ಕೋಯಿಕ್ಕೋಡ್ ಸೆಪ್ಟೆಂಬರ್ 13: ಕೇರಳದಲ್ಲಿ (Kerala) ಮಾವೋವಾದಿಗಳ ಹತ್ಯೆಯನ್ನು ವಿರೋಧಿಸಿ ಜುಲೈ 29 ರಿಂದ ನ್ಯಾಯಾಂಗ ಬಂಧನದಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ‘ಗ್ರೋ ವಾಸು’ (Grow Vasu)ಅವರನ್ನು ಕೋಯಿಕ್ಕೋಡ್ (Kozhikode) ನ್ಯಾಯಾಲಯ ಇಂದು (ಬುಧವಾರ) ಖುಲಾಸೆಗೊಳಿಸಿದೆ. ನವೆಂಬರ್ 26, 2016 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ನಕ್ಸಲ್, ತೊಂಬತ್ನಾಲ್ಕು ವರ್ಷದ ವಾಸು ಅವರನ್ನು ಏಳು ವರ್ಷಗಳ ನಂತರ ಜುಲೈ 29 ರಂದು ಬಂಧಿಸಲಾಗಿತ್ತು. ಅವರು ಮಾವೋವಾದಿಗಳ ಶವಗಳಿರುವ ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ. ನಿಲಂಬೂರಿನಲ್ಲಿ ಕೇರಳ ಪೊಲೀಸರ ಥಂಡರ್ ಬೋಲ್ಟ್ ಕಮಾಂಡೋಗಳೊಂದಿಗಿನ ಕಾಳಗದಲ್ಲಿ ಮೃತಪಟ್ಟವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಲ್ಲಿಗೆ ತರಲಾಗಿತ್ತು.
ಹಿರಿಯ ಕಾರ್ಯಕರ್ತ ಜಾಮೀನು ಪಡೆಯಲು ಅಥವಾ ಪ್ರಕರಣವನ್ನು ಇತ್ಯರ್ಥಗೊಳಿಸಲು ದಂಡ ಪಾವತಿಸಲು ನಿರಾಕರಿಸಿದ ನಂತರ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಘೋಷಣೆಗಳನ್ನು ಕೂಗಿದ್ದ ವಾಸುಗೆ ಪೊಲೀಸರು ಅಡ್ಡಿಪಡಿಸಲು ಯತ್ನಿಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.
ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ನಿಂದ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯವು ವಾಸು ಅವರನ್ನು ಖುಲಾಸೆಗೊಳಿಸಿತು.
46 ದಿನಗಳನ್ನು ಜೈಲಿನಲ್ಲಿ ಕಳೆದ ನಂತರ ಬಿಡುಗಡೆಯಾದ ವಾಸು, ಮಾವೋವಾದಿಗಳನ್ನು ನಕಲಿ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ತನ್ನ ನಿಲುವನ್ನು ಪುನರುಚ್ಚರಿಸಿದ್ದಾರೆ. 2016ರಲ್ಲಿ ನಿಲಂಬೂರಿನಲ್ಲಿ ಕೇರಳ ಪೊಲೀಸರ ಥಂಡರ್ ಬೋಲ್ಟ್ಸ್ ಕಮಾಂಡೋ ಮತ್ತು ಮಾವೋವಾದಿಗಳ ನಡುವಿನ ಕಾಳಗದಲ್ಲಿ ಇಬ್ಬರು ವ್ಯಕ್ತಿಗಳು ಹತರಾಗಿದ್ದರು. ಸಿಪಿಐ(ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಕುಪ್ಪು ದೇವರಾಜ್ ಮತ್ತು ಅಜಿತ್ ಗುಂಡಿನ ಕಾಳಗದಲ್ಲಿ ಸಾವಿಗೀಡಾಗಿದ್ದರು.
2016ರಲ್ಲಿ ಎಲ್‌ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಂಟು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ.ಇವೆಲ್ಲವೂ ನಕಲಿ ಎನ್‌ಕೌಂಟರ್‌ಗಳು ಎಂದು ವಾಸು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಹರಡಿರುವ ನಿಫಾ ವೈರಸ್ ಬಾಂಗ್ಲಾದೇಶ ತಳಿ; ಇದು ಕಡಿಮೆ ಸಾಂಕ್ರಾಮಿಕ ಆದರೆ ಮರಣ ಪ್ರಮಾಣ ಹೆಚ್ಚು
ಪಶ್ಚಿಮ ಘಟ್ಟದ ಎನ್‌ಕೌಂಟರ್ ಕೇರಳದ ಜನರಿಗೆ ಅವಮಾನಕರ ಘಟನೆಯಾಗಿದೆ. ಕಾಡು ಮೊಲಕ್ಕೆ ಗುಂಡು ಹಾರಿಸಿದ ರೀತಿಯಲ್ಲಿ 8 ವ್ಯಕ್ತಿಗಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ನಮ್ಮ ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ದಾಳಿ ಮಾಡಿದೆ. ಇದನ್ನು ಮಾಡಿದ್ದು ಪಿಣರಾಯಿ ಸರ್ಕಾರ, ಚೆಗುವೇರಾ ಅವರ ಪತಾಕೆ ಹಾರಿಸುವ ಮಾರ್ಕ್ಸ್‌ವಾದಿ ಸರ್ಕಾರ. ಅವರು ಏಳು ವರ್ಷಗಳ ಕಾಲ ಆ ಘಟನೆಯನ್ನು ನೆನೆಯಲು ಸಾಧ್ಯವಾಯಿತು. ಕೊಲ್ಲುವುದಕ್ಕಾಗಿಯೇ ಅವರು ಎದೆಗೆ ಗುಂಡು ಹಾರಿಸಿದರು. ತಾವು ಕಮ್ಯುನಿಸ್ಟರು ಎಂದು ಇವರು ಹೇಳುತ್ತಾ ತಿರುಗುತ್ತಿದ್ದಾರೆ. ಜನರಿಗೆ ಇದು ಅರ್ಥವಾಗುತ್ತಿಲ್ಲ. ಎರಡು ಬೇಡಿಕೆ ಮುಂದಿಡಲಾಗಿದೆ. ಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹಂತಕರಿಗೆ ಶಿಕ್ಷೆಯಾಗಬೇಕು. 100 ವರ್ಷ ಬದುಕಿದರೂ ನಾನು ಘೋಷಣೆ ಕೂಗುತ್ತೇನೆ ಎಂದು ಗ್ರೋ ವಾಸು ಹೇಳಿದ್ದಾರೆ.
ಮಾವೂರಿನಲ್ಲಿ Gwalior Rayon Organisation of Workers (GROW) ಮುಂಚೂಣಿ ಕಾರ್ಯಕರ್ತರಾಗಿದ್ದ ಅಯಿನೂರ್ ವಾಸು, ನಂತರ ಗ್ರೋವಾಸು ಆದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ