ರಾಂಚಿ ಜುಲೈ 03: ಜಾರ್ಖಂಡ್ ಮುಕ್ತಿ ಮೋರ್ಚಾ (JMM), ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟ ಹೇಮಂತ್ ಸೊರೇನ್ (Hemant Soren) ಅವರನ್ನು ನಾಯಕನಾಗಿ ಆಯ್ಕೆ ಮಾಡಿದ ನಂತರ ಅವರು ಮತ್ತೆ ಜಾರ್ಖಂಡ್ (Jharkhand)ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುವ ಮೊದಲು ಜನವರಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಕಳೆದ ವಾರ ಅವರಿಗೆ ಜಾಮೀನು ನೀಡಲಾಗಿತ್ತು. ಜೆಎಂಎಂ ನಾಯಕ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಕಳೆದ ವಾರ ಅವರಿಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್, “ಆಪಾದಿತ ಅಪರಾಧದಲ್ಲಿ ಅವರು ತಪ್ಪಿತಸ್ಥನಲ್ಲ” ಎಂದು ನಂಬಲು ಕಾರಣವಿದೆ ಎಂದು ಹೇಳಿದೆ.
ಆದಾಗ್ಯೂ, ಜಾರ್ಖಂಡ್ ರಾಜಕೀಯ ವಲಯದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೇಮಂತ್ ಸೊರೇನ್ ಅವರು ಕೆಳಗಿಳಿದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಚಂಪೈ ಸೊರೇನ್ ಅವರನ್ನು ಬದಲಾಯಿಸುವ ನಿರ್ಧಾರದಿಂದ ಸಂತೋಷವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಚಂಪೈ ಸೊರೇನ್ ಅವರನ್ನು ಜೆಎಂಎಂನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದು ಎಂದು ತಿಳಿದುಬಂದಿದೆ.
ಜೆಎಂಎಂನ ಶಾಸಕಾಂಗ ಪಕ್ಷದ ಸಭೆಯಲ್ಲಿ, ಚಂಪೈ ಸೊರೇನ್ ಅವರು ತಾನು ಅವಮಾನಿತನಾಗಿದ್ದೇನೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ಪಕ್ಷವು ಹೇಮಂತ್ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಹೆಸರಿಸಿತು.
ಚಂಪೈ ಸೊರೇನ್ ಇಂದು (ಬುಧವಾರ) ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬಹುದು. ಆಮೇಲೆ ಹೇಮಂತ್ ಸೊರೇನ್ ಅಧಿಕಾರ ವಹಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಇಂದು ಚಂಪೈ ಸೊರೇನ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೇಮಂತ್ ಸೊರೇನ್ ವಾಪಸಾತಿ ಕುರಿತು ಆಡಳಿತಾರೂಢ ಸಮ್ಮಿಶ್ರ ನಾಯಕರು ಒಮ್ಮತಕ್ಕೆ ಬಂದಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ರಾಜ್ಯಾಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಹೇಮಂತ್ ಸೋರೆನ್ ಅವರ ಪತ್ನಿ ಮತ್ತು ಶಾಸಕಿ ಕಲ್ಪನಾ ಸೊರೆನ್ ಉಪಸ್ಥಿತರಿದ್ದರು.
ಇಂದು ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ನಂತರ ಬದಲಾವಣೆಯ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ. ಜಾರ್ಖಂಡ್‌ನಲ್ಲಿ ಚುನಾವಣೆಗೆ ತಿಂಗಳುಗಳು ಬಾಕಿಯಿದ್ದು, ಹೇಮಂತ್ ಸೊರೇನ್ ಅವರನ್ನು ತನ್ನ ಮುಖವಾಗಿಟ್ಟುಕೊಂಡು ಚುನಾವಣೆ ಎದುರಿಸಲು ಜೆಎಂಎಂ ನೋಡುತ್ತಿದೆ. ಆದರೆ ಚಂಪೈ ಸೊರೇನ್ ಅವರನ್ನು ಬದಲಿಸುವ ನಿರ್ಧಾರವು ಪ್ರತಿಪಕ್ಷ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮೋದಿಗೆ ಸುಳ್ಳು ಹೇಳುವ ಅಭ್ಯಾಸ; ರಾಜ್ಯಸಭೆಯಿಂದ ಹೊರನಡೆದಿದ್ದಕ್ಕೆ ಕಾರಣ ನೀಡಿದ ಮಲ್ಲಿಕಾರ್ಜುನ ಖರ್ಗೆ
ಜಾರ್ಖಂಡ್‌ನ ಗೊಡ್ಡಾದ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ “ಜಾರ್ಖಂಡ್‌ನಲ್ಲಿ ಚಂಪೈ ಸೊರೇನ್ ಯುಗ ಮುಗಿದಿದೆ” ಎಂದು ಹೇಳಿದ್ದಾರೆ. ಜೆಎಂಎಂ ಅನ್ನು ಗುರಿಯಾಗಿಸಿಕೊಂಡ ಅವರು “ಕುಟುಂಬ ಆಧಾರಿತ ಪಕ್ಷದಲ್ಲಿ, ಕುಟುಂಬದ ಹೊರಗಿನ ಜನರಿಗೆ ರಾಜಕೀಯ ಭವಿಷ್ಯವಿಲ್ಲ. ಮುಖ್ಯಮಂತ್ರಿ ಭಗವಾನ್ ಬಿರ್ಸಾ ಮುಂಡಾ ಅವರಿಂದ ಸ್ಫೂರ್ತಿ ಪಡೆದು ಭ್ರಷ್ಟ ಹೇಮಂತ್ ಸೊರೇನ್ ವಿರುದ್ಧ ನಿಲ್ಲಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದರು.
67 ವರ್ಷದ ಚಂಪೈ ಸೊರೇನ್ ಅವರು ಜೆಎಂಎಂನ ಹಿರಿಯ ನಾಯಕರಾಗಿದ್ದು ಪಕ್ಷದ ಸಂಸ್ಥಾಪಕ ಮತ್ತು ಹೇಮಂತ್ ಸೊರೇನ್ ಅವರ ತಂದೆ ಶಿಬು ಸೊರೆನ್ ಅವರೊಂದಿಗೆ ದಶಕಗಳಿಂದ ಇದ್ದಾರೆ. ಈ ಹಿಂದೆ ಅವರು ಹೇಮಂತ್ ಸೊರೇನ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Wed, 3 July 24