ಕೇರಳದ ಕಾಂಗ್ರೆಸ್ ನೇತಾರ, ಮಾಜಿ ಸಚಿವ ಆರ್. ಬಾಲಕೃಷ್ಣ ಪಿಳ್ಳ ನಿಧನ
R Balakrishna Pillai: ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಆರ್. ಬಾಲಕೃಷ್ಣ ಪಿಳ್ಳ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು , ಕೊಟ್ಟಾರಕ್ಕರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ತಿರುವನಂತಪುರಂ: ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಮತ್ತು ಮಾಜಿ ಸಚಿವ ಆರ್. ಬಾಲಕೃಷ್ಣ ಪಿಳ್ಳ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆ ಕಾಣಿಸಿಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕೊಟ್ಟಾರಕ್ಕರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಬಾಲಕೃಷ್ಣ ಪಿಳ್ಳ ಅವರಿಗೆ ಮೂರು ಮಕ್ಕಳಿದ್ದಾರೆ. ಮಗ ಗಣೇಶ್ ಕುಮಾರ್ ಮಾಜಿ ಸಚಿವರಾಗಿದ್ದು, ಪತ್ತನಾಪುರಂ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಎಲ್ ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಕೊಟ್ಟಾರಕ್ಕರ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಪಿಳ್ಳ, ವಿದ್ಯಾರ್ಥಿ ದೆಸೆಯಂದಲೇ ರಾಜಕೀಯಕ್ಕೆ ಪ್ರವೇಶಿಸಿದವರು. ಕಾಂಗ್ರೆಸ್ ಸೇರುವುದಕ್ಕಿಂತ ಮುನ್ನ ಎಸ್ಎಫ್ಐ ಸಂಘಟನೆಯಲ್ಲಿದ್ದವರು ಇವರು. ಕೇರಳ ಕಾಂಗ್ರೆಸ್ ನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದರು ಪಿಳ್ಳ. 1958 ರಿಂದ 1964ರ ವರೆಗೆ ಎಐಸಿಸಿ ಸದಸ್ಯರಾಗಿದ್ದರು.
1960ರಲ್ಲಿ ಪತ್ತನಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದಾಗ ಅವರ ವಯಸ್ಸು 25. 1964ರಲ್ಲಿ ಕಾಂಗ್ರೆಸ್ ತೊರೆದ ಪಿಳ್ಳ, ಹಿರಿಯ ನೇತಾರ ಕೆ.ಎಂ.ಜಾರ್ಜ್ ಜತೆ ಕೇರಳ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. 1965ರಲ್ಲಿ ಕೊಟ್ಟಾರಕ್ಕರದಲ್ಲಿ ಗೆದ್ದ ಅವರು 1967 ಮತ್ತು 1970ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡರು. 1971ರಲ್ಲಿ ಮಾವೇಲಿಕ್ಕರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಸಿ.ಅಚ್ಯುತ ಮೆನನ್, ಕೆ.ಕರುಣಾಕರನ್, ಇ.ಕೆ ನಾಯನಾರ್, ಎ.ಕೆ. ಆಂಟನಿ ಮೊದಲಾದವರ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದಿದ್ದರು. 6 ದಶಕಗಳ ರಾಜಕೀಯ ಜೀವನದಲ್ಲಿ ಪಿಳ್ಳ ಹಲವಾರು ಸೋಲು- ಗೆಲುವುಗಳನ್ನು ಕಂಡಿದ್ದಾರೆ.
Kerala Congress (B) chairman and former state minister R Balakrishna Pillai passes away in Kottarakkara at the age of 87 pic.twitter.com/25yetTrBWG
— ANI (@ANI) May 3, 2021
ಕೇರಳ ಸರ್ಕಾರವನ್ನು ಕಡೆಗಣಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ನಲ್ಲಿ ನಡೆಸಿದಂತೆ ಉಗ್ರ ಹೋರಾಟ ನಡೆಸಬೇಕು ಎಂದು 1980ರಲ್ಲಿ ಭಾಷಣವೊಂದರಲ್ಲಿ ಹೇಳಿದ್ದರು. ಚಳವಳಿಗೆ ಕರೆನೀಡಿದ್ದಕ್ಕಾಗಿ ಸಚಿವ ಸ್ಥಾನ ತೊರೆಯಬೇಕಾಗಿ ಬಂದಿತ್ತು. ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋದ ಮೊದಲ ಸಚಿವರಾಗಿದ್ದಾರೆ ಬಾಲಕೃಷ್ಣ ಪಿಳ್ಳ.
ಕೆ ಕರುಣಾಕರನ್ ಸಚಿವ ಸಂಪುಟದಲ್ಲಿ 1982-1985ರವರೆಗೆ ವಿದ್ಯುತ್ ಸಚಿವರಾಗಿದ್ದ ಅವಧಿಯಲ್ಲಿ ಇಡಮಾಲಯಾರ್ ಜಲವಿದ್ಯುತ್ ಯೋಜನೆಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ತಮ್ಮ ಸ್ಥಾನಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪಿಳ್ಳ ಮತ್ತು ಇತರ ಇಬ್ಬರಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ 2011 ರ ಫೆಬ್ರವರಿಯಲ್ಲಿ ವಿಧಿಸಿತ್ತು. 2017 ರಿಂದ ಅವರು ಕ್ಯಾಬಿನೆಟ್ ಶ್ರೇಣಿಯೊಂದಿಗೆ ಕೇರಳ ರಾಜ್ಯ ವೆಲ್ಫೇರ್ ಕಾರ್ಪೊರೇಷನ್ ಫಾರ್ ಫಾರ್ವರ್ಡ್ ಕಮ್ಯೂನಿಟೀಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
Hon’ble Governor Shri Arif Mohammed Khan condoled the sad demise of Shri R Balakrishna Pillai, former Minister, who had held portfolios like Transport and Power. “My condolence to the bereaved family. May his soul attain Mukti”,he said: PRO,KeralaRajBhavan pic.twitter.com/YnWvmocoXN
— Kerala Governor (@KeralaGovernor) May 3, 2021
ಕೇರಳದ ಸಾರಿಗೆ ಮತ್ತು ವಿದ್ಯುತ್ ಸಚಿವರಾಗಿದ್ದ ಮಾಜಿ ಸಚಿವ ಬಾಲಕೃಷ್ಣ ಪಿಳ್ಳ ಅವರ ನಿಧನಕ್ಕೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಂತಾಪ ಸೂಚಿಸಿದ್ದಾರೆ.
(Kerala Congress B chairman former state minister R Balakrishna Pillai passed away)
Published On - 11:52 am, Mon, 3 May 21