ಕಾನ್ಪುರ: ಟ್ರ್ಯಾಕ್ಟರ್-ಟ್ರಾಲಿ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಅಪಘಾತ ನಡೆದ ಬಳಿಕ ಟ್ರ್ಯಾಕ್ಟರ್ ಚಾಲಕ ನಾಪತ್ತೆಯಾಗಿದ್ದಾನೆ. ಕರ್ತವ್ಯ ಲೋಪದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಗಾಯಗೊಂಡ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಬಗ್ಗೆ ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ. ಅಯ್ಯರ್, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಹಣಕಾಸು ಮತ್ತು ಕಂದಾಯ) ರಾಜೇಶ್ ಕುಮಾರ್ ಸಮಿತಿಯ ನೇತೃತ್ವ ವಹಿಸಿದ್ದರೆ, ಮುಖ್ಯ ವೈದ್ಯಾಧಿಕಾರಿ ಅಲೋಕ್ ರಂಜನ್ ಮತ್ತು ನಿರ್ದೇಶಕಿ ಉರ್ಸುಲಾ ಹಾರ್ಸ್‌ಮ್ಯಾನ್ ಸ್ಮಾರಕ ಆಸ್ಪತ್ರೆ (ಯುಹೆಚ್‌ಎಂ) ಅದರ ಸದಸ್ಯರಾಗಿರುತ್ತಾರೆ ಎಂದಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಭೀಟರ್‌ಗಾಂವ್) ನೀಡಲಾದ ಚಿಕಿತ್ಸೆಯ ಬಗ್ಗೆ ಮೃತರ ಕುಟುಂಬ ಮತ್ತು ಗಾಯಾಳುಗಳು ಅಸಮಾಧಾನ ವ್ಯಕ್ತಪಡಿಸಿದ ನಂತರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Uttar Pradesh: ಅಪಘಾತದಲ್ಲಿ ಗಾಯಗೊಂಡ ಮಗುವಿನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಧಿಕಾರಿ, ವಿಡಿಯೋ ವೈರಲ್
ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಯಾವುದಾದರೂ ವಿಳಂಬ ಅಥವಾ ನಿರ್ಲಕ್ಷ್ಯ ನಡೆದಿದೆಯೇ ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ತಿಳಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಕೊರ್ತಾ ಗ್ರಾಮದಲ್ಲಿ ದುಃಖತಪ್ತ ಕುಟುಂಬಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಹಾಗೇ ಜನರು ಸಂಚರಿಸಲು ಟ್ರ್ಯಾಕ್ಟರ್-ಟ್ರಾಲಿ, ಪಿಕ್-ಅಪ್‌ಗಳಂತಹ ಲೋಡಿಂಗ್ ವಾಹನಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಸೇರಿದಂತೆ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು.
ಸಂಚಾರ ನಿಯಮಗಳ ಉಲ್ಲಂಘನೆ ಕುರಿತು ವರದಿ ಮಾಡಲು 2 ದೂರವಾಣಿ ಸಹಾಯವಾಣಿಗಳನ್ನು ಸಹ ಘೋಷಿಸಲಾಗಿದೆ. ಕರ್ತವ್ಯ ಲೋಪವೆಸಗಿದ್ದಕ್ಕಾಗಿ ಸಾಧ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದೆ. ಈ ದುರಂತದಲ್ಲಿ 31 ಜನರು ಸಾವನ್ನಪ್ಪಿದ್ದು, 9 ಜನ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ಟ್ರ್ಯಾಕ್ಟರ್-ಟ್ರಾಲಿಯಲ್ಲಿ 35 ಪ್ರಯಾಣಿಕರು ಇದ್ದರು. ಮೃತರ ಮರಣೋತ್ತರ ಪರೀಕ್ಷೆಯನ್ನು ನಿನ್ನೆ ರಾತ್ರಿ ನಡೆಸಲಾಯಿತು. ಶವಸಂಸ್ಕಾರವನ್ನು ಮಹಾರಾಜಪುರದ ದಿಯೋರಿ ಘಾಟ್‌ನಲ್ಲಿ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ 24 ಭಕ್ತರು ದುರ್ಮರಣ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರಯಾಣಿಕರು ನಿಧಾನವಾಗಿ ವಾಹನ ಚಲಾಯಿಸುವಂತೆ ವಿನಂತಿಸಿದರೂ ಟ್ರ್ಯಾಕ್ಟರ್ ಅನ್ನು ಹೆಚ್ಚಿನ ವೇಗದಲ್ಲಿ ಓಡಿಸಲಾಗುತ್ತಿತ್ತು. ನಂತರ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಟ್ರಾಲಿಯಡಿಗೆ ಬಿದ್ದರು. ಸ್ಥಳದಲ್ಲೇ ಹಲವರು ಸಾವನ್ನಪ್ಪಿದ್ದರು. ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅದಾದ ಬಳಿಕ ಟ್ರ್ಯಾಕ್ಟರ್ ಚಾಲಕ ರಾಜು ನಾಪತ್ತೆಯಾಗಿದ್ದಾನೆ.
ಫತೇಪುರ್‌ನ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ರಾಜು ಎಂಬುವವರ ಮಗನ ಕೂದಲು ಮುಡಿ ಕೊಡುವ ಕಾರ್ಯಕ್ರಮ ಮುಗಿಸಿಕೊಂಡು ಘಟಂಪುರಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರಲ್ಲಿ ರಾಜು ಅವರ ತಾಯಿ ರಾಮ್ ಜಾಂಕಿ (55) ಮತ್ತು ಮಗಳು ರಿಯಾ (8) ಸೇರಿದ್ದಾರೆ.