ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿರುದ್ಧ ಕಿಡಿ ಕಾರಿದ ಕಂಗನಾ ರನೌತ್
ದೀಪಾವಳಿ ಮುಗಿದರೂ ಸಿಡಿಮದ್ದಿನ ಸದ್ದು ನಿಂತಿಲ್ಲ ಮತ್ತು ಪಟಾಕಿಗಾಗಿ ಹುಟ್ಟಿದ ಗಲಾಟೆಯೂ ಮುಗಿದಿಲ್ಲ. ದೀಪಾವಳಿ ದಿನ ಪಟಾಕಿ ಸಿಡಿಸಬೇಡಿ ಎಂದು ಸಲಹೆ ನೀಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್, ತಾವು ನೀಡಿದ ಸಲಹೆಯ ಮುಂದುವರಿದ ಭಾಗವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ರೂಪಾ ಅವರ ಪಟಾಕಿ ಸಿಡಿಸಬೇಡಿ ಎನ್ನುವ ಹೇಳಿಕೆಯ ಸುತ್ತ ಹುಟ್ಟಿಕೊಂಡ ಚರ್ಚೆ ಇದೀಗ ಹಿಂದೂ ಧರ್ಮದ ಪರ, ವಿರೋಧಿ ಎಂಬ ಬಣ್ಣ ತಳೆದಿದೆ. ಟ್ವಿಟ್ಟರ್ನಲ್ಲಿ ರೂಪಾ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಟ್ರೂ ಇಂಡಾಲಜಿ ಎಂಬ […]
ದೀಪಾವಳಿ ಮುಗಿದರೂ ಸಿಡಿಮದ್ದಿನ ಸದ್ದು ನಿಂತಿಲ್ಲ ಮತ್ತು ಪಟಾಕಿಗಾಗಿ ಹುಟ್ಟಿದ ಗಲಾಟೆಯೂ ಮುಗಿದಿಲ್ಲ. ದೀಪಾವಳಿ ದಿನ ಪಟಾಕಿ ಸಿಡಿಸಬೇಡಿ ಎಂದು ಸಲಹೆ ನೀಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್, ತಾವು ನೀಡಿದ ಸಲಹೆಯ ಮುಂದುವರಿದ ಭಾಗವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
ರೂಪಾ ಅವರ ಪಟಾಕಿ ಸಿಡಿಸಬೇಡಿ ಎನ್ನುವ ಹೇಳಿಕೆಯ ಸುತ್ತ ಹುಟ್ಟಿಕೊಂಡ ಚರ್ಚೆ ಇದೀಗ ಹಿಂದೂ ಧರ್ಮದ ಪರ, ವಿರೋಧಿ ಎಂಬ ಬಣ್ಣ ತಳೆದಿದೆ. ಟ್ವಿಟ್ಟರ್ನಲ್ಲಿ ರೂಪಾ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಟ್ರೂ ಇಂಡಾಲಜಿ ಎಂಬ ಟ್ವಿಟರ್ ಅಕೌಂಟ್ ನಿಷ್ಕ್ರಿಯಗೊಂಡು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದು ನೆಟ್ಟಿಗರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸಕ್ರಿಯರಾಗಿರದವರಿಗೂ ಗೊತ್ತಿರುವ ವಿಷಯವೇ. ಈಗ ಬಾಲಿವುಡ್ನ ವಿವಾದಾತ್ಮಕ ನಟಿ ನಟಿ ಕಂಗನಾ ರನೌತ್ ಸಹ ರೂಪಾ ವಿರುದ್ಧ ತಿರುಗಿಬಿದ್ದಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರವನ್ನೇ ಎದುರು ಹಾಕಿಕೊಂಡು ಭಾರಿ ವಿವಾದ ಸೃಷ್ಟಿಸಿದ್ದ ಕಂಗನಾ, ಟ್ರೂ ಇಂಡಾಲಜಿ ಟ್ವಿಟ್ಟರ್ ಅಕೌಂಟನ್ನು ಸ್ಥಗಿತಗೊಳಿಸಿರುವುದಕ್ಕೆ ಟ್ವೀಟ್ ಮೂಲಕ ರೂಪಾ ವಿರುದ್ಧ ಗುಡುಗಿದ್ದಾರೆ.
‘‘ಸರ್ಕಾರ ನಿಮಗೆ ಅಧಿಕಾರ ನೀಡಿರುವುದು ಜನರ ಹಿತ ಕಾಪಾಡುವುದಕ್ಕಾಗಿಯೇ ಹೊರತು ನಿಮ್ಮ ಅಧಿಕಾರವನ್ನು ಬಳಸಿಕೊಂಡು ಇನ್ನೊಬ್ಬರ ಧ್ವನಿ ಹತ್ತಿಕ್ಕುವುದಕ್ಕಲ್ಲ. ಟ್ರೂ ಇಂಡಾಲಜಿ ಪೇಜಿನೊಂದಿಗೆ ತಾರ್ಕಿಕವಾಗಿ ಗೆಲ್ಲುವುದು ಸಾಧ್ಯವಾಗಿಲ್ಲ ಎಂಬ ಸಿಟ್ಟಿಗೆ ಅವರ ಟ್ವಿಟರ್ ಹ್ಯಾಂಡಲನ್ನು ಸ್ಥಗಿತಗೊಳಿಸಿರುವುದು ನಿಮ್ಮ ದರ್ಪ ಹಾಗೂ ಅಧಿಕಾರದ ದುರುಪಯೋಗಕ್ಕೆ ಸಾಕ್ಷಿ,’’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಮೀಸಲಾತಿಯ ವಿಷಯವನ್ನು ಪ್ರಸ್ತಾಪಿಸಿರುವ ಕಂಗನಾ, ‘ಮೀಸಲಾತಿ ಎನ್ನುವುದು ಅರ್ಹನಲ್ಲದ ವ್ಯಕ್ತಿಗೆ ಸಿಕ್ಕರೆ ಅವರು ಉಪಕಾರಕ್ಕಿಂತ ಹೆಚ್ಚು ಅಪಕಾರವನ್ನೇ ಮಾಡುತ್ತಾರೆ. ನನಗೆ ರೂಪಾ ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿದಿಲ್ಲ. ಆದರೆ, ಅವರ ನಡೆಯನ್ನು ಗಮನಿಸಿದರೆ ಅದು ಅವರ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ,’ ಎಂದಿದ್ದಾರೆ.
‘‘ನಮ್ಮ ದೇಶದಲ್ಲಿ ನಮ್ಮ ಹಬ್ಬವನ್ನೇ ಆಚರಿಸುವಂತಿಲ್ಲ. ಇಲ್ಲಿ ಸತ್ಯವನ್ನು ಮಾತಾಡುವುದಕ್ಕೆ ಹಾಗೂ ನಮ್ಮ ಪೂರ್ವಜರ ಪರಂಪರೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಉಗ್ರರ ವಿರುದ್ಧ ಮಾತನಾಡುವುದಕ್ಕೆ ಸಾಧ್ಯವಿಲ್ಲ. ನಮ್ಮ ದೇಶವನ್ನೇ ವಿರೋಧಿಸುವ ಮನಸ್ಥಿತಿಗಳು ಹಾಗೂ ಇಲ್ಲಿರುವವರನ್ನು ಅಡಿಯಾಳುಗಳಂತೆ ಕಾಣುವ ಅವರ ವರ್ತನೆಯನ್ನು ನೋಡಿ ಹೇಸಿಗೆಯಾಗುತ್ತದೆ,’’ ಎಂದು ಕಂಗನಾ ಮತ್ತೊಂದು ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಐಪಿಎಸ್ ಅಧಿಕಾರಿ ಸಂದೀಪ್ ಮಿತ್ತಲ್ ಸಹ ಟ್ರೂ ಇಂಡಾಲಜಿಯನ್ನು ಬೆಂಬಲಿಸಿದ್ದು, ‘ಟ್ವಿಟರ್ ಈ ಕೂಡಲೇ ಆ ಪೇಜನ್ನು ಸಕ್ರಿಯಗೊಳಿಸಬೇಕು. ಜನರ ಹಕ್ಕನ್ನು ಮೊಟಕುಗಳಿಸುವ ಯತ್ನದ ಬಗ್ಗೆ ಸಿಬಿಐ ತನಿಖೆ ಆಗಬೇಕು,’ ಎಂದು ಆಗ್ರಹಿಸಿದ್ದಾರೆ.
ಟ್ರೂ ಇಂಡಾಲಜಿ ಪೇಜ್ ಡಿ ಆ್ಯಕ್ಟಿವೇಟ್ ಮಾಡಿರುವ ಟ್ವಿಟರ್ ನಡೆಯನ್ನು ವಿರೋಧಿಸಿ ಸರಣಿ ಟ್ವೀಟ್ಗಳಾಗಿವೆ. ಅದರ ಜೊತೆಗೆ ಅನೇಕರು ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧವೂ ಟ್ವೀಟ್ಗಳನ್ನು ಮಾಡಿದ್ದು #BringBackTrueIndology ಹಾಗೂ #ShameOnYouIPSRoopa ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿವೆ.
Published On - 8:34 pm, Wed, 18 November 20