ಕೇರಳ ಸಿಎಂ ಪಿಣರಾಯಿ ವಿಜಯನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಲೋಕಾಯುಕ್ತರು ಭಾಗಿ?
ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತಕ್ಕೆ ಕಳುಹಿಸಲಾದ ಆಹ್ವಾನವು ಪ್ರಕರಣದಲ್ಲಿ ನೀಡಲಾದ ಪರಿಹಾರಕ್ಕಾಗಿ ಕೃತಜ್ಞತೆಯ ಅಭಿವ್ಯಕ್ತಿಯಾಗಿರಬಹುದು. ಒಂದು ವೇಳೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದರೂ ಅವರು ದೂರವಿರಬೇಕು ಎಂದು ಶಶಿ ಕುಮಾರ್ ಹೇಳಿದ್ದಾರೆ.
ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ (Iftar party) ಲೋಕಾಯುಕ್ತ ಭಾಗವಹಿಸಿದ್ದರು ಎಂಬ ವಿಷಯ ವಿವಾದಕ್ಕೆ ಕಾರಣವಾಗಿವೆ. ಏಪ್ರಿಲ್ 4 ರಂದು ಕೇರಳ ಅಸೆಂಬ್ಲಿಯಲ್ಲಿರುವ ಶಂಕರನಾರಾಯಣ ತಂಬಿ ಸಭಾಂಗಣದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ಉಪ ಲೋಕಾಯುಕ್ತ ಹರೂನ್ ರಶೀಫ್ ಭಾಗವಹಿಸಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಲೋಕಾಯುಕ್ತರಾಗಲೀ, ಸರ್ಕಾರವಾಗಲೀ ಇಫ್ತಾರ್ ಕೂಟದಲ್ಲಿ ಭಾಗವಹಿಸಿರುವುದನ್ನು ನಿರಾಕರಿಸಿಲ್ಲ. ಯುಡಿಎಫ್ ಸಂಸದ ಎನ್ ಕೆ ಪ್ರೇಮಚಂದ್ರನ್ ಮೊದಲು ಈ ರೀತಿ ಆರೋಪ ಮಾಡಿದ್ದಾರೆ. ನಂತರ, ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ (ಸಿಎಂಡಿಆರ್‌ಎಫ್) ದುರ್ಬಳಕೆ ಆರೋಪದ ಮೇಲಿನ ಪ್ರಕರಣದ ಅರ್ಜಿದಾರರಾದ ಆರ್‌ಎಸ್ ಶಶಿಕುಮಾರ್ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ.
ಸಿಎಂಡಿಆರ್‌ಎಫ್ ದುರ್ಬಳಕೆ ಪ್ರಕರಣದಲ್ಲಿ ಲೋಕಾಯುಕ್ತ ತೀರ್ಪು ನೀಡಿದ ಕೆಲ ದಿನಗಳ ನಂತರ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಸಿಎಂಗೆ ಮಧ್ಯಂತರ ಪರಿಹಾರ ನೀಡಿ ಲೋಕಾಯುಕ್ತ ಪೂರ್ಣ ಪೀಠಕ್ಕೆ ಒಪ್ಪಿಸಿತ್ತು. ತ್ರಿಸದಸ್ಯ ಪೀಠವು ಏಪ್ರಿಲ್ 12 ರಂದು ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.
ನಾನು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಂಡಿರುವುದಾಗಿ ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತಕ್ಕೆ ಕಳುಹಿಸಲಾದ ಆಹ್ವಾನವು ಪ್ರಕರಣದಲ್ಲಿ ನೀಡಲಾದ ಪರಿಹಾರಕ್ಕಾಗಿ ಕೃತಜ್ಞತೆಯ ಅಭಿವ್ಯಕ್ತಿಯಾಗಿರಬಹುದು. ಒಂದು ವೇಳೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದರೂ ಅವರು ದೂರವಿರಬೇಕು ಎಂದು ಶಶಿ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ; ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್
ಸಿಎಂ ಆಯೋಜಿಸಿದ್ದ ಕೂಟದಲ್ಲಿ ಲೋಕಾಯುಕ್ತರ ಉಪಸ್ಥಿತಿಯು ನ್ಯಾಯಾಂಗದ ವಿಷಯವನ್ನು ಪ್ರಶ್ನಿಸುತ್ತದೆ ಎಂದು ಪ್ರೇಮಚಂದ್ರನ್ ಹೇಳಿದ್ದಾರೆ. ಆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತರಿಗೆ ಆಹ್ವಾನ ನೀಡಿ ಅವರು ಇದರಲ್ಲಿ ಭಾಗವಹಿಸಿರುವುದು ಸರಿಯಲ್ಲ ಎಂದು ಪ್ರೇಮಚಂದ್ರನ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ