Kerala Election Result 2021: ಕೇರಳದಲ್ಲಿ ಅರಳಲಿಲ್ಲ ಕಮಲ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಕೆ.ಸುರೇಂದ್ರನ್ಗೆ ಸೋಲು
Kerala Assembly Election 2021: ಕಾಸರಗೋಡಿನ ಮಂಜೇಶ್ವರ ಮತ್ತು ಪತ್ತನಂತಿಟ್ಟದ ಕೊನ್ನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ.
ತಿರುನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. 2016ರಲ್ಲಿ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಒ.ರಾಜಗೋಪಾಲ್ ಅವರ ಮೂಲಕ ಗೆದ್ದಿದ್ದ ಏಕೈಕ ಸೀಟು ಕೂಡಾ ಈ ಚುನಾವಣೆಯಲ್ಲಿ ಕೈ ಜಾರಿದೆ. ಶಬರಿಮಲೆ, ಧಾರ್ಮಿಕ ವಿಚಾರಗಳು, ಲವ್ ಜಿಹಾದ್, ಹಿಂದೂಗಳ ಬಲವರ್ಧನೆ ಮತ್ತು ಪಿಣರಾಯಿ ವಿಜಯನ್ ವಿರುದ್ಧವಿರುವ ಚಿನ್ನ ಕಳ್ಳ ಸಾಗಾಣಿಕೆ ಆರೋಪವನ್ನೇ ಚುನಾವಣಾ ಪ್ರಚಾರದ ಮುಖ್ಯ ವಿಷಯವಾಗಿ ಬಿಜೆಪಿ ಬಳಸಿಕೊಂಡಿತ್ತು. ಕಾಸರಗೋಡು ಜಿಲ್ಲೆಯ ಮಂಜೇಶ್ವರಂ, ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಎರಡೂ ಕಡೆ ಪರಾಭವಗೊಂಡಿದ್ದಾರೆ.
2021ರ ಚುನಾವಣೆಯಲ್ಲಿ 10-20 ಸ್ಥಾನಗಳನ್ನು ಸುಲಭವಾಗಿ ಗೆಲ್ಲುತ್ತೇವೆ ಎಂದು ಹೇಳಿದ್ದ ಬಿಜೆಪಿ, ಇದೇ ಮೊದಲ ಬಾರಿ ಮೆಟ್ರೊಮ್ಯಾನ್ ಇ.ಶ್ರೀಧರನ್ ಅವರನ್ನು ಎನ್ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಆದರೆ ಇ. ಶ್ರೀಧರನ್ ಅವರನ್ನು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಜನರು ಕೈಹಿಡಿಯಲಿಲ್ಲ. ಕಳೆದ ಬಾರಿ ಬಿಜೆಪಿ ನೇಮಂನಲ್ಲಿ ಖಾತೆ ತೆರೆದಿತ್ತು,ಈ ಬಾರಿ ನಾವು ಅದನ್ನು ಕ್ಲೋಸ್ ಮಾಡಿಸುತ್ತೇವೆ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಪಿಣರಾಯಿ ವಿಜಯನ್ ಹೇಳಿದ್ದು ಇಲ್ಲಿ ನಿಜವಾಗಿದೆ.
ಮೆಟ್ರೊಮ್ಯಾನ್ ಮೇಲೆ ಇತ್ತು ನಿರೀಕ್ಷೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದ ಮೆಟ್ರೊಮ್ಯಾನ್ ಇ. ಶ್ರೀಧರನ್ ಅವರ ಮೇಲೆ ಕೇಂದ್ರ ಬಿಜೆಪಿ ನಾಯಕರು ಹೆಚ್ಚಿನ ನಿರೀಕ್ಷೆ ಇರಿಸಿದ್ದರು. ಮತ ಎಣಿಕೆಯ ಆರಂಭಿಕ ಹಂತಗಳಲ್ಲಿ ಇ. ಶ್ರೀಧರನ್ ಮುನ್ನಡೆ ಸಾಧಿಸಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಫಿ ಪರಂಬಿಲ್ ಇಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಕುಮ್ಮನಂ ಕೈ ಹಿಡಿಯಲಿಲ್ಲ ನೇಮಂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಒ.ರಾಜಗೋಪಾಲ್ ಗೆದ್ದಿದ್ದ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಸ್ಪರ್ಧಿಸಿದ್ದರು. ನೇಮಮ್ ಬಿಜೆಪಿಯ ಸೀಟು ಆಗಿದ್ದರಿಂದ ಗೆಲುವು ಖಚಿತ ಎಂದು ಬಿಜೆಪಿ ನಿರೀಕ್ಷಿಸಿತ್ತು.ಆದರೆ ಇಲ್ಲಿ ಎಲ್‌ಡಿಎಫ್ ಅಭ್ಯರ್ಥಿ ವಿ.ಶಿವಂಕುಟ್ಟಿ 3949 ಮತಗಳ ಅಂತರದಿಂದ ಗೆದ್ದಿದ್ದಾರೆ. ಯುಡಿಎಫ್ನ ಅನುಭವಿ ರಾಜಕಾರಣಿ ವಿ.ಮುರಳೀಧರನ್ ಇಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿಬಂತು.
ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಸುರೇಂದ್ರನ್ ಗೆ ಸೋಲು ಕಾಸರಗೋಡಿನ ಮಂಜೇಶ್ವರ ಮತ್ತು ಪತ್ತನಂತಿಟ್ಟದ ಕೊನ್ನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಕೊನ್ನಿಯಲ್ಲಿ ಸಿಪಿಐ(ಎಂ) ಅಭ್ಯರ್ಥಿ ಅಡ್ವಕೇಟ್ ಕೆ.ಯು.ಜೆನೀಶ್ ಕುಮಾರ್ ಗೆದ್ದಿದ್ದು, ಮಂಜೇಶ್ವದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಎಕೆಎಂ ಅಶ್ರಫ್ ಗೆದ್ದಿದ್ದಾರೆ. ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾನುಮತಿ ನೀಡುವ ಆದೇಶವನ್ನು ಕೇರಳ ಸರ್ಕಾರ ಪಾಲಿಸಿದಾಗ ಸುರೇಂದ್ರನ್ ಧಾರ್ಮಿಕ ಸಂಪ್ರದಾಯಗಳನ್ನು ಕಾಪಾಡಬೇಕು ಎಂದು ಹೋರಾಟ ನಡೆಸಿದ್ದರು. ಪಿಣರಾಯಿ ಸರ್ಕಾರದ ವಿರುದ್ಧ ಬಿಜೆಪಿಯ ದನಿಯಾಗಿದ್ದಾರೆ ಕೆ. ಸುರೇಂದ್ರನ್ .
ತ್ರಿಶ್ಶೂರ್ ನಲ್ಲಿ ಸುರೇಶ್ ಗೋಪಿಗೆ ಸಿಕ್ಕಿಲ್ಲ ಜಯ ಈ ತ್ರಿಶ್ಶೂರ್ ನನಗೆ ಬೇಕು, ಈ ತ್ರಿಶ್ಶೂರ್ ನ್ನು ನೀವು ನನಗೆ ಕೊಡಬೇಕು, ನಾನು ಈ ತ್ರಿಶ್ಶೂರ್ನ್ನು ತೆಗೆದುಕೊಳ್ಳುತ್ತೇನೆ ಎಂಬ ಸುರೇಶ್ ಗೋಪಿಯ ಮಾತು ಕಳೆದ ಬಾರಿ ಚುನಾವಣೆಯಲ್ಲಿ ಟ್ರೋಲ್ ಆಗಿತ್ತು. ಮಲಯಾಳಂ ಸಿನಿಮಾ ನಟ ಮತ್ತು ಸಂಸತ್ನ ರಾಜ್ಯಸಭಾ ಸದಸ್ಯರೂ ಆಗಿದ್ದ ಸುರೇಶ್ ಗೋಪಿ ಈ ಬಾರಿಯೂ ತ್ರಿಶ್ಶೂರ್ ನಿಂದ ಸ್ಪರ್ಧಿಸಿದ್ದು, ನಂತರ ಎಲ್‌ಡಿಎಫ್ ಅಭ್ಯರ್ಥಿ ಪಿ ಬಾಲಚಂದ್ರನ್ ವಿರುದ್ಧ ಪರಾಭವಗೊಂಡಿದ್ದಾರೆ.
ಬಿಜೆಪಿಯ ನಾಯಕಿ ಶೋಭಾ ಸುರೇಂದ್ರನ್ ಸ್ಪರ್ಧಿಸಿದ ತಿರುವನಂತಪುರಂನ ಕಳಕ್ಕೂಟ್ಟಂನಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ ಎಂಬುದು ಸದ್ಯ ರಾಜ್ಯ ಬಿಜೆಪಿಗೆ ಸಮಾಧಾನಕರ ಸಂಗತಿ. 2016 ರಲ್ಲಿ ಬಿಜೆಪಿಗೆ 10.6% ಮತ ಪಾಲು ದೊರೆತಿದ್ದು, ಈ ಬಾರಿ ಅದು 11.6% ಹೆಚ್ಚಾಗಿದೆ.
Kerala Assembly Elections 2021: ಕೇರಳದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು 35 ಸೀಟುಗಳು ಸಾಕು: ಕೆ.ಸುರೇಂದ್ರನ್
(Kerala Election Result 2021 BJP failed to win a single seat in Kerala E Sreedharan K Surendran Kummanam Rajasekharan lost)
Published On - 9:26 pm, Sun, 2 May 21