Joshimath Sinking: ಜೋಶಿಮಠ ಅನಾಹುತದ ಬಗ್ಗೆ ಐಐಟಿ ರೋಪರ್ ಸಂಶೋಧಕರಿಂದ 2021ರಲ್ಲೇ ಸಿಕ್ಕಿತ್ತು ಸುಳಿವು

| Updated By: ಸುಷ್ಮಾ ಚಕ್ರೆ

Updated on: Jan 10, 2023 | 11:55 AM

ಜೋಶಿಮಠ ಈಗ ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಹಿಮಾಲಯದ ವಿಪತ್ತುಗಳ ಕುರಿತು ಇಂಟರ್-ಐಐಟಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸುವುದು ಬಹಳ ಅಗತ್ಯವಾಗಿದೆ ಎಂದು ಡಾ. ತಿವಾರಿ ತಮ್ಮ ದೀರ್ಘಕಾಲದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

Joshimath Sinking: ಜೋಶಿಮಠ ಅನಾಹುತದ ಬಗ್ಗೆ ಐಐಟಿ ರೋಪರ್ ಸಂಶೋಧಕರಿಂದ 2021ರಲ್ಲೇ ಸಿಕ್ಕಿತ್ತು ಸುಳಿವು
ಜೋಶಿಮಠದ ಮನೆಗಳಲ್ಲಿ ಬಿರುಕು (ಸಂಗ್ರಹ ಚಿತ್ರ)
Image Credit source: Twitter
Follow us on

ನವದೆಹಲಿ: ಜೋಶಿಮಠದಲ್ಲಿ ಭೂಕುಸಿತಗಳು ಇನ್ನೂ ಮುಂದುವರೆದಿದೆ. ಪಂಜಾಬ್‌ನ ಐಐಟಿ ರೋಪರ್​ನ ಸಂಶೋಧಕರು 2021ರಲ್ಲಿಯೇ ಜೋಶಿಮಠದಲ್ಲಿ (Joshimath) 2 ವರ್ಷಗಳ ಅವಧಿಯಲ್ಲಿ ದೊಡ್ಡ ಪ್ರಮಾಣದ ಮೇಲ್ಮೈ ಸ್ಥಳಾಂತರವನ್ನು ಊಹಿಸಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ರೋಪರ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರೀತ್ ಕಮಲ್ ತಿವಾರಿ ನೇತೃತ್ವದ ಸಂಶೋಧಕರ ತಂಡವು 2021ರ ಮಾರ್ಚ್ ತಿಂಗಳ ಆರಂಭದಲ್ಲಿ ಜೋಶಿಮಠದ ಪ್ರವಾಹದ ಸನ್ನಿವೇಶಕ್ಕಾಗಿ 2021ರ ಗ್ಲೇಶಿಯಲ್ ಡಿಸ್ಪ್ಲೇಸ್‌ಮೆಂಟ್ ಮ್ಯಾಪಿಂಗ್ ಅನ್ನು ನಡೆಸಿತ್ತು.

ಈ ಅಧ್ಯಯನದ ಸಮಯದಲ್ಲಿ, ಡಾ. ರೀತ್ ಕಮಲ್ ತಿವಾರಿ ಮತ್ತು ಅವರ ಆಗಿನ ಪಿಎಚ್‌ಡಿ ವಿದ್ಯಾರ್ಥಿ ಡಾ. ಅಕ್ಷರ ತ್ರಿಪಾಠಿ ಈಗ ಐಐಟಿ ಪಾಟ್ನಾದಲ್ಲಿ ಸಿವಿಲ್ ಮತ್ತು ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಜೋಶಿಮಠದಲ್ಲಿ ಇನ್ನೆರಡು ವರ್ಷಗಳ ಅವಧಿಯಲ್ಲಿ ದೊಡ್ಡ ಪ್ರಮಾಣದ ಮೇಲ್ಮೈ ಸ್ಥಳಾಂತರ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಅದರಂತೆ ಅದಾಗಿ ಎರಡೇ ವರ್ಷದಲ್ಲಿ ಇದೀಗ ಜೋಶಿಮಠದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

2021ರ ಏಪ್ರಿಲ್ 16ರಂದು ಲಕ್ನೋದಲ್ಲಿ ನಡೆದ ಸಮ್ಮೇಳನದಲ್ಲಿ ಈ ಅಧ್ಯಯನವನ್ನು ಪ್ರಸ್ತುತಪಡಿಸಲಾಯಿತು. ಜೋಶಿಮಠ ನಗರದ ಕಟ್ಟಡಗಳಿಗೆ 7.5 ಸೆಂ.ಮೀಯಿಂದ 10 ಸೆಂ.ಮೀ ಸ್ಥಳಾಂತರದ ನಡುವೆ ಕಟ್ಟಡಗಳಲ್ಲಿ ದೊಡ್ಡ ಪ್ರಮಾಣದ ಬಿರುಕುಗಳನ್ನು ಉಂಟುಮಾಡುತ್ತದೆ. ಇದೀಗ ಇದೇ ಭಯ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Joshimath Sinking: ಉತ್ತರಾಖಂಡದ ಜೋಶಿಮಠ ಭೂಕುಸಿತಕ್ಕೆ ಕಾರಣವೇನು? ಇಲ್ಲಿದೆ ವಿವರ

ಜೋಶಿಮಠ ಪಟ್ಟಣವು ಈಗ ಎದುರಿಸುತ್ತಿರುವ ಸಮಸ್ಯೆಗಳಿಂದ ಹಿಮಾಲಯದ ವಿಪತ್ತುಗಳ ಕುರಿತು ಇಂಟರ್-ಐಐಟಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸುವುದು ಬಹಳ ಅಗತ್ಯವಾಗಿದೆ ಎಂದು ಡಾ. ತಿವಾರಿ ತಮ್ಮ ದೀರ್ಘಕಾಲದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಜೋಶಿಮಠವನ್ನು ಭೂಕುಸಿತ ಮತ್ತು ಕುಸಿತ ಪೀಡಿತ ವಲಯವೆಂದು ಘೋಷಿಸಿದ ನಂತರ ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದೆ.

ಸೋಮವಾರ ಮತ್ತೆ 68 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಮೂಲಕ ಹಾನಿಗೊಳಗಾಗಿರುವ ಮನೆಗಳ ಸಂಖ್ಯೆ 678ಕ್ಕೆ ಏರಿಕೆಯಾಗಿದೆ. 27 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಚಮೋಲಿ ಜಿಲ್ಲಾಡಳಿತ ತಿಳಿಸಿದೆ. ಇದುವರೆಗೆ 82 ಕುಟುಂಬಗಳನ್ನು ಜಿಲ್ಲಾಡಳಿತ ಗುರುತಿಸಿದ 16 ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. 2.5 ಚದರ ಕಿ.ಮೀ ಪ್ರದೇಶದಲ್ಲಿ ಹರಡಿರುವ ಜೋಶಿಮಠವು ಜಿಲ್ಲಾಡಳಿತದ ಪ್ರಕಾರ ಸುಮಾರು 3,900 ವಸತಿ ಮತ್ತು 400 ವಾಣಿಜ್ಯ ಕಟ್ಟಡಗಳನ್ನು ಹೊಂದಿದೆ.

ಜೋಶಿಮಠದಲ್ಲಿರುವ ಸರ್ಕಾರಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲಾಡಳಿತ ತೆರವು ಕಾರ್ಯ ಆರಂಭಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ ಜೋಶಿಮಠ ನಗರದಲ್ಲಿ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನ 1 ತಂಡ ಮತ್ತು ಎಸ್‌ಡಿಆರ್‌ಎಫ್‌ನ 4 ತಂಡಗಳನ್ನು ನಿಯೋಜಿಸಿದೆ.

ಇದನ್ನೂ ಓದಿ: Joshimath Sinking: ಮುಳುಗುತ್ತಿದೆ ಜೋಶಿಮಠ; ಪ್ರತಿ ಗಂಟೆಗೂ ಹೆಚ್ಚುತ್ತಿದೆ ಆತಂಕ, ಎನ್​ಡಿಆರ್​ಎಫ್ ನಿಯೋಜನೆ

ಜನವರಿ 2ರಿಂದ 3ರ ಮಧ್ಯರಾತ್ರಿಯಲ್ಲಿ ಈ ಪ್ರದೇಶದಲ್ಲಿ ಭೂಗತ ನೀರಿನ ಮೂಲಗಳು ಒಡೆದಿದ್ದರಿಂದ ಜೋಶಿಮಠದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಈ ಭೂಗತ ಜಲಮೂಲದಿಂದ ನಿಮಿಷಕ್ಕೆ ನಾಲ್ಕೈದು ನೂರು ಲೀಟರ್ ನೀರು ಹೊರ ಬರುತ್ತಿದೆ, ಈ ಮಂಜುಗಡ್ಡೆಯ ನೀರಿನಿಂದಾಗಿ ಭೂಗರ್ಭದ ಬಂಡೆ ಸವೆತವಾಗುತ್ತಿದೆ. ಇಲ್ಲಿಯವರೆಗೆ ಇದರ ಗಾತ್ರ ಎಷ್ಟಿದೆ ಎಂಬುದು ಗೊತ್ತಿಲ್ಲ. ಭೂಗತ ನೀರಿನ ಮೂಲ ಮತ್ತು ಅದರಲ್ಲಿ ಎಷ್ಟು ಮಂಜುಗಡ್ಡೆಯ ನೀರು ಇದೆ ಮತ್ತು ಅದು ಏಕೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ.

ಜನವರಿ ಮೊದಲ ವಾರದಲ್ಲಿ ಭೂಗತ ಜಲಮೂಲ ಒಡೆದಿದ್ದರಿಂದ ಜೋಶಿಮಠದ ಭೂಮಿ ಹಠಾತ್ ಕುಸಿತಕ್ಕೆ ಕಾರಣ ಎಂದು ಭೂವಿಜ್ಞಾನಿಗಳು ತಮ್ಮ ಪ್ರಾಥಮಿಕ ತನಿಖೆಯ ಬಳಿಕ ತಿಳಿಸಿದ್ದಾರೆ. ಜನವರಿ 4ರಂದು ಉತ್ತರಾಖಂಡದ ಜೋಶಿಮಠದಲ್ಲಿ ವಾಸಿಸುತ್ತಿದ್ದ ಸುಮಾರು 34 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಇದೀಗ ಕೇವಲ 3 ದಿನಗಳ ಅಂತರದಲ್ಲಿ ಈ ರೀತಿ ಬಿರುಕು ಬಿಟ್ಟ ಮನೆಗಳ ಸಂಖ್ಯೆ 600ಕ್ಕೂ ಹೆಚ್ಚಾಗಿದೆ.

ಜೋಶಿಮಠದಲ್ಲಿ ಸುಮಾರು 570ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಉಂಟಾಗಿರುವ ಕುರಿತು ವರದಿ ದಾಖಲಾಗಿವೆ. ಆದರೆ, ಸ್ಥಳೀಯರು ನೀಡುತ್ತಿರುವ ಮಾಹಿತಿಯಂತೆ ಈ ಸಂಖ್ಯೆ ಇನ್ನೂ 3 ಪಟ್ಟು ಹೆಚ್ಚಿದೆ ಎನ್ನಲಾಗಿದೆ. ಇಲ್ಲಿ ನಡೆಯುತ್ತಿರುವ ಹೈಡಲ್ ಪವರ್ ಪ್ರಾಜೆಕ್ಟ್ ಗಾಗಿ ದೊಡ್ಡ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದ್ದು, ಈ ಸುರಂಗದಲ್ಲಿ ನಡೆಯುತ್ತಿರುವ ಸ್ಫೋಟಗಳು ಇಡೀ ಜೋಶಿಮಠ ನಗರವನ್ನು ನಡುಗಿಸುತ್ತಿದೆ. ಇದರಿಂದ ಇಲ್ಲಿನ ಮನೆಗಳು, ಕಟ್ಟಡಗಳು, ಬಿರುಕು ಬಿಟ್ಟಿದ್ದು, ಯಾವುದೇ ಹಂತದಲ್ಲಿ ಕುಸಿಯುವ ಭೀತಿ ಉಂಟಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕೂಡಲೇ ಅಭಿವೃದ್ಧಿ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 am, Tue, 10 January 23