹಾಗೇ, ಜಡ್ಜ್ ಸಾವಿನ ಹಿಂದಿನ ಕಾರಣವನ್ನು ಕಂಡು ಹಿಡಿದು ಶೀಘ್ರವೇ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಘಟನೆಯ ಬಗ್ಗೆ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಗಂಭೀರವಾಗಿ ಗಮನಹರಿಸಿದೆ. ನ್ಯಾಯಾಧೀಶರ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೇ, ಈ ಕೇಸ್ನ ತನಿಖೆ ಆದಷ್ಟು ಬೇಗ ಮುಗಿಸಿ, ತಪ್ಪಿತಸ್ಥರನ್ನು ಕಂಡುಹಿಡಿಯುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿ ಎಂದು ಜಾರ್ಖಂಡ ಹೈಕೋರ್ಟ್ಗೆ ಸೂಚನೆಯನ್ನೂ ನೀಡಿದೆ. ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನೂ ನಡೆಸಿದ್ದಾರೆ.
ಇದನ್ನೂ ಓದಿ: Viral Video: ಜಾರು ಬಂಡಿಯಲ್ಲಿ ಪಾಂಡಾಗಳ ಭರ್ಜರಿ ತುಂಟಾಟ; ಇದು ನಿಮ್ಮ ಬಾಲ್ಯವನ್ನು ನೆನಪಿಸೀತು!
Published On - 9:59 am, Sun, 1 August 21