ಎಲ್​ಡಿಎಫ್  ಮತ್ತೊಮ್ಮೆ ಅಧಿಕಾರಕ್ಕೇರಿದರೆ ಇತಿಹಾಸ, ಯುಡಿಎಫ್ ಬಂದರೆ ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್, ಬಿಜೆಪಿಗೆ ಸಿಗಬಹುದೇ ಮತ್ತೊಂದು ಸೀಟು?

Kerala Assembly Elections 2021: ಎಲ್​ಡಿಎಫ್ ಅಧಿಕಾರದಲ್ಲಿ ಮುಂದುವರಿದರೂ, ಅಧಿಕಾರದಿಂದ ಕೆಳಗಿಳಿದರೂ ಅದು ಕೇರಳ ರಾಜ್ಯ ರಾಜಕೀಯದಲ್ಲಿ ಮಹತ್ತರ ಸಂಗತಿಯಾಗಲಿದೆ. ಎಲ್​​ಡಿಎಫ್ ಅಧಿಕಾರದಲ್ಲಿ ಮುಂದುವರಿದರೆ ಕಮ್ಯೂನಿಸ್ಟ್ ಅಧಿಕಾರದಲ್ಲಿನ ಐತಿಹಾಸಿಕ ಘಟನೆಯಾಗಲಿದೆ.

ಎಲ್​ಡಿಎಫ್  ಮತ್ತೊಮ್ಮೆ ಅಧಿಕಾರಕ್ಕೇರಿದರೆ ಇತಿಹಾಸ, ಯುಡಿಎಫ್ ಬಂದರೆ ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್,  ಬಿಜೆಪಿಗೆ ಸಿಗಬಹುದೇ ಮತ್ತೊಂದು ಸೀಟು?
ಪಿಣರಾಯಿವಿಜಯನ್- ರಮೇಶ್ ಚೆನ್ನಿತ್ತಲ- ಕೆ.ಸುರೇಂದ್ರನ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 30, 2021 | 7:16 PM

ತಿರುವನಂತಪುರಂ: ಕೇರಳದಲ್ಲಿ ಎಲ್​ಡಿಎಫ್ ಐದು ವರ್ಷ ಅಧಿಕಾರ ಚಲಾಯಿಸಿದರೆ ಮುಂದಿನ ಐದು ವರ್ಷ ಯುಡಿಎಫ್ ಅಧಿಕಾರಕ್ಕೇರುತ್ತದೆ ಎಂಬ ಲೆಕ್ಕಾಚಾರ ಇಲ್ಲಿರುತ್ತಿತ್ತು. ಆದರೆ ಈ ಬಾರಿ ಎಲ್ ಡಿಎಫ್ ಮತ್ತೊಮ್ಮೆ ಅಧಿಕಾರಕ್ಕೇರಿ ಐದು ವರ್ಷ ಆಡಳಿತ ನಡೆಸಲಿದೆ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು.ಎಲ್ ಡಿ ಎಫ್ ಮತ್ತು ಯುಡಿಎಫ್ ಇವೆರಡು ಮೈತ್ರಿಕೂಟಗಳ ಜಿದ್ದಾಜಿದ್ದಿನ ಪೈಪೋಟಿ ನಡುವೆ ಬಿಜೆಪಿ ನೇತೃತ್ವದ ಮೈತ್ರಿಕೂಟವು ಹೆಚ್ಚಿನ ಸೀಟುಗಳನ್ನು ಗಳಿಸುವ ಪ್ರಯತ್ನವನ್ನು ಈ ಬಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿಯ ಪ್ರಮುಖ ನಾಯಕರು ಕೇರಳದಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಿದ್ದಾರೆ. 2016ರಲ್ಲಿ ಎಲ್​ಡಿಎಫ್ ವರುಂ, ಎಲ್ಲಾ ಶೆರಿಯಾವುಂ (ಎಲ್​ಡಿಎಫ್ ಅಧಿಕಾರಕ್ಕೆ ಬರುತ್ತದೆ,ಎಲ್ಲವೂ ಸರಿಯಾಗುತ್ತದೆ) ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಸ್ಪರ್ಧಿಸಿದ್ದ ಎಲ್ ಡಿಎಫ್ 140ಸೀಟುಗಳಿರುವ ಕೇರಳ ವಿಧಾನಸಭೆಯಲ್ಲಿ 91 ಸೀಟುಗಳ ಬಹುಮತದೊಂದಿಗೆ ಗದ್ದುಗೇರಿತ್ತು. ಈ ಬಾರಿ ಉರಪ್ಪಾಣ್ ಎಲ್​ಡಿಎಫ್ (ಎಲ್ ಡಿಎಫ್ ಖಚಿತ) ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಸ್ಪರ್ಧಿಸಿದ್ದ ಎಲ್​ಡಿಎಫ್ ಫಲಿತಾಂಶ ಪ್ರಕಟವಾಗುವ ಮುನ್ನವೇ ಅಧಿಕಾರಕ್ಕೇರುವುದು ನಿಚ್ಚಳ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಎಲ್​ಡಿಎಫ್ ಅಧಿಕಾರದಲ್ಲಿ ಮುಂದುವರಿದರೂ, ಅಧಿಕಾರದಿಂದ ಕೆಳಗಿಳಿದರೂ ಅದು ಕೇರಳ ರಾಜ್ಯ ರಾಜಕೀಯದಲ್ಲಿ ಮಹತ್ತರ ಸಂಗತಿಯಾಗಲಿದೆ. ಎಲ್​​ಡಿಎಫ್ ಅಧಿಕಾರದಲ್ಲಿ ಮುಂದುವರಿದರೆ ಕಮ್ಯೂನಿಸ್ಟ್ ಅಧಿಕಾರದಲ್ಲಿನ ಐತಿಹಾಸಿಕ ಘಟನೆಯಾಗಲಿದೆ. ಒಂದು ವೇಳೆ ಎಲ್​ಡಿಎಫ್ ಅಧಿಕಾರದಿಂದ ಕೆಳಗಿಳಿದು ಯುಡಿಎಫ್ ಅಧಿಕಾರಕ್ಕೇರಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಬಲತುಂಬಲಿದೆ. ಸದ್ಯ ಒಂದೇ ಒಂದು ಸೀಟು ಗೆದ್ದಿರುವ ಬಿಜೆಪಿ ಈ ಬಾರಿ ಸೀಟುಗಳ ಸಂಖ್ಯೆಯಲ್ಲಿ ಎರಡಂಕಿ ಗಳಿಸಲು ಪ್ರಯತ್ನಿಸಿದೆ. ಒಂದು ವೇಳೆ ಬಿಜೆಪಿ ಎರಡಂಕಿ ಸೀಟುಗಳನ್ನು ಗಳಿಸುವುದಾದರೆ ಯುಡಿಎಫ್ ಮತ್ತು ಎಲ್​ಡಿಎಫ್​ಗೆ ಅದೊಂದು ದೊಡ್ಡ ಸವಾಲಾಗಲಿದೆ.

ಸವಾಲುಗಳ ಐದು ವರ್ಷವನ್ನು ನಿಭಾಯಿಸಿದ ಎಡಪಕ್ಷ ಓಖಿ, ಎರಡು ಬಾರಿ ಪ್ರಳಯ ಮೊದಲಾದ ನೈಸರ್ಗಿಕ ವಿಪತ್ತು, ನಿಫಾ ಎಂಬ ಮಾರಣಾಂತಿಕ ರೋಗವನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ  ಎಲ್​ಡಿಎಫ್ ಸರ್ಕಾರ ಗೆದ್ದಿತ್ತು. ಭಾರತದಲ್ಲಿ ಮೊದಲ ಬಾರಿ ಕೊರಾನಾವೈರಸ್ ಪತ್ತೆಯಾಗಿದ್ದು ಕೂಡಾ ಕೇರಳದಲ್ಲಿ. ತಕ್ಷಣವೇ ಜಾಗೃತವಾದ ಕೇರಳ ಸರ್ಕಾರ ಕೊರೊನಾವೈರಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅಭಿಯಾನಗಳನ್ನು ಆರಂಭಿಸಿತ್ತು. ಲಾಕ್​ಡೌನ್ ಹೊತ್ತಲ್ಲಿ ಆಹಾರ ಕಿಟ್​ಗಳನ್ನು ವಿತರಿಸುವ ಮೂಲಕ, ಕಮ್ಯೂನಿಟಿ ಕಿಚನ್ ಮೂಲಕ ಹಸಿದವರಿಗೆ ಆಹಾರ ಪೂರೈಸುವ ವ್ಯವಸ್ಥೆ, ಪ್ರಾಣಿ ಪಕ್ಷಿಗಳಿಗೂ ಆಹಾರವುಣಿಸಲು ಪಡಿತರ, ವಲಸೆ ಕಾರ್ಮಿಕರಿಗಾಗಿ ವ್ವವಸ್ಥೆ, ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ಮೂಲಕ ಪಿಣರಾಯಿ ವಿಜಯನ್ ಜನರ ಪ್ರೀತಿ  ಗಳಿಸಿದರು.

ಪಿಣರಾಯಿ ವಿಜಯನ್ ಅವರ ನೇತೃತ್ವದ ಸರ್ಕಾರ ಮತ್ತೊಮ್ಮೆ ಮುಂದುವರಿಯುವುದಾದರೆ ಅದು ರಾಜ್ಯದ ಕಮ್ಯೂನಿಸ್ಟ್ ಇತಿಹಾಸದಲ್ಲಿ ದಾಖಲೆಯಾಗಲಿದೆ. ಕೇರಳ ಕಾಂಗ್ರೆಸ್ ಎಡಪಕ್ಷದೊಂದಿಗೆ ಸೇರಿರುವುದು ಎಲ್​ಡಿಎಫ್​ಗೆ  ಅನುಕೂಲವಾಗಿದೆ ಎಂದಾದರೆ ಜೋಸ್ .ಕೆ ಮಾಣಿ ಅವರ ರಾಜಕೀಯ ಸ್ಥಾನಮಾನ ಮತ್ತಷ್ಟು ಮೇಲಕ್ಕೇರಲಿದೆ. ಅದೇ ವೇಳೆ ಜೋಸ್.ಕೆ. ಮಾಣಿ ಅವರ ಪ್ರಭಾವ ಹೆಚ್ಚು ಕಾಣಿಸಿಕೊಂಡರೆ ಅದು ಸಿಪಿಐಗೆ ಹೊಡೆತವಾಗಲಿದೆ. ಸಿಪಿಐಯನ್ನು ಹೊರಗಿಟ್ಟು ಎಲ್​ಡಿಎಫ್ ಅಧಿಕಾರಕ್ಕೇರಿದರೆ ಅದು ಟೀಕೆಗೊಳಗಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಕೇರಳ ಕಾಂಗ್ರೆಸ್ ನಿಂದಾಗಿ ಎಡಪಕ್ಷಕ್ಕೆ ಯಾವುದೇ ಪ್ರಯೋಜನವುಂಟಾಗದಿದ್ದರೆ ಅದು ಆ ಪಕ್ಷಕ್ಕೆ ದೊಡ್ಡ ಹೊಡೆತವನ್ನೇ ನೀಡಲಿದೆ.

ಕಾಂಗ್ರೆಸ್ ಗೆದ್ದರೆ ರಾಷ್ಟ್ರ ರಾಜಕಾರಣಕ್ಕೆ ಪ್ಲಸ್ ಪಾಯಿಂಟ್ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಕೇರಳದಲ್ಲಿ ಅಧಿಕಾರಕ್ಕೇರಿದರೆ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಶಕ್ತಿ ತುಂಬಿದಂತಾಗುತ್ತದೆ. ಕೇರಳದ ಜತೆಗೆ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳದೇ ಇರುವ ಕಾರಣ ಕೇರಳದಲ್ಲಿ ಅಧಿಕಾರಕ್ಕಿದರೆ ಅದು ಪ್ಲಸ್ ಪಾಯಿಂಟ್ ಆಗಲಿದೆ.ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಗೆದ್ದರೆ ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಸಾಧ್ಯತೆಗಳನ್ನು ಸುಲಭ ಮಾಡುತ್ತದೆ.

ಕಾಂಗ್ರೆಸ್ ಪಕ್ಷದ ವಿವಿಧ ನಾಯಕರನ್ನು ಒಗ್ಗೂಡಿಸಿ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಪಕ್ಷವನ್ನು ಮುನ್ನಡೆಸಿದ ಕೀರ್ತಿ ವಿಪಕ್ಷ ನೇತಾರ  ರಮೇಶ್ ಚೆನ್ನಿತ್ತಲ ಅವರಿಗೆ ಸಲ್ಲುತ್ತದೆ. ಇದಲ್ಲದೇ ಇದ್ದರೆ ಸೋಲಿನ ಎಲ್ಲ ಹೊಣೆಯನ್ನು ಹೊರಬೇಕಾದ ಏಕೈಕ ವ್ಯಕ್ತಿಯೂ ಚೆನ್ನಿತ್ತಲ ಆಗಲಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯೂ ಪ್ರಚಾರ ನಡೆಸಿ ಕೇರಳದಲ್ಲಿ ಅಧಿಕಾರಕ್ಕೇರಲು ಸಾಧ್ಯವಾಗದೇ ಇದ್ದರೆ ಕಾಂಗ್ರೆಸ್ ಪುನರವಲೋಕನ ಮಾಡಿ ತಪ್ಪು ತಿದ್ದಿಕೊಳ್ಳಬೇಕಾಗಿ ಬರುತ್ತದೆ.

ಇಬ್ಬರ ಜಗಳದಲ್ಲಿ ಲಾಭ ಪಡೆಯುವುದೇ ಬಿಜೆಪಿ? 30 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ ಎಂಬ ಆತ್ಮ ವಿಶ್ವಾಸದಿಂದಲೇ 2016ರವರೆಗೆ ಬಿಜೆಪಿ ಕಣಕ್ಕಿಳಿದಿತ್ತು. ಆದರೆ ಈ ಬಾರಿ ಅಧಿಕಾರಕ್ಕೇರುತ್ತೇವೆ ಎಂಬ ವಿಶ್ವಾಸದಿಂದ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಮೆಟ್ರೊ ಮ್ಯಾನ್ ಇ.ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಘೋಷಿಸಿತು. ಎಡಪಕ್ಷ ಮತ್ತು ಕಾಂಗ್ರೆಸ್ ಅಧಿಕಾರದಿಂದ ಕಂಗೆಟ್ಟ ಜನ ಚೇಂಜ್ ಕೇಳ್ತಾರೆ ಎಂದು ಹೇಳುತ್ತಾ ಬಿಜೆಪಿ ಮತ ಯಾಚಿಸಿದೆ. ಶಬರಿಮಲೆ ವಿಷಯ, ಹಿಂದುತ್ವ, ಲವ್ ಜಿಹಾದ್ ಮೊದಲಾದ ವಿಷಯಗಳ ಬಗ್ಗೆಯೇ ಮಾತನಾಡಿದ್ದ ಬಿಜೆಪಿ, ಸ್ಟಾರ್ ಪ್ರಚಾರಕರ ಮೂಲಕ ಅಬ್ಬರ ದ ಚುನಾವಣಾ ಪ್ರಚಾರ ನಡೆಸಿದೆ. ಹೀಗಿರುವಾಗ ಕಳೆದ ಬಾರಿ ನೇಮಂ ವಿಧಾನಸಭಾ ಕ್ಷೇತ್ರದ ಮೂಲಕ ಒಂದು ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ ಎರಡಂಕಿ ದಾಟುವುದೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್

Exit Poll Results 2021: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ಗದ್ದುಗೆ ಯಾರಿಗೆ? ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರ ನೀಡುವ ಒಳನೋಟವೇನು?

Published On - 5:55 pm, Fri, 30 April 21