ಲೈಂಗಿಕ ದೌರ್ಜನ್ಯ, ಗರ್ಭಪಾತಕ್ಕೆ ಒತ್ತಾಯ; ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಕೇಸ್ ದಾಖಲು

ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯಿಸಿದ ಆರೋಪದಲ್ಲಿ ಕೇಸ್ ದಾಖಲಾಗಿದೆ. ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟಥಿಲ್ ಶುಕ್ರವಾರ ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ತಿರುವನಂತಪುರಂ ಜಿಲ್ಲಾ ನ್ಯಾಯಾಲಯವನ್ನು ಸಂಪರ್ಕಿಸಿದರು. ತಮ್ಮ ಅರ್ಜಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಮಮ್​​ಕೂಟಥಿಲ್ ಆ ಯುವತಿ ಮೇಲೆ ಅತ್ಯಾಚಾರ ಮತ್ತು ಗರ್ಭಪಾತ ಮಾಡಿಸಲು ಒತ್ತಾಯಿಸಿದ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸುವುದಾಗಿ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ, ಗರ್ಭಪಾತಕ್ಕೆ ಒತ್ತಾಯ; ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಕೇಸ್ ದಾಖಲು
Rahul Mamkootathil

Updated on: Nov 28, 2025 | 9:17 PM

ತಿರುವನಂತಪುರಂ, ನವೆಂಬರ್ 28: ಲೈಂಗಿಕ ಶೋಷಣೆಯ ಆರೋಪದ ಮೇಲೆ ಮಹಿಳೆಯೊಬ್ಬರು ದೂರು ದಾಖಲಿಸಿದ ನಂತರ ಕೇರಳದ ಕಾಂಗ್ರೆಸ್ (Congress) ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಕೇಸ್ ದಾಖಲಾಗಿದೆ. ಆರಂಭದಲ್ಲಿ ತಿರುವನಂತಪುರದ ವಲಿಯಮಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈಗ ಹೆಚ್ಚಿನ ತನಿಖೆಗಾಗಿ ನೆಮೊಮ್ ಉಪನಗರಕ್ಕೆ ವರ್ಗಾಯಿಸಲಾಗಿದೆ. ಈ ದೂರನ್ನು ನೇರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಾಯಿತು. ನಂತರ ಅವರು ಅದನ್ನು ಅಪರಾಧ ಶಾಖೆಗೆ ಸಲ್ಲಿಸಲು ಸೂಚಿಸಿದರು.

ಶಾಸಕರ ವಿರುದ್ಧದ ಪ್ರಕರಣವು ಗರ್ಭಪಾತಕ್ಕೆ ಒತ್ತಾಯಿಸುವುದು ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ್ದಾಗಿದೆ. ಈ ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾದ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್ 89ರ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿದೆ. ಅಪರಾಧ ವಿಭಾಗವು ಅವರ ವಿರುದ್ಧ ಕೇಸ್ ದಾಖಲಿಸಿದೆ. ಇದು ರಾಹುಲ್ ಮಮ್‌ಕೂಟಥಿಲ್ ಅವರ ಬಂಧನದ ಅಪಾಯವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಮಹಿಳಾ ಪೈಲಟ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೈಲಟ್

ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ರಾಹುಲ್ ಮಮ್‌ಕೂಟಥಿಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, “ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಇದನ್ನು ಕಾನೂನುಬದ್ಧವಾಗಿ ಎದುರಿಸುತ್ತೇನೆ. ಸತ್ಯವು ಯಾವಾಗಲೂ ಗೆಲ್ಲುತ್ತದೆ” ಎಂದಿದ್ದಾರೆ.

ಆ ಶಾಸಕ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ, ಗರ್ಭಪಾತಕ್ಕೆ ಒತ್ತಾಯಿಸುತ್ತಿರುವುದನ್ನು ತೋರಿಸುವ ಆಡಿಯೋ ಕ್ಲಿಪ್‌ಗಳು ಮತ್ತು ವಾಟ್ಸಾಪ್ ಸಂಭಾಷಣೆಗಳು ವೈರಲ್ ಆಗಿತ್ತು. ಈ ವಾರದ ಆರಂಭದಲ್ಲಿ ಈ ವಿಷಯಗಳು ವೈರಲ್ ಆಗಿದ್ದು, ರಾಜಕೀಯ ಚರ್ಚೆಯನ್ನು ತೀವ್ರಗೊಳಿಸಿತು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವಾಗ ಕಾಲು ಮುರಿದುಕೊಂಡ ವಕೀಲ!

ಕಾಂಗ್ರೆಸ್‌ನಿಂದ ಅಮಾನತುಗೊಂಡ ಮತ್ತು ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೊರತಾಗಿಯೂ ರಾಹುಲ್ ಮಮ್‌ಕೂಟಥಿಲ್ ಅವರು ಶಾಸಕರಾಗಿ ತಮ್ಮ ಸ್ಥಾನದಲ್ಲಿ ಮುಂದುವರೆದಿದ್ದಾರೆ ಮತ್ತು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಕಾನೂನುಬದ್ಧವಾಗಿ ಅರ್ಹರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ