JNU: ವಿದ್ಯಾರ್ಥಿ ಒಕ್ಕೂಟದ ಇಡೀ ನಾಯಕತ್ವವನ್ನು ಅಮಾನತುಗೊಳಿಸಿದ ಜೆಎನ್​ಯು ಆಡಳಿತ

JNU rusticates entire elected students union leadership: ಜೆಎನ್​ಯು ಅಂಗಳದಲ್ಲಿ ದಾಂದಲೆ ನಡೆಸಿದ ಕಾರಣಕ್ಕೆ ವಿದ್ಯಾರ್ಥಿ ಒಕ್ಕೂಟದ ಚುನಾಯಿತ ನಾಲ್ವರು ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಸೇರಿ ಐವರನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಒಕ್ಕೂಟದ ಇಡೀ ನಾಯಕತ್ವವೇ ಅಮಾನತುಗೊಂಡಂತಾಗಿದೆ. ಕ್ಯಾಂಪಸ್​ನಲ್ಲಿರುವ ಲೈಬ್ರರಿಯ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಿದ್ದನ್ನು ವಿರೋಧಿಸಿ ಪ್ರತಿಭಟಿಸುವ ವೇಳೆ ದಾಂದಲೆ ನಡೆಸಲಾಗಿತ್ತು.

JNU: ವಿದ್ಯಾರ್ಥಿ ಒಕ್ಕೂಟದ ಇಡೀ ನಾಯಕತ್ವವನ್ನು ಅಮಾನತುಗೊಳಿಸಿದ ಜೆಎನ್​ಯು ಆಡಳಿತ
ಜೆಎನ್​ಯು ವಿದ್ಯಾರ್ಥಿಗಳು

Updated on: Feb 08, 2026 | 7:46 PM

ನವದೆಹಲಿ, ಫೆಬ್ರುವರಿ 8: ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ಸೆಂಟ್ರಲ್ ಲೈಬ್ರರಿ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟಿಸುವಾಗ ಸಿಸಿಟಿವಿ ಮತ್ತಿತರ ಆಸ್ತಿಗಳಿಗೆ ಹಾನಿ ಮಾಡಿದ ಕಾರಣಕ್ಕೆ ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ (JNU students’ Union) ಎಲ್ಲಾ ಚುನಾಯಿತ ನಾಯಕತ್ವವನ್ನು ಅಮಾನತುಗೊಳಿಸಲಾಗಿದೆ. ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್ ಯಾದವ್, ಜಂಟಿ ಕಾರ್ಯದರ್ಶಿ ದಾನಿಶ್ ಆಲಿ ಅವರಲ್ಲದೇ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್, ಸೇರಿ ಒಟ್ಟು ಐವರನ್ನು ಎರಡು ಸೆಮಿಸ್ಟರ್​ಗಳವರೆಗೆ ಅಮಾನತುಗೊಳಿಸಲಾಗಿದೆ.

ಈ ಐವರು ವಿದ್ಯಾರ್ಥಿ ಮುಖಂಡರಿಗೆ ಈ ವರ್ಷದ (2026) ವಿಂಟರ್ ಮತ್ತು ಮಾನ್ಸೂನ್ ಸೆಮಿಸ್ಟರ್​ಗಳಿಗೆ ಕ್ಯಾಂಪಸ್ ಪ್ರವೇಶದಿಂದ ನಿರ್ಬಂಧಿಸಲಾಗಿದೆ. ಜೊತೆಗೆ ಎಲ್ಲರಿಗೂ 20,000 ರೂ ದಂಡ ಹಾಕಲಾಗಿದೆ. ಕಳೆದ ವಾರ (ಫೆ. 2) ಜವಾಹರಲಾಲ್ ಯೂನಿವರ್ಸಿಟಿ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡು ನೋಟೀಸ್ ಕೊಟ್ಟಿದೆ.

ಜೆಎನ್​ಯು ಕ್ಯಾಂಪಸ್​ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸೆಂಟ್​ರಲ್ ಲೈಬ್ರರಿಯ ಪ್ರವೇಶದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಿರುವುದನ್ನು ವಿರೋಧಿಸಿ ಹಲವು ವಿದ್ಯಾರ್ಥಿಗಳು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗಲಾಟೆಯಾಗಿ ಬಯೋಮೆಟ್ರಿಕ್ ಸಿಸ್ಟಂ ಇದ್ದ ಗೇಟ್​​ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗೆ ಹಾನಿ ಮಾಡಿದ್ದರು. ಇದರಿಂದ ಜೆಎನ್​ಯು ಆಡಳಿತಕ್ಕೆ ಅಂದಾಜು 20 ಲಕ್ಷ ರೂ ನಷ್ಟವಾಗಿತ್ತು ಎನ್ನಲಾಗಿದೆ. 2025ರ ನವೆಂಬರ್ 21ರಂದು ತನಿಖೆ ನಡೆಸಲಾಯಿತು. ಇದೀಗ ಯೂನಿವರ್ಸಿಟಿಯ ಆಡಳಿತವು ವಿದ್ಯಾರ್ಥಿ ಸಂಘದ ನಾಯಕತ್ವದ ಮೇಲೆ ಶಿಸ್ತಿನ ಕ್ರಮ ಜರುಗಿಸಿದೆ.

ಇದನ್ನೂ ಓದಿ: ಶತ್ರು ಉಪಗ್ರಹಗಳ ಮೇಲೆ ಬೇಹುಗಾರಿಕೆ ಮಾಡಬಲ್ಲ ಸೆಟಿಲೈಟ್​ಗಳು ಭಾರತದಿಂದ

ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ನಿರ್ಧಾರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದು ವಿದ್ಯಾರ್ಥಿಗಳ ಧ್ವನಿ ಅಡಗಿಸುವ ಕೆಲಸ ಎಂದು ಎಐಎಸ್​ಎ ಮುಂತಾದ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಕಾಂಗ್ರೆಸ್, ಸಿಪಿಐ ಎಂಎಲ್, ಭಾರತ್ ಆದಿವಾಸಿ ಪಾರ್ಟಿ, ಆರ್​ಜೆಡಿ ಪಕ್ಷದ ಕೆಲ ಸಂಸದರು, ಈ ಐವರು ವಿದ್ಯಾರ್ಥಿಗಳ ವಿರುದ್ಧದ ಅಮಾನತು ಕ್ರಮವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ