ಹಾಥರಸ್ ಕಾಲ್ತುಳಿತ: ಸಾವಿನ ಸಂಖ್ಯೆ 121ಕ್ಕೆ ಏರಿಕೆ; ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ
ಬುಧವಾರ ಉತ್ತರ ಪ್ರದೇಶದ ಹಾಥರಸ್ಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್, ಈ ಕಾಲ್ತುಳಿತವನ್ನು ನಾವು ನಿರಾಕರಿಸಲಾಗುವುದಿಲ್ಲ ... (ಆದರೆ), ಅಪಘಾತವಲ್ಲದಿದ್ದರೆ, ಅದು ಯಾರ ಪಿತೂರಿ? ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುತ್ತೇವೆ. 'ಪ್ರಾರ್ಥನಾ ಸಭೆ' ಮುಗಿದ ನಂತರ ಬೃಹತ್ ಜನಸಮೂಹವು ದೇವಮಾನವನ ಪಾದಗಳನ್ನು ಸ್ಪರ್ಶಿಸಲು ಮುಗಿಬಿದ್ದಿದ್ದು, ಸ್ಥಳದಿಂದ ಹೊರಬರಲು ಪ್ರಯತ್ನಿಸುತ್ತಿರುವವರ ನಡುವೆ ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಹೇಳಿದ್ದಾರೆ.
ಹಾಥರಸ್ ಜುಲೈ 03: ಉತ್ತರ ಪ್ರದೇಶದ (Uttar Pradesh) ಹಾಥರಸ್ನಲ್ಲಿ (Hathras Stampede) ಮಂಗಳವಾರ ಧಾರ್ಮಿಕ ಸಭೆಯೊಂದರ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದವರ ಸಂಖ್ಯೆ 121ಕ್ಕೆ ಏರಿಕೆ ಆಗಿದೆ. ಧಾರ್ಮಿಕ ಸಭೆಯಲ್ಲಿ ಜನರು ಕಿಕ್ಕಿರಿದಿದ್ದೇ ಈ ಅವ್ಯವಸ್ಥೆಗೆ ಕಾರಣ ಎಂದು ಹೇಳಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿಗಳು ಘಟನೆಯ ಮೂಲ ಕಾರಣಗಳನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಶಿಶ್ ಕುಮಾರ್ ಅವರು ಜಿಲ್ಲಾ ಆಡಳಿತವು ಈ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ಗಾಯಗೊಂಡವರನ್ನು ಚೇತರಿಸಿಕೊಳ್ಳಲು ಮತ್ತು ಸಹಾಯ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ಯೋಗಿ ವಾಗ್ದಾಳಿ
ಹಾಥರಸ್ ಕಾಲ್ತುಳಿತ ಘಟನೆಯ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು “ಕೆಲವರು ಇಂತಹ ದುಃಖ ಮತ್ತು ನೋವಿನ ಘಟನೆಗಳನ್ನು ರಾಜಕೀಯಗೊಳಿಸುತ್ತಾರೆ. ಈ ಜನರು ‘ಚೋರಿ ಭೀ ಔರ್ ಸೀನಾಜೋರಿ ಭಿ’ (ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳದೆ ಸಮರ್ಥಿಸುವ ಧೈರ್ಯ)ಸ್ವಭಾವವನ್ನು ಹೊಂದಿದ್ದಾರೆ. ಧಾರ್ಮಿಕ ಸಭೆ ನಡೆಸಿದ ಬೋಧಕರ ಫೋಟೋಗಳು ಯಾರೊಂದಿಗೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಯಾರೊಂದಿಗೆ ರಾಜಕೀಯ ಸಂಪರ್ಕವನ್ನು ಹೊಂದಿದ್ದಾರೆಂದು ನೀವು ನೋಡಿರಬೇಕು, ಕಾಲ್ತುಳಿತ ಹೇಗೆ ಸಂಭವಿಸಿತು ಮತ್ತು ಅದರ ಹಿಂದೆ ಯಾರು ಇದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಅಮಾಯಕ ಜನರ ಪ್ರಾಣದ ಜತೆ ಚೆಲ್ಲಾಟವಾಡಿದವರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸಿಎಂ ಭೇಟಿ
ದೇವಮಾನವ ಭೋಲೆ ಬಾಬಾ ನಡೆಸಿದ ‘ಪ್ರಾರ್ಥನಾ ಸಭೆ’ಯ ಸಂಘಟಕರು, ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಕಾಲ್ತುಳಿತ ಸಂಭವಿಸಿದ ಹಾಥರಸ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬುಧವಾರ ಭೇಟಿ ನೀಡಿದ್ದಾರೆ. “ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಹೇಳಿದ ಯೋಗಿ ಇದು ಮತ್ತೆ ಸಂಭವಿಸುವುದಿಲ್ಲ SOP ಗಳು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ಗಳು) ಇರುತ್ತದೆ. ನಾವು ಅದನ್ನು ಖಚಿತಪಡಿಸಿಕೊಳ್ಳುತ್ತೇವೆ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ನ್ಯಾಯಾಂಗ ಸಮಿತಿಯು ಸಂಭಾವ್ಯ ಲೋಪಗಳ ಬಗ್ಗೆ ತನಿಖೆ ನಡೆಸಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ಕಾಲ್ತುಳಿತವನ್ನು ನಾವು ನಿರಾಕರಿಸಲಾಗುವುದಿಲ್ಲ … (ಆದರೆ), ಅಪಘಾತವಲ್ಲದಿದ್ದರೆ, ಅದು ಯಾರ ಪಿತೂರಿ? ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುತ್ತೇವೆ. ‘ಪ್ರಾರ್ಥನಾ ಸಭೆ’ ಮುಗಿದ ನಂತರ ಬೃಹತ್ ಜನಸಮೂಹವು ದೇವಮಾನವನ ಪಾದಗಳನ್ನು ಸ್ಪರ್ಶಿಸಲು ಮುಗಿಬಿದ್ದಿದ್ದು, ಸ್ಥಳದಿಂದ ಹೊರಬರಲು ಪ್ರಯತ್ನಿಸುತ್ತಿರುವವರ ನಡುವೆ ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
“ನಾನು ಕೆಲವು ಸಾಕ್ಷಿಗಳೊಂದಿಗೆ ಮಾತನಾಡಿದ್ದೇನೆ. ‘ಸತ್ಸಂಗ’ದ ಸಮಯದಲ್ಲಿ, ಮಹಿಳೆಯರು ದೇವಮಾನವನ ಪಾದಗಳನ್ನು ಸ್ಪರ್ಶಿಸಲು ಬಯಸಿದಾಗ, ಜನರು ಮುಗಿಬಿದ್ದಿದ್ದಾರೆ. ಆಗ ಭೋಲೆ ಬಾಲಾ ಅವರ ಖಾಸಗಿ ಭದ್ರತಾ ಸಿಬ್ಬಂದಿ ಹಿಂದಕ್ಕೆ ತಳ್ಳಿದ್ದಾರೆ. ಆಮೇಲೆ ಅವರು ಸಮಸ್ಯೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವಾಗ, ಭದ್ರತಾ ತಂಡವು ಅಲ್ಲಿಂದ ಓಡಿ ಹೋಯಿತು ಎಂದಿದ್ದಾರೆ.
ಇದನ್ನೂ ಓದಿ: ಸೋಲು ಖಚಿತವಾದಾಗಲೆಲ್ಲ ಕಾಂಗ್ರೆಸ್ ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ; ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಟೀಕೆ
ಮಂಗಳವಾರ ಮಧ್ಯಾಹ್ನ ಹಾಥರಸ್ನಲ್ಲಿ ನಡೆದ ಸತ್ಸಂಗದಲ್ಲಿ ಅಂದಾಜು 2.5 ಲಕ್ಷಕ್ಕೂ ಹೆಚ್ಚು ಸೇರಿದ್ದರು. ಸ್ವತಃ ಭೋಲೆ ಬಾಬಾ ಎಂದು ಕರೆದುಕೊಳ್ಳುವ ಸ್ವಯಂ ಘೋಷಿತ ಧಾರ್ಮಿಕ ಮುಖಂಡರಾದ ಸೂರಜ್ ಪಾಲ್ ಸಿಂಗ್ ಇಲ್ಲಿ ಸತ್ಸಂಗ ಆಯೋಜಿಸಿದ್ದರು.
ಮೃತರಲ್ಲಿ ಆರು ಮಂದಿ ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶದವರಾಗಿದ್ದರೆ, ಉಳಿದವರು ಯುಪಿಯ ವಿವಿಧ ಭಾಗಗಳಿಂದ ಬಂದವರು. ಪ್ರತಿಪಕ್ಷಗಳಿಂದ ಹೆಚ್ಚುತ್ತಿರುವ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ಗುರುತಿಸಲು ಮತ್ತು ಬಂಧಿಸಲು ತಮ್ಮ ಸರ್ಕಾರ ಹರಸಾಹಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. 30 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ಎಫ್‌ಐಆರ್‌ನಲ್ಲಿ ದೇವಮಾನವನ ಉಲ್ಲೇಖವಿಲ್ಲ
ಸೂರಜ್ ಪಾಲ್ ಸಿಂಗ್ ಎಂಬ ಹೆಸರಿನ ಭೋಲೆ ಬಾಬಾ ಮತ್ತು ಕಾರ್ಯಕ್ರಮ ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ದೇವಮಾನವನ ಉಲ್ಲೇಖವಿಲ್ಲ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಮತ್ತು ಭೋಲೆ ಬಾಬಾನನ್ನು ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ “ವಾಸ್ತವಾಂಶಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Wed, 3 July 24