ನವದೆಹಲಿ: ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮಾಡಿದ ಪೋಸ್ಟ್‌ನಿಂದಾಗಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುವ ಕಂಗನಾ ಮಹಾತ್ಮ ಗಾಂಧೀಜಿಯವರ ಜಯಂತಿಯ ಬಗ್ಗೆ ಪ್ರಸ್ತಾಪಿಸಿರಲಿಲ್ಲ.
ಮಂಡಿ ಸಂಸದೆಯಾಗಿರುವ ಕಂಗನಾ ರಣಾವತ್ ಲೋಕಸಭೆ ಚುನಾವಣೆಯಲ್ಲಿ ಗೆದ್ದಾಗಿನಿಂದ ಅವರ ಹೇಳಿಕೆಗಳಿಗಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇತ್ತೀಚೆಗಷ್ಟೆ, ರೈತರ ಪ್ರತಿಭಟನೆಗಳ ಕುರಿತು ಅವರ ಹೇಳಿಕೆಗಳು ವಿರೋಧ ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.
“ದೇಶ್ ಕೆ ಪಿತಾ ನಹೀ, ದೇಶ್ ಕೆ ತೋ ಲಾಲ್ ಹೋತೇ ಹೈ. ಧನ್ಯೇ ಹೈ ಭಾರತ್ ಮಾ ಕೆ ಯೇ ಲಾಲ್ (ದೇಶಕ್ಕೆ ತಂದೆ ಇಲ್ಲ, ಅದಕ್ಕೆ ಮಕ್ಕಳಿದ್ದಾರೆ. ಭಾರತಮಾತೆಯ ಈ ಮಕ್ಕಳು ಧನ್ಯರು)” ಎಂದು ಕಂಗನಾ ರಣಾವತ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಇನ್ನೊಂದು ಪೋಸ್ಟ್ನಲ್ಲಿ ದೇಶದಲ್ಲಿ ಸ್ವಚ್ಛತೆ ಕಾಪಾಡುವ ಮಹಾತ್ಮ ಗಾಂಧಿಯವರ ಪರಂಪರೆಯನ್ನು ಮುನ್ನಡೆಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಮನೆ ಮಾರಿ 3 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ ರಣಾವತ್
ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಮಹಾತ್ಮಾ ಗಾಂಧಿಯೊಂದಿಗೆ ಹೋಲಿಸಿದ ಅವರ ಹೇಳಿಕೆಯು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅವರಿಂದ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಉಂಟುಮಾಡಿತು. ಕಂಗನಾ ಬಿಜೆಪಿಯ “ಹೊಸ ಗೋಡ್ಸೆ ಭಕ್ತೆ” ಎಂದು ಅವರು ಆರೋಪಿಸಿದ್ದರು.
ಬಿಜೆಪಿ ಸಂಸದೆ ಕಂಗನಾ ರಣಾವತ್ ಮಹಾತ್ಮಾ ಗಾಂಧಿಯವರ ಜನ್ಮದಿನದಂದು ವ್ಯಂಗ್ಯವಾಡಿದ್ದಾರೆ. ಗೋಡ್ಸೆ ಆರಾಧಕರು ಬಾಪು ಮತ್ತು ಶಾಸ್ತ್ರಿ ಅವರ ನಡುವೆ ವ್ಯತ್ಯಾಸವನ್ನು ತೋರಿಸುತ್ತಾರೆ. ಪಿಎಂ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹೊಸ ಗೋಡ್ಸೆ ಭಕ್ತಳನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರಪಿತ ಇದ್ದಾರೆ, ಪುತ್ರರಿದ್ದಾರೆ. ಹುತಾತ್ಮರಾದವರು ಎಲ್ಲರೂ ಗೌರವಕ್ಕೆ ಅರ್ಹರು ಎಂದು ಸುಪ್ರಿಯಾ ಹೇಳಿದ್ದರು.
ಕಂಗನಾ ಅವರನ್ನು ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡ ಟೀಕಿಸಿದ್ದಾರೆ. ಕಂಗನಾ ರಣಾವತ್ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ, ಇದು ಬಿಜೆಪಿಗೆ ತೊಂದರೆ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿಚಾರ: ಹೇಳಿಕೆ ಹಿಂಪಡೆದ ಕಂಗನಾ ರನೌತ್
“ಗಾಂಧೀಜಿಯವರ 155 ನೇ ಜನ್ಮದಿನದಂದು ಕಂಗನಾ ರಣಾವತ್ ಮಾಡಿದ ಕಾಮೆಂಟ್‌ಗಳನ್ನು ನಾನು ಖಂಡಿಸುತ್ತೇನೆ. ತನ್ನ ಸಣ್ಣ ರಾಜಕೀಯ ಜೀವನದಲ್ಲಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ” ಎಂದು ಹಿರಿಯ ಬಿಜೆಪಿ ನಾಯಕ ಮನೋರಂಜನ್ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ, 2021ರಲ್ಲಿ ರದ್ದುಗೊಂಡ ಮೂರು ಕೃಷಿ ಕಾನೂನುಗಳನ್ನು ಮರುಸ್ಥಾಪಿಸಲು ಪ್ರತಿಪಾದಿಸಿದ್ದಕ್ಕಾಗಿ ಕಂಗನಾ ರಣಾವತ್ ಆಕ್ರೋಶವನ್ನು ಎದುರಿಸಿದರು. ಜೂನ್‌ನಲ್ಲಿ ಬಿಜೆಪಿ ಸಂಸದರಾಗಿ ಆಯ್ಕೆಯಾದ ನಟಿ ಕಂಗನಾ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ನಡೆಯುತ್ತಿದೆ ಎಂದು ವಿವಾದಾತ್ಮಕವಾಗಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ