Kerala budget: ಕೇರಳ ಬಜೆಟ್​ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್

| Updated By: ರಶ್ಮಿ ಕಲ್ಲಕಟ್ಟ

Updated on: Jun 04, 2021 | 4:14 PM

Rs 20,000 Crore Package: ಕೊವಿಡ್ -19 ಪ್ಯಾಕೇಜ್‌ನಲ್ಲಿ ರಾಜ್ಯದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು 2,800 ಕೋಟಿ ರೂ., ಜೀವನೋಪಾಯ ನಷ್ಟವನ್ನು ಎದುರಿಸುತ್ತಿರುವ ಜನರಿಗೆ ನೇರವಾಗಿ ವಿತರಿಸಲಾಗುವುದು ಮತ್ತು 8,300 ಕೋಟಿ ರೂ. ಆರ್ಥಿಕತೆಯನ್ನು ಉತ್ತೇಜಿಸಲು ಸಾಲಗಳಿಗೆ ಬಡ್ಡಿ ಸಬ್ಸಿಡಿ ನೀಡಲಾಗುವುದು.

Kerala budget: ಕೇರಳ ಬಜೆಟ್​ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್
ಕೇರಳದ ವಿತ್ತ ಸಚಿವ ಬಾಲಗೋಪಾಲ್
Follow us on

ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ಶುಕ್ರವಾರ 2021-22ರ ಹಣಕಾಸು ವರ್ಷದ ರಾಜ್ಯ ಬಜೆಟ್ ಮಂಡಿಸಿದ ಕೇರಳ ವಿತ್ತ ಸಚಿವ ಕೆ.ಎನ್. ಬಾಲಗೋಪಾಲ್ ₹20,000 ಕೋಟಿ ಮೊತ್ತದ ಕೊವಿಡ್ ಪ್ಯಾಕೇಜ್ ಘೋಷಿಸಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ಉಚಿತವಾಗಿ ವಿತರಿಸಲು 1,000 ಕೋಟಿ ರೂ, ದುರ್ಬಲವಾದ ಕರಾವಳಿ ಪ್ರದೇಶಗಳ ಮೊದಲ ಹಂತದ ಸಂರಕ್ಷಣೆಗಾಗಿ 1,500 ಕೋಟಿ ರೂ ಮತ್ತು ತೀವ್ರ ಬಡತನವನ್ನು ಕಡಿಮೆ ಮಾಡುವ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಬಾಲಗೋಪಾಲ್. ಈ ಬಾರಿಯ ಬಜೆಟ್ ನಲ್ಲಿ ಹೊಸ ತೆರಿಗೆ ಪ್ರಸ್ತಾಪಗಳಿಲ್ಲ.

ಈ ಹಿಂದೆ ವಿತ್ತ ಸಚಿವರಾಗಿದ್ದ ಟಿ.ಎಂ. ಥಾಮಸ್ ಐಸಾಕ್ ಫೆಬ್ರವರಿಯಲ್ಲಿ ಪೂರ್ಣ ಬಜೆಟ್ ಮಂಡಿಸಿದ್ದರು. ಇತ್ತೀಚಿನ ಚುನಾವಣೆಗಳಲ್ಲಿ ಎಲ್​ಡಿಎಫ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರಿದ ನಂತರ ಈ ಬಜೆಟ್  ಐಸಾಕ್ ಅವರ ಪ್ರಸ್ತಾಪಗಳ ಮುಂದುವರಿಕೆಯಾಗಿದೆ.

ರಾಜ್ಯಕ್ಕಾಗಿ ಸರ್ಕಾರದ ದೀರ್ಘಕಾಲೀನ ಗುರಿಗಳು ನಿರ್ಣಾಯಕ ಕ್ಷೇತ್ರಗಳಲ್ಲಿ ಬದಲಾಗದೆ ಇದ್ದರೂ, ಲಸಿಕೆ ವಿತರಣೆಯ ವೆಚ್ಚವನ್ನು ಭರಿಸಲು ಮತ್ತು ಸಾಂಕ್ರಾಮಿಕ ರೋಗದ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ಆರ್ಥಿಕ ತೊಂದರೆಯನ್ನು ನಿರ್ವಹಿಸಲು ಬಾಲಗೋಪಾಲ್ ಹೆಚ್ಚುವರಿ ನಿಧಿಯಲ್ಲಿ ನಿರ್ವಹಣೆ ಮಾಡಬೇಕಾಗಿ ಬಂದಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ತೆರಿಗೆ ಹೆಚ್ಚಿಸುವುದು ಅನಿವಾರ್ಯ ಎಂದು ಸಚಿವರು ಹೇಳಿದ್ದರೂ, ಜನಸಂಖ್ಯೆಯ ಹೆಚ್ಚಿನ ಭಾಗವು ಸಾಂಕ್ರಾಮಿಕ ರೋಗದ ಪರಿಣಾಮಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಹೊಸ ತೆರಿಗೆ ಪ್ರಸ್ತಾಪಗಳನ್ನು ಘೋಷಿಸದಿರಲು ನಿರ್ಧರಿಸಿದರು.

ಕೊವಿಡ್ -19 ಪ್ಯಾಕೇಜ್‌ನಲ್ಲಿ ರಾಜ್ಯದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು 2,800 ಕೋಟಿ ರೂ., ಜೀವನೋಪಾಯ ನಷ್ಟವನ್ನು ಎದುರಿಸುತ್ತಿರುವ ಜನರಿಗೆ ನೇರವಾಗಿ ವಿತರಿಸಲಾಗುವುದು ಮತ್ತು 8,300 ಕೋಟಿ ರೂ. ಆರ್ಥಿಕತೆಯನ್ನು ಉತ್ತೇಜಿಸಲು ಸಾಲಗಳಿಗೆ ಬಡ್ಡಿ ಸಬ್ಸಿಡಿ ನೀಡಲಾಗುವುದು.

ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು, ಜಿಲ್ಲಾ ಮತ್ತು ಸಾಮಾನ್ಯ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಪರಿಚಯಿಸುವಂತಹ ಹಲವಾರು ಉಪಕ್ರಮಗಳ ಮೂಲಕ ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಬಜೆಟ್‌ ಒತ್ತು ನೀಡಿದೆ. ಕೊವಿಡ್ -19 ಮತ್ತು ನಿಫಾ ವೈರೆಸ್​ನಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬ್ಲಾಕ್​, ಮಕ್ಕಳ ಐಸಿಯುಗಳ ಹಾಸಿಗೆಗಳ ಸಂಖ್ಯೆ ಹೆಚ್ಚಿಸುವುದು, 150 ಮೆಟ್ರಿಕ್ ಟನ್ ಸಾಮರ್ಥ್ಯದ ದ್ರವ ವೈದ್ಯಕೀಯ ಆಮ್ಲಜನಕ ಸ್ಥಾವರವನ್ನು ಸ್ಥಾಪಿಸುವುದು- ಬಜೆಟ್​ನಲ್ಲಿ ಹೇಳಿದ ಪ್ರಧಾನ ವಿಷಯಗಳಾಗಿದೆ.

ಪರಿಸರ ವಿಷಯಗಳ ಬಗ್ಗೆ ಅತೀವ ಆಸಕ್ತಿ ವಹಿಸುವ ರಾಜಕಾರಣಿಯಾಗಿರುವ ಬಾಲಗೋಪಾಲ್ ಅವರ ಬಜೆಟ್ ನಲ್ಲಿ ಪರಿಸರ ಕಾಳಜಿಯೂ ಎದ್ದು ಕಾಣುತ್ತಿತ್ತು. ನೆದರ್​ಲ್ಯಾಂಡ್​ನಲ್ಲಿ ಜಾರಿಗೆ ಬಂದಂತೆ ‘ನದಿಗೆ ಕೊಠಡಿ’, ‘ನೀರಿನೊಂದಿಗೆ ವಾಸಿಸುವುದು’, ಮತ್ತು ಪರಿಸರ ಸ್ನೇಹಿ  ಉತ್ತಮ ವ್ಯವಸ್ಥೆಗಳ ಮೂಲಕ ಪ್ರವಾಹದ ಪರಿಣಾಮಗಳ ನಿರ್ವಹಣೆಗೂ ಸಮಗ್ರ ಪ್ಯಾಕೇಜ್ ಘೋಷಿಸಲಾಗಿದೆ. ಯೋಜನೆಯ ಮೊದಲ ಹಂತವು 500 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ 50 ಕೋಟಿ ರೂ. ಯೋಜನೆಯು ಜಲ ಸಂಪನ್ಮೂಲಗಳು, ಪರಿಸರ ಮತ್ತು ಸ್ಥಳೀಯ ಸ್ವ-ಸರ್ಕಾರಿ ಇಲಾಖೆಗಳನ್ನು ಒಳಗೊಂಡಿರುತ್ತದೆ.

ರಾಜ್ಯದ ಮಹಿಳಾ ಸಬಲೀಕರಣ ಮಿಷನ್ ಕುಟುಂಬಶ್ರೀಗೆ ದೊಡ್ಡ ಉತ್ತೇಜನ ನೀಡುವುದಕ್ಕಾಗಿ ಜೀವನೋಪಾಯ ಪ್ಯಾಕೇಜ್‌ಗೆ ಹಂಚಿಕೆಯನ್ನು 100 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ಮೌಲ್ಯವರ್ಧಿತ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು 10 ಕೋಟಿ ರೂ ನೀಡಲಾಗಿದೆ.


ಪ್ರಮುಖ ಪ್ರಕಟಣೆಗಳಲ್ಲಿ ಕೆಎಸ್‌ಆರ್‌ಟಿಸಿಗೆ ಸೇರಿದ 3,000 ಡೀಸೆಲ್ ಬಸ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸುವ ಸರ್ಕಾರದ ನಿರ್ಧಾರವೂ ಸೇರಿದೆ. ಇದು ನಿಗಮದ ಕಾರ್ಯಾಚರಣೆಯ ನಷ್ಟ ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಪ್ರವಾಸೋದ್ಯಮ ರಂಗದಲ್ಲಿ, ಬಾಲಗೋಪಾಲ್ ಪ್ರಚಾರಕ್ಕಾಗಿ ಹೆಚ್ಚುವರಿ 50 ಕೋಟಿ ರೂ. ಮತ್ತು ಮೊದಲ ಹಂತದ ಭಾಗವಾಗಿ ಭೂಮಿ ಮತ್ತು ನೀರಿನ ಮೇಲೆ ಚಲಿಸುವ ಉಭಯಚರ ವಾಹನಗಳನ್ನು ಪ್ರಾರಂಭಿಸಲು 5 ಕೋಟಿ ರೂ. ಘೋಷಿಸಿದ್ದಾರೆ ಮಲಬಾರ್ ಸಾಹಿತ್ಯ ವಲಯ ಮತ್ತು ಜೈವಿಕ ವೈವಿಧ್ಯತೆಯ ವಲಯ ಎಂಬ ಎರಡು ಹೊಸ ಪ್ರವಾಸೋದ್ಯಮ ವಲಯಗಳನ್ನು ಘೋಷಿಸಲಾಗಿದೆ. ಮಲಬಾರ್ ಸಾಹಿತ್ಯ ವಲಯ ರಾಜ್ಯದ ಮಹಾನ್ ಸಾಹಿತಿಗಳಾದ ತುಂಜತ್ ಎಳುತ್ತಚ್ಚನ್, ವೈಕಂ ಮುಹಮ್ಮದ್ ಬಶೀರ್, ಒ. ವಿ .ವಿಜಯನ್ ಮತ್ತು ಎಂ ಟಿ ವಾಸುದೇವನ್ ನಾಯರ್ ಅವರೊಂದಿಗೆ ಸಂಬಂಧಿಸಿದ ಸ್ಥಳಗಳನ್ನು ಸಂಪರ್ಕಿಸುತ್ತದೆ. ಜೈವಿಕ ವೈವಿಧ್ಯತೆಯ ವಲಯವು ಅಷ್ಟಮುಡಿ ಸರೋವರ, ಕೊಟ್ಟಾರಕ್ಕರ, ಮಾರುತಿಮಲ, ಜಟಾಯು ಪ್ರತಿಮೆ ಮತ್ತು ಕೊಲ್ಲಂ ಜಿಲ್ಲೆಯ ಮುಂಡ್ರೊತುರುತ್ ಮುಂತಾದ ಸ್ಥಳಗಳನ್ನು ಸಂಪರ್ಕಿಸುತ್ತದೆ. ಅಂದಹಾಗೆ ಕೊಟ್ಟಾರಕ್ಕರ ವಿತ್ತ ಸಚಿವರ ಕ್ಷೇತ್ರವಾಗಿದೆ.

ದಿವಂಗತ ರಾಜಕಾರಣಿ ಕೆ ಆರ್ ಗೌರಿಯಮ್ಮ ಮತ್ತು ಬಾಲಕೃಷ್ಣ ಪಿಳ್ಳ ಅವರಿಗೆ ಎರಡು ಹೊಸ ಸ್ಮಾರಕಗಳನ್ನು ನಿರ್ಮಿಸಲು ತಲಾ 2 ಕೋಟಿ ರೂ ಮೀಸಲಿಡಲಾಗಿದೆ.

ಇದನ್ನೂ ಓದಿ:  SDG India Index 2020-21 ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕೇರಳ ಪ್ರಥಮ, ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ಇದನ್ನೂ ಓದಿ: ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

(Kerala budget 2021-22 Finance Minister KN Balagopal announces Covid-19 stimulus package worth Rs 20000 crore)

Published On - 4:09 pm, Fri, 4 June 21