ಕೃಷಿ ಕಾಯ್ದೆ ವಿಚಾರ: ಹೇಳಿಕೆ ಹಿಂಪಡೆದ ಕಂಗನಾ ರನೌತ್

Kangana Ranaut: ಕಂಗನಾ ರನೌತ್ ಕೃಷಿ ಕಾಯ್ದೆಯನ್ನು ಮರಳಿ ತರಬೇಕೆಂದು ನೀಡಿದ್ದ ಹೇಳಿಕೆ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಬಹಿರಂಗ ಹೇಳಿಕೆ ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೆ ಇದೀಗ ಕಂಗನಾ ರನೌತ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಕೃಷಿ ಕಾಯ್ದೆ ವಿಚಾರ: ಹೇಳಿಕೆ ಹಿಂಪಡೆದ ಕಂಗನಾ ರನೌತ್
Follow us
|

Updated on: Sep 25, 2024 | 3:14 PM

ನಟಿ, ಸಂಸದೆ ಕಂಗನಾ ರನೌತ್, ಕೃಷಿ ಕಾಯ್ದೆಯನ್ನು ಜಾರಿ ಗೊಳಿಸುವ ಕುರಿತಾಗಿ ನೀಡಿದ್ದ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಕಂಗನಾ ರನೌತ್, ‘ನಾನೀಗ ಕೇವಲ ನಟಿಯಲ್ಲ, ಬಿಜೆಪಿ ಕಾರ್ಯಕರ್ತಳೂ ಹೌದು ಎಂಬುದನ್ನು ಮರೆಯಬಾರದಿತ್ತು, ನನ್ನ ಅಭಿಪ್ರಾಯದಿಂದ, ನನ್ನ ವಿಚಾರದಿಂದ ಯಾರಿಗಾದರೂ ನೋವಾಗಿದ್ದರೆ ಖೇದ ವ್ಯಕ್ತಪಡಿಸುತ್ತೇನೆ’ ಎಂದು ಕಂಗನಾ ರನೌತ್ ಹೇಳಿದ್ದರು.

ನಟಿ, ಸಂಸದೆ ಕಂಗನಾ ರನೌತ್ ಇತ್ತೀಚೆಗಷ್ಟೆ ಕೃಷಿ ಕಾಯ್ದೆಯ ಬಗ್ಗೆ ಮಾತನಾಡುತ್ತಾ, ಕೃಷಿ ಕಾಯ್ದೆಗಳನ್ನು ಮರಳಿ ತರಬೇಕು, ಈ ಬಾರಿ ಕೃಷಿಕರೇ ಪ್ರಧಾನ ಮಂತ್ರಿಗಳ ಮುಂದೆ ಕೃಷಿ ಕಾಯ್ದೆಯನ್ನು ಮರಳಿ ತರುವಂತೆ ಬೇಡಿಕೆ ಇಡಬೇಕು ಎಂದಿದ್ದರು. ಕಂಗನಾರ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಹರಿಯಾಣ ಚುನಾವಣೆ ಹತ್ತಿರದಲ್ಲೇ ಇದ್ದು, ಕಂಗನಾರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದಲ್ಲದೆ, ಹರಿಯಾಣ ಚುನಾವಣೆಯ ವಿಷಯವಾಗಿಯೂ ಬಳಸಿತ್ತು.

ಕೂಡಲೇ ಎಚ್ಚೆತ್ತುಕೊಂಡ ಬಿಜೆಪಿ ಕಂಗನಾರ ಹೇಳಿಕೆಗೂ ಬಿಜೆಪಿ ಪಕ್ಷಕ್ಕೂ ಸಂಬಂಧವಿಲ್ಲ ಎಂದಿತು. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಈ ಬಗ್ಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ‘ಬಿಜೆಪಿ ಸಂಸದೆ ಕಂಗನಾ ರನೌತ್, ಕೃಷಿ ಕಾಯ್ದೆಯನ್ನು ಮರಳಿ ತರಬೇಕೆಂದು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಆಗಿರುತ್ತದೆ. ಬಿಜೆಪಿ ಪರವಾಗಿ ಮಾತನಾಡಲು ಅವರು ಅಧಿಕೃತ ವಕ್ತಾರರಲ್ಲ, ಅವರ ವೈಯಕ್ತಿಕ ಅಭಿಪ್ರಾಯಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ’ ಎಂದಿದ್ದರು. ಅಲ್ಲದೆ ಕಂಗನಾರ ಹೇಳಿಕೆಯನ್ನು ತರ್ಕವಿಲ್ಲದ ಹೇಳಿಕೆ ಎಂದು ಸಹ ಕರೆದಿದ್ದರು.

ಇದನ್ನೂ ಓದಿ:ಮೊದಲ ಪ್ರಯತ್ನದಲ್ಲೇ ಗೆಲುವು, ಕಂಗನಾ ರನೌತ್ ಹೇಳಿದ್ದು ಹೀಗೆ

ಅದರ ಬೆನ್ನಲ್ಲೆ ವಿಡಿಯೋ ಬಿಡುಗಡೆ ಮಾಡಿರುವ ನಟಿ ಕಂಗನಾ ರನೌತ್, ‘ಕೆಲ ದಿನಗಳ ಹಿಂದೆ ಮಾಧ್ಯಮದವರು ಕೃಷಿ ಕಾಯ್ದೆಯ ವಿಚಾರವಾಗಿ ನನ್ನನ್ನು ಕೆಲ ಪ್ರಶ್ನೆ ಕೇಳಿದರು. ಕೃಷಿ ಕಾಯ್ದೆಗಳನ್ನು ಮರಳಿ ತರಬೇಕೆಂದು ರೈತರು ಪ್ರಧಾನಿಗಳ ಬಳಿ ಮನವಿ ಮಾಡಬೇಕು ಎಂದಿದ್ದೆ. ನನ್ನ ಈ ಅಭಿಪ್ರಾಯದಿಂದ ಹಲವರು ಬೇಸರ ಮತ್ತು ನಿರಾಶೆಗೆ ಒಳಗಾಗಿದ್ದಾರೆ. ಕೃಷಿ ಕಾಯ್ದೆಯ ಪ್ರಸ್ತಾವನೆ ಬಂದಿದ್ದಾಗ ನಾವೆಲ್ಲರೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೆವು. ಆದರೆ ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರು. ಮೋದಿ ಅವರ ನಿರ್ಣಯವನ್ನು ಗೌರವಿಸುವುದು, ಪಾಲಿಸುವುದು ಎಲ್ಲ ಕಾರ್ಯಕರ್ತರ ಕರ್ತವ್ಯವಾಗಿದೆ. ನಾನು ಕೇವಲ ನಟಿಯಲ್ಲ ಬಿಜೆಪಿಯ ಕಾರ್ಯಕರ್ತೆಯೂ ಹೌದು, ನನ್ನ ಅಭಿಪ್ರಾಯ ನನ್ನದು ಮಾತ್ರವಲ್ಲ ಅದು ಪಕ್ಷದ ನಿಲುವು ಆಗಿರುತ್ತವೆ ಎಂಬುದನ್ನು ನಾನೂ ಸಹ ಮರೆಯಬಾರದು. ಹಾಗಾಗಿ ನನ್ನ ಮಾತಿನಿಂದ, ಅಭಿಪ್ರಾಯದಿಂದ ಯಾರಿಗಾದರೂ ನಿರಾಸೆಯಾಗಿದ್ದರೆ ಆ ಬಗ್ಗೆ ನನಗೆ ಖೇದವಿದೆ’ ಎಂದಿದ್ದಾರೆ.

ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಮಾಡಿದ್ದ ಬೃಹತ್ ಹೋರಾಟವನ್ನು ನಟಿ ಕಂಗನಾ ತೀವ್ರವಾಗಿ ಟೀಕಿಸಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರ, ರೈತ ಮಹಿಳೆಯರ ಬಗ್ಗೆ ಅಪಹಾಸ್ಯ ಮಾಡಿದ್ದರು. ಆಗೆಲ್ಲ ಕಂಗನಾ ವಿರುದ್ಧ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಹಲವು ದೂರುಗಳು ದಾಖಲಾಗಿದ್ದವು. ಅದಾದ ಬಳಿಕ ಕಂಗನಾಗೆ ಬಿಜೆಪಿಯಿಂದ ಟಿಕೆಟ್ ದೊರೆತು ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆ ಆಗಿದ್ದಾರೆ. ಆದರೆ ಕಂಗನಾರ ಹೇಳಿಕೆಗಳಿಂದ ಈಗ ಬಿಜೆಪಿ ಮುಜುಗರ ಅನುಭವಿಸುವಂತಾಗಿದೆ. ಕಂಗನಾರ ‘ಎಮರ್ಜೆನ್ಸಿ’ ಸಿನಿಮಾದ ಬಗ್ಗೆಯೂ ಬಿಜೆಪಿ ತಕರಾರು ಎತ್ತಿದ್ದು, ಆ ಸಿನಿಮಾ ಬಿಡುಗಡೆ ಆದರೆ ಪಂಜಾಬ್​, ಹರಿಯಾಣಾದಲ್ಲಿ ತಮ್ಮ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂಬ ಕೆಲವು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ